ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ 1.30ವರೆಗೂ ಶವ ಸುಡುತ್ತಿರುವ ಚಿತಾಗಾರ ಕಾರ್ಮಿಕರು

ಕೋವಿಡ್‌ನಿಂದ ಸತ್ತವರ ಅಂತ್ಯಕ್ರಿಯೆಗೆ ಎದುರಾಗಿದೆ ಸವಾಲು * ಸಿಬ್ಬಂದಿ ಪಾಲಿಗೆ ಸುರಕ್ಷತೆ ಮರೀಚಿಕೆ
Last Updated 18 ಏಪ್ರಿಲ್ 2021, 4:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ತಳ ಹಂತದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿನಗರದಲ್ಲಿ ಒಂದೇ ಸಮನೆ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳಿಂದಾಗಿ ಹೈರಾಣಾಗಿದ್ದಾರೆ. ಇಲ್ಲಿ ಸಾಯುವವರನ್ನು ಉಳಿಸಿಕೊಳ್ಳುವುದು ಒಂದು ರೀತಿಯ ಸವಾಲಾದರೆ, ಸತ್ತವರ ಅಂತ್ಯಕ್ರಿಯೆಗೆ ಇನ್ನಷ್ಟು ಕಠಿಣ ಸಮಸ್ಯೆ ಎದುರಾಗಿದೆ.

ಕೋವಿಡ್‌ನಿಂದ ಸಾಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಬಿಎಂಪಿಯು ಕೋವಿಡ್‌ನಿಂದಾಗಿ ಸತ್ತವರ ಅಂತ್ಯಕ್ರಿಯೆ ನಡೆಸುವ ಚಿತಾಗಾರಗಳ ಸಂಖ್ಯೆಯನ್ನು 7ಕ್ಕೆ ಹೆಚ್ಚಿಸಿದೆ. ಈ ಹಿಂದೆ ಬಿಬಿಎಂಪಿ ಕೋವಿಡ್‌ನಿಂದ ಸತ್ತವರ ಅಂತ್ಯಕ್ರಿಯೆಗೆ ಮೇಡಿ ಅಗ್ರಹಾರ, ಪಣತೂರು, ಕೆಂಗೇರಿ ಹಾಗೂ ಕೂಡ್ಲು ಚಿತಾಗಾರಗಳಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸುಮನಹಳ್ಳಿ, ಪೀಣ್ಯ ಹಾಗೂ ಬನಶಂಕರಿಯ ವಿದ್ಯುತ್‌ ಚಿತಾಗಾರಗಳಲ್ಲೂ ಗುರುವಾರದಿಂದ ಅವಕಾಶ ಕಲ್ಪಿಸಲಾಗಿದೆ. ಇಷ್ಟಾಗಿಯೂ ಕೆಲವು ಚಿತಾಗಾರಗಳಲ್ಲಿ ನಿತ್ಯವೂ 20ಕ್ಕೂ ಅಧಿಕ ಶವಗಳ ಅಂತ್ಯಕ್ರಿಯೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆರು ದಿನಗಳಲ್ಲಿ ಕೋವಿಡ್‌ನಿಂದ ಸತ್ತ 380ಕ್ಕೂ ಅಧಿಕ ಮಂದಿಯ ಅಂತ್ಯಕ್ರಿಯೆ ನಡೆಸಲಾಗಿದೆ.

