ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಹಸುಗೂಸು ಮಾರಾಟದ ವ್ಯಾಪಕ ಜಾಲ

ಬಾಡಿಗೆ ತಾಯಿ ಮೂಲಕ ಮಕ್ಕಳು ಕೊಡಿಸುವುದಾಗಿ ವಂಚನೆ: 13 ಮಕ್ಕಳ ರಕ್ಷಣೆ
Last Updated 6 ಅಕ್ಟೋಬರ್ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳಾಗದ ದಂಪತಿಗಳಿಗೆ ಬಾಡಿಗೆ ತಾಯಿ ಮೂಲಕ ಮಗು ನೀಡುವುದಾಗಿ ನಂಬಿಸಿ, ಬಳಿಕ ಯಾರದ್ದೋ ಮಗುವನ್ನು ಕೊಟ್ಟು ಲಕ್ಷಾಂತರ ಹಣ ಪಡೆಯುತ್ತಿದ್ದ ಜಾಲವನ್ನು ಬೇಧಿಸಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ವಿಶೇಷ ತಂಡ 13 ಮಕ್ಕಳನ್ನು ರಕ್ಷಿಸಿದೆ.

ಈ ಜಾಲದಲ್ಲಿ ಸಕ್ರಿಯರಾಗಿದ್ದ ಬೆಂಗಳೂರಿನ ವಿದ್ಯಾರಣ್ಯಪುರದ ದೇವಿ ಷಣ್ಮುಗಮ್ಮ (26), ಕತ್ರಿಗುಪ್ಪೆಯ ರಂಗಪ್ಪ ಲೇಔಟ್‌ ನಿವಾಸಿ ಮಹೇಶ್‌ಕುಮಾರ್‌ (50), ಮಹಾರಾಷ್ಟ್ರದ ರಂಜನಾ ದೇವಿದಾಸ ಖಂಡಗಳೆ (32), ತಮಿಳುನಾಡಿನ ಜನಾರ್ದನ್‌ (33) ಹಾಗೂ ಜಾಲಹಳ್ಳಿಯ ಮಲ್ಲಸಂದ್ರ ನಿವಾಸಿ ಧನಲಕ್ಷ್ಮಿ (30) ಎಂಬುವರನ್ನು ಬಂಧಿಸಲಾಗಿದೆ. ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಮಕ್ಕಳನ್ನುಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ಒಪ್ಪಿಸಲಾಗಿದೆ.

