ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಪ್ರಕರಣ: ಪೊಲೀಸರನ್ನೇ ಅಪಹರಣಕಾರರೆಂದು ದಿಕ್ಕುತಪ್ಪಿಸಿದ

ತನಿಖೆಗೆ ಸಹಕರಿಸದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ವಶಕ್ಕೆ
Last Updated 2 ಸೆಪ್ಟೆಂಬರ್ 2021, 23:04 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ತನ್ನನ್ನು ಬಂಧಿಸಲು ಬಂದ ಪೊಲೀಸರನ್ನೇ ಅಪಹರಣಕಾರರೆಂದು ಹೇಳಿ ಸ್ಥಳೀಯರ ದಿಕ್ಕುತಪ್ಪಿಸಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಪೊಲೀಸರ ತನಿಖೆಗೆ ಸಹಕರಿಸದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಸ್ಥಳೀಯ ನಿವಾಸಿ ಭರತ್‌ ಹಾಗೂ ಪೊಲೀಸರ ಮಾಹಿತಿದಾರನೆಂದು ಹೇಳಿಕೊಳ್ಳುತ್ತಿದ್ದ ರತನ್‌ ಲಾಲ್‌ ಎಂಬಾತನನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಡ್ರಗ್ಸ್ ಮಾರಾಟ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯಾಗಿದ್ದ ಭರತ್‌ ತಲೆಮರೆಸಿಕೊಂಡಿದ್ದ. ಆತ, ಕಾಮಾಕ್ಷಿಪಾಳ್ಯದಲ್ಲಿರುವ ತನ್ನ ಮನೆಯಲ್ಲಿ ಅಡಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ, ಕುಮಾರಸ್ವಾಮಿ ಲೇಔಟ್ ಪೊಲೀಸರ ವಿಶೇಷ ತಂಡ ಮನೆ ಬಳಿ ಬಂದಿತ್ತು.’

‘ಮಫ್ತಿಯಲ್ಲಿದ್ದ ಪೊಲೀಸರನ್ನು ನೋಡಿದ್ದ ಭರತ್, ‘ನನ್ನನ್ನು ಅಪಹರಣ ಮಾಡಲು ಅಪರಿಚಿತರು ಬಂದಿದ್ದಾರೆ’ ಎಂದು ಕೂಗಾಡಿ ಸ್ಥಳೀಯರನ್ನು ಸೇರಿಸಿದ್ದ. ‘ನನ್ನನ್ನು ಕಾಪಾಡಿ’ ಎಂದು ಗೋಗರೆದಿದ್ದ ಆರೋಪಿ, ಪೊಲೀಸ್ ನಿಯಂತ್ರಣ ಕೊಠಡಿಗೂ ಕರೆ ಮಾಡಿದ್ದ.’

‘ಆರೋಪಿ ಮಾತು ನಂಬಿದ್ದ ಸ್ಥಳೀಯರು, ಪೊಲೀಸರ ಮೇಲೆಯೇ ಹರಿಹಾಯ್ದಿದ್ದರು. ಕಾಮಾಕ್ಷಿಪಾಳ್ಯ ಠಾಣೆಯ ಹೊಯ್ಸಳ ವಾಹನದ ಸಿಬ್ಬಂದಿ, ಸ್ಥಳಕ್ಕೆ ಹೋಗಿದ್ದರು. ಬಂಧಿಸಲು ಬಂದವರು ನೈಜ ಪೊಲೀಸರು ಎಂಬುದು ಗೊತ್ತಾಗುತ್ತಿದ್ದಂತೆ, ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಸಚಿವರ ಸಂಬಂಧಿಯೆಂದ ಆರೋಪಿ: ‘ತಾನು ಪೊಲೀಸರ ಮಾಹಿತಿದಾರನೆಂದು ಹೇಳಿಕೊಂಡು ರತನ್‌ಲಾಲ್ ಎಂಬಾತ ಸ್ಥಳಕ್ಕೆ ಬಂದಿದ್ದ. ಭರತ್‌ನನ್ನು ಬೆದರಿಸಿದ್ದ ಎನ್ನಲಾಗಿದೆ. ಆತನನ್ನು ಪೊಲೀಸರು ವಶಕ್ಕೆ ಪಡೆದಾಗ, ತಾನೊಬ್ಬ ಸಚಿವರ ಸಂಬಂಧಿಯೆಂದು ಹೇಳಿದ್ದಾನೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಎಂಟು ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿ
ಬೆಂಗಳೂರು:
ನಗರದ ಹಲವೆಡೆ ಅಪರಾಧ ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ಹಮೀದ್ ಎಂಬಾತ, ಎಂಟು ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ಕೊಲೆ, ಕೊಲೆ ಯತ್ನ, ಸುಲಿಗೆ ಹಾಗೂ ಮಾದಕ ವಸ್ತು ಮಾರಾಟ ಸೇರಿದಂತೆ 15 ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದ. ಆತನಿಗಾಗಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹುಡುಕಾಟ ನಡೆಸಲಾಗಿತ್ತು. ಇತ್ತೀಚೆಗೆ ಸಿಕ್ಕ ಸುಳಿವು ಆಧರಿಸಿ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ ಹಾಗೂ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಹೆಚ್ಚು ಕೃತ್ಯ ಎಸಗಿದ್ದ. ತನ್ನದೇ ಸಹಚರರ