ಪ್ರತಿಯೊಂದು ವಿದ್ಯುತ್‌ ಚಿತಾಗಾರದಲ್ಲೂ ಶವ ಸುಡಲು ತಲಾ ಎರಡು ಯಂತ್ರಗಳಿರುತ್ತವೆ. ಒಂದು ಶವದ ಅಂತ್ಯಕ್ರಿಯೆಗೆ ಸರಾಸರಿ ಎರಡು ಗಂಟೆ ಬೇಕು. ಹಾಗಾಗಿ ಚಿತಾಗಾರದ ಕಾರ್ಮಿಕರು ಬೆಂಕಿಯ ಬೇಗೆ ನಡುವೆ ಹಗಲೂ ರಾತ್ರಿ ಕೆಲಸ ಮಾಡಬೇಕಾದ ಸ್ಥಿತಿ ಒದಗಿಬಂದಿದೆ ಎಂದು ಸುಮನಹಳ್ಳಿ ಚಿತಾಗಾರದ ಸಿಬ್ಬಂದಿ ಎನ್‌.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ಚಿತಾಗಾರದಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಶವಗಳ ಅಂತ್ಯಕ್ರಿಯೆ ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತರು (ಆರೋಗ್ಯ) ರಾಜೇಂದ್ರ ಚೋಳನ್‌ ಗುರುವಾರ (ಇದೇ 15ರಂದು) ಆದೇಶ ಮಾಡಿದ್ದಾರೆ. ಶವ ಸಾಗಿಸುವ ವಾಹನದ ವೆಚ್ಚ ಹಾಗೂ ಅಂತ್ಯಕ್ರಿಯೆಗೆ ತಗಲುವ ವೆಚ್ಚಗಳಿಗೆ ಸಂಪೂರ್ಣ ವಿನಾಯಿತಿ ನೀಡಿದ್ದಾರೆ. ಮೃತರ ಸಂಬಂಧಿಕರಿಂದ ಯಾವುದೇ ಶುಲ್ಕ ಪಡೆಯಬಾರದು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಆದೇಶದ ಪ್ರಕಾರ ನಾವು ರಾತ್ರಿ ಎಂಟು ಗಂಟೆ ಬಳಿಕ ಯಾವುದೇ ಶವಗಳ ಅಂತ್ಯಕ್ರಿಯೆ ನಡೆಸಬೇಕಿಲ್ಲ. ಆದರೆ, ಇಲ್ಲಿಗೆ ಮೃತದೇಹವನ್ನು ತಂದವರನ್ನು ಮರಳಿ ಕಳುಹಿಸುವುದು ಸಾಧುವೇ. ಸುಮನಹಳ್ಳಿ ಚಿತಾಗಾರದಲ್ಲಿ ಶನಿವಾರ ರಾತ್ರಿ 8ಗಂಟೆವರೆಗೆ ಒಟ್ಟು 14 ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಿದ್ದೇವೆ. ಇನ್ನೂ ಆರು ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಬೇಕಿದೆ. ಇವೆಲ್ಲವನ್ನೂ ಮುಗಿಸುವಾಗ ರಾತ್ರಿ 1.30 ದಾಟುತ್ತದೆ. ನಾಳೆ ಬೆಳಿಗ್ಗೆ ಮತ್ತೆ ಕೆಲಸಕ್ಕೆ ಬರಬೇಕು’ ಎಂದು ಅವರು ತಮ್ಮ ಸಂಕಷ್ಟ ತೋಡಿಕೊಂಡರು.

‘ಮೇಡಿ ಅಗ್ರಹಾರದ ಚಿತಾಗಾರದಲ್ಲಿ ರಾತ್ರಿ 8ರವರೆಗೆ 9 ಶವಗಳ ಅಂತ್ಯಕ್ರಿಯೆ ಬಾಕಿ ಇತ್ತು. ಮತ್ತೆರಡು ಶವಗಳನ್ನು ತಂದಿದ್ದಾರೆ. ಇವುಗಳ ಅಂತ್ಯಕ್ರಿಯೆ ಮುಗಿಯುವಷ್ಟರಲ್ಲಿ ಬೆಳಿಗ್ಗೆ ಆಗುತ್ತದೆ. ಒಂದಷ್ಟು ಶವಗಳ ಅಂತ್ಯಕ್ರಿಯೆಯನ್ನು ಬೇರೆ ಕಡೆ ನಡೆಸುವಂತೆ ಕೋರಿದರೂ ಕೇಳುತ್ತಿಲ್ಲ’ ಎಂದು ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.