ಈ ಜಾಲದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವುದು ಗೊತ್ತಾಗಿದೆ. ಅವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐವಿಎಫ್‌ ಏಜೆಂಟ್‌ಗಳು: ‘ಆರೋಪಿಗಳೆಲ್ಲಾ ಐವಿಎಫ್‌ ಕೇಂದ್ರಗಳಲ್ಲಿ (ಇನ್‌ ವಿಟ್ರೊ ಫರ್ಟಿಲೈಜೇಷನ್‌) ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಬರುವವರ ಪೈಕಿ ಹಲವರಿಗೆ ₹30 ರಿಂದ ₹40 ಲಕ್ಷ ಹಣ ಪಾವತಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅಂತಹವರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು ಕಡಿಮೆ ಖರ್ಚಿನಲ್ಲಿ ಬಾಡಿಗೆ ತಾಯಿ ಮೂಲಕ ಮಗು ಕೊಡಿಸುವ ಆಮಿಷ ಒಡ್ಡುತ್ತಿದ್ದರು. ಅವರಿಂದ ವೀರ್ಯ ಸಂಗ್ರಹಿಸಿಕೊಂಡು, ಇತರೆ ಪರೀಕ್ಷೆಗಳನ್ನೂ ಮಾಡಿಸುತ್ತಿದ್ದರು. ಮಗು ಜನಿಸಿದ ಕೂಡಲೇ ಸುಪರ್ದಿಗೆ ನೀಡುವುದಾಗಿ ಹೇಳಿ ಹಣ ಪಡೆದುಕೊಳ್ಳುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಹಣ ಪಡೆದ ಬಳಿಕ ಸರಿಯಾಗಿ ಒಂಬತ್ತನೇ ತಿಂಗಳಿಗೆ ಕಾರ್ಯಪ್ರವೃತ್ತರಾಗುತ್ತಿದ್ದ ಆರೋಪಿಗಳು ಆಗಷ್ಟೇ ಜನಿಸಿದ ಹಸುಗೂಸಿಗಾಗಿ ಹುಡುಕಾಟ ನಡೆಸುತ್ತಿದ್ದರು. ಮಗು ಸಾಕಲು ಶಕ್ತರಲ್ಲದವರು, ಕೊಳೆಗೇರಿಗಳಲ್ಲಿ ವಾಸಿಸುವ ಕುಟುಂಬಗಳನ್ನು ಪತ್ತೆ ಮಾಡಿ ಅವರಿಂದ ಕಡಿಮೆ ಬೆಲೆಗೆ ಹಸುಗೂಸು ಖರೀದಿಸುತ್ತಿದ್ದರು. ಅದನ್ನು ಸಂಬಂಧಪಟ್ಟ ದಂ‍ಪತಿಗೆ ಒಪ್ಪಿಸುತ್ತಿದ್ದರು. ಅದು ಬಾಡಿಗೆ ತಾಯಿಯಿಂದಲೇ ಜನಿಸಿರುವ ಮಗು ಎಂದು ನಂಬಿಸುತ್ತಿದ್ದರು. ಬೆಂಗಳೂರು ಹಾಗೂ ಇತರ ಜಿಲ್ಲೆಗಳಷ್ಟೇ ಅಲ್ಲದೆಚೆನ್ನೈ ಹಾಗೂ ಮಹಾರಾಷ್ಟ್ರಕ್ಕೂ ಶಿಶುಗಳನ್ನು ಪೂರೈಸಿರುವ ಶಂಕೆ ಇದೆ. ಕಳೆದ ಐದು ವರ್ಷಗಳಿಂದ ಈ ಜಾಲ ಸಕ್ರಿಯವಾಗಿದೆ’ ಎಂದೂ ಹೇಳಿದ್ದಾರೆ.

ಶಿಶು ಕಳ್ಳತನ ಪ್ರಕರಣ ಬೆನ್ನಟ್ಟಿದಾಗ ಸಿಕ್ಕ ಮಾಹಿತಿ: ‘ಚಾಮರಾಜಪೇಟೆ ಆಸ್ಪತ್ರೆಯಿಂದ ಹಸುಗೂಸು ಕದ್ದು ಅದನ್ನು ಮಾರಾಟ ಮಾಡಿರುವ ಕುರಿತು ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಠಾಣೆಯ ಇನ್ಸ್‌ಪೆಕ್ಟರ್‌ ಮೀನಾಕ್ಷಿ ಅವರನ್ನೊಳಗೊಂಡ ತಂಡ ತನಿಖೆ ನಡೆಸಿದಾಗ ಇದೇ ಬಗೆಯ ಇತರ ಮೂರು ಪ್ರಕರಣಗಳ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತನಿಖೆ ವೇಳೆ ಆರೋಪಿ ಮಹೇಶ್‌ ಮನೆಯಲ್ಲಿ 28 ‘ತಾಯಿ ಕಾರ್ಡ್‌’ಗಳೂ ಸಿಕ್ಕಿದ್ದವು. ಅವುಗಳನ್ನು ಆತ ಕೆಂಗೇರಿ ಆಸ್ಪತ್ರೆಯಿಂದ ಪಡೆದುಕೊಂಡಿರುವುದೂ ಗೊತ್ತಾಗಿತ್ತು’ ಎಂದು ಹರೀಶ್‌ ಪಾಂಡೆ ತಿಳಿಸಿದ್ದಾರೆ.

‘ಇನ್ನೂ 18 ಮಕ್ಕಳನ್ನು ಮಾರಾಟ ಮಾಡಿರುವ ಶಂಕೆ ಇದೆ. ಅವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.ಆರೋಪಿಗಳು ಮಕ್ಕಳ ಅಗತ್ಯವಿದ್ದವರಿಂದ ಅವರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಹಣ ಪಡೆದಿದ್ದಾರೆ. ಆರೋಗ್ಯವಂತ ಮಗುವೊಂದಕ್ಕೆ ₹6 ಲಕ್ಷದವರೆಗೂ ಹಣ‍ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಪೋಷಕರಿಗೆ ₹80 ಸಾವಿರಕ್ಕೆ ಶಿಶು ಖರೀದಿಸುತ್ತಿದ್ದ ವಿಚಾರವನ್ನೂ ಬಾಯಿ ಬಿಟ್ಟಿದ್ದಾರೆ. ಮಗು ಆರೋಗ್ಯವಾಗಿದ್ದರೆ ಅದರ ಪಾಲಕರಿಗೆ ₹1 ಲಕ್ಷಕ್ಕೂ ಅಧಿಕ ಮೊತ್ತ ನೀಡುತ್ತಿದ್ದುದ್ದಾಗಿಯೂ ತಿಳಿಸಿದ್ದಾರೆ’ ಎಂದೂ ಮಾಹಿತಿ ನೀಡಿದರು.

‘ತಾವು ಮಗು ದತ್ತು ನೀಡುತ್ತಿರುವುದಾಗಿಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪತ್ರವನ್ನೂ ಬರೆಸಿದ್ದಾಗಿ ದೇವಿ ಷಣ್ಮುಗಮ್ಮ ತಿಳಿಸಿದ್ದಾಳೆ. ಈ ಕುರಿತೂ ತನಿಖೆ ನಡೆಸಲಾಗುತ್ತಿದೆ’ ಎಂದರು.

ಕೋವಿಡ್‌ನಿಂದ ಮೃತಪಟ್ಟಿರುವ ಮುಖ್ಯ ಆರೋಪಿ

‘ಈ ಪ್ರಕರಣದ ಪ್ರಮುಖ ಆರೋಪಿ ರತ್ನ. ಬೆಂಗಳೂರಿನ ನಿವಾಸಿಯಾಗಿರುವ ಆಕೆ ಇತ್ತೀಚೆಗೆ ಕೋವಿಡ್‌ನಿಂದ ಮೃತಪಟ್ಟಿದ್ದಾಳೆ. ಆಕೆ ಜೀವಂತವಾಗಿದ್ದರೆ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕಬಹುದಿತ್ತು. ರತ್ನ ಮತ್ತು ಮಹೇಶ್‌ಕುಮಾರ್‌ ಆತ್ಮೀಯ ಸ್ನೇಹಿತರಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಮಾರುವೇಷದ ಕಾರ್ಯಾಚರಣೆ

ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಮಾರುವೇಷದ ಕಾರ್ಯಾಚರಣೆ ನಡೆಸಿದ್ದರು.

‘ತಮಗೆ ಮಗು ಬೇಕು. ಅದಕ್ಕೆ ಎಷ್ಟೇ ಹಣ ಖರ್ಚಾದರೂ ಕೊಡಲು ಸಿದ್ಧರಿದ್ದೇವೆ ಎಂದು ಪೊಲೀಸ್‌ ಸಿಬ್ಬಂದಿ ಆರೋಪಿ ದೇವಿ ಷಣ್ಮುಗಮ್ಮಳನ್ನು ಸಂಪರ್ಕಿಸಿದ್ದರು. ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ದೇವಿ, ಮುಂಬೈನಿಂದ ರೈಲಿನ ಮೂಲಕ ಹಸುಗೂಸು ತರಿಸಿದ್ದಳು. ರೈಲು ನಿಲ್ದಾಣದಲ್ಲೇ ಆ ಮಗುವನ್ನು ಪೊಲೀಸರಿಗೆ ಒಪ್ಪಿಸಿ ಹಣ ಪಡೆಯಲು ಮುಂದಾಗಿದ್ದಳು. ಮಫ್ತಿಯಲ್ಲಿದ್ದ ಸಿಬ್ಬಂದಿ ಕೂಡಲೇ ಆಕೆಯನ್ನು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT