ಬೆಂಗಳೂರು: ‘ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡಿಗರ ತೆರಿಗೆ ಹಣದಲ್ಲಿ ವಲಸಿಗರಿಗೆ ಕನ್ನಡ ಕಲಿಸಲು ಮುಂದಾಗಿರುವುದು ದುರದೃಷ್ಟಕರ’ ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
‘ಪ್ರಾಧಿಕಾರದ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ ಆರಂಭದಲ್ಲೇ ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೇರೆ ರಾಜ್ಯಗಳಲ್ಲಿ ಆಯಾ ಪ್ರದೇಶದ ಭಾಷೆ ಕಲಿಸಲು ಸರ್ಕಾರಗಳು ಮುಂದಾಗಿರುವ ಉದಾಹರಣೆಗಳಿಲ್ಲ. ಅಲ್ಲಿನ ವಾತಾವರಣವೇ ಆ ರಾಜ್ಯದ ಭಾಷೆಯನ್ನು ವಲಸಿಗರು ಕಲಿಯುವಂತೆ ಮಾಡುತ್ತದೆ’ ಎಂದು ತಿಳಿಸಿದ್ದಾರೆ.
‘ಉದಾರಿಯಾದ ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಲಸಿಗರಿಗೆ ಕನ್ನಡ ಕಲಿಸಲು ಮುಂದಾಗಿದೆ. ಕನ್ನಡಿಗರ ತೆರಿಗೆ ಹಣದಲ್ಲಿ ಕನ್ನಡ ಕಲಿಸುವ ಕಾಯಕದ ಬದಲು, ವಲಸಿಗರು ತಾವಾಗಿಯೇ ಕನ್ನಡ ಕಲಿತು, ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಗೌರವಿಸುವ ವಾತಾವರಣ ನಿರ್ಮಿಸಲಿ’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.