ಚಿತಾಗಾರ ಸಿಬ್ಬಂದಿ ಮನುಷ್ಯರಲ್ಲವೇ?
‘ಚಿತಾಗಾರ ಸಿಬ್ಬಂದಿಗೆ ತಿಂಗಳಾನುಗಟ್ಟಲೆ ಸಂಬಳ ಪಾವತಿಸದ ಬಿಬಿಎಂಪಿ ಕಷ್ಟಕಾಲದಲ್ಲಿ ಅವರನ್ನು ರಾತ್ರಿ ಹಗಲೂ ದುಡಿಸಿಕೊಳ್ಳುತ್ತಿದೆ. ಅವರು ಮನುಷ್ಯರಲ್ಲವೇ’ ಎಂದು ಪ್ರಶ್ನಿಸುತ್ತಾರೆ ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆ.ಸುರೇಶ.

‘ತನ್ನ ವ್ಯಾಪ್ತಿಯ ಚಿತಾಗಾರಗಳಲ್ಲಿ ಹಾಗೂ ಸ್ಮಶಾನಗಳಲ್ಲಿ 360 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅವರಲ್ಲಿ 148 ಮಂದಿಯನ್ನು ಮಾತ್ರ ಬಿಬಿಎಂಪಿ ಸ್ಮಶಾನ ಕಾರ್ಮಿಕರು ಎಂದು ಪರಿಗಣಿಸಿದೆ. ಇವರು ನಿರ್ವಹಿಸುವ ಕಾರ್ಯವನ್ನು ಬೇರೆಯವರು ನಿರ್ವಹಿಸುವುದಿಲ್ಲ. ಇವರಿಗೆ ಕೋವಿಡ್‌ ಲಸಿಕೆಯನ್ನೂ ನೀಡಿಲ್ಲ. ಆರೋಗ್ಯ ಸುರಕ್ಷತಾ ಸಾಧನಗಳನ್ನೂ ಒದಗಿಸಿಲ್ಲ. ಇವರ ಜೀವನಕ್ಕೂ ಯಾವುದೇ ಭದ್ರತೆಯನ್ನೂ ಕಲ್ಪಿಸಿಲ್ಲ. ಯಾವುದೇ ಸವಲತ್ತು ನೀಡದೇ ಕೋವಿಡ್‌ನಿಂದ ಸತ್ತವರ ಹೆಣ ಸುಡಲು ಇವರನ್ನು ಬಳಸಿಕೊಳ್ಳುವ ಮೂಲಕ ಇವರ ಜೀವವನ್ನು ಪಣಕ್ಕಿಡುವುದು ಸರಿಯಲ್ಲ’ ಎಂದರು.

ಯೋಗಕ್ಷೇಮ ಕೇಳುವವರಿಲ್ಲ: ‘ಹೆಬ್ಬಾಳದ ಸ್ಮಶಾನದಲ್ಲಿ ಕಾರ್ಯನಿರ್ವಹಿಸುವ ಕೃಷ್ಣಪ್ಪ ಅವರಿಗೆ ಕೋವಿಡ್‌ ಕಾಣಿಸಿಕೊಂಡಿದೆ. ಅವರು ಚಿಕಿತ್ಸೆಗೆ ಹಾಸಿಗೆ ಪಡೆಯಲು ಸಮಸ್ಯೆ ಎದುರಿಸಬೇಕಾಯಿತು. ಅಂತ್ಯಕ್ರಿಯೆ ನಡೆಸುವಾಗ ಸುರಿದಿದ್ದ ತುಪ್ಪವನ್ನು ಮೆಟ್ಟಿ ಮೇಡಿ ಅಗ್ರಹಾರ ಚಿತಾಗಾರದ ಕಾರ್ಮಿಕ ರುದ್ರ ಬಿದ್ದುಬಿಟ್ಟರು. ಅವರ ಮೂಳೆ ಮುರಿದು ಚಿಕಿತ್ಸೆಗೆ ₹ 2.75 ಲಕ್ಷ ವೆಚ್ಚವಾಗಿದೆ. ಅದನ್ನು ಭರಿಸಲು ಬಿಬಿಎಂಪಿ ಮೀನಮೇಷ ಎಣಿಸುತ್ತಿದೆ. ಇದು ವಾಸ್ತವದ ಸ್ಥಿತಿ’ ಎಂದು ಅವರು ಬೊಟ್ಟುಮಾಡಿದರು.

‘ಪಿಪಿಇ ಕಿಟ್‌ ಇಲ್ಲ, ಯಾವ ಸುರಕ್ಷತೆಯೂ ಇಲ್ಲ’
ಕೋವಿಡ್‌ ಶವಗಳ ಅಂತ್ಯಕ್ರಿಯೆ ನಡೆಸುವ ಕಾರ್ಮಿಕರು ಪಿಪಿಇ ಕಿಟ್‌ ಧರಿಸಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಆದರೆ, ಚಿತಾಗಾರ ಸಿಬ್ಬಂದಿಗೆ ಪಿಪಿಇ ಕಿಟ್‌ ಪೂರೈಸುತ್ತಿಲ್ಲ.

‘ಪಿಪಿಇ ಕಿಟ್‌ ಬೇಕಾದರೆ ನಾವೇ ಆರ್‌.ಆರ್‌.ನಗರದ ಕಚೇರಿಗೆ ಹೋಗಿ ತರಬೇಕಂತೆ. ಅಲ್ಲಿಗೆ ಹೋಗಿಬಂದರೆ ಇಲ್ಲಿ ಶವಗಳ ಸಾಲು ಇನ್ನಷ್ಟು ಉದ್ದ ಬೆಳೆಯುತ್ತದೆ. ಹಾಗಾಗಿ ಮಾಸ್ಕ್‌ ಮಾತ್ರ ಧರಿಸಿ ನಾವು ಶವ ಸಂಸ್ಕಾರ ಮಾಡಿದ್ದೇವೆ’ ಎಂದು ಸುಮನಹಳ್ಳಿ ಚಿತಾಗಾರ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಪ್ರತಿ ಮೃತ ದೇಹದ ಜೊತೆಗೂ ಹತ್ತಿಪ್ಪತ್ತು ಬಂಧುಗಳಾದರೂ ಬರುತ್ತಾರೆ. ಅವರ ಬಳಕೆಗೆ ಇಲ್ಲಿ ಸ್ಯಾನಿಟೈಸರ್‌ ಒದಗಿಸಿಲ್ಲ. ಪ್ರತಿ ಶವದ ಅಂತ್ಯಕ್ರಿಯೆ ಬಳಿಕವೂ ಪರಿಸರ ಸ್ವಚ್ಛಗೊಳಿಸಬೇಕು. ಆ ಕಾರ್ಯವೂ ನಡೆಯುತ್ತಿಲ್ಲ’ ಎಂದರು.

**
ಜೀವವನ್ನೇ ಪಣಕ್ಕಿಟ್ಟು ರಾತ್ರಿ ಹಗಲು ಕೆಲಸ ಮಾಡುತ್ತಿರುವ ಚಿತಾಗಾರ ಸಿಬ್ಬಂದಿಯ ಸೇವೆಯನ್ನು ಬಿಬಿಎಂಪಿ ಕಾಯಂಗೊಳಿಸಬೇಕು. ಅವರಿಗೂ ಸವಲತ್ತುಗಳನ್ನು ನೀಡಬೇಕು. ಅವರ ಸುರಕ್ಷತೆಗೂ ಕ್ರಮ ಕೈಗೊಳ್ಳಬೇಕು.
-ಅ.ಸುರೇಶ, ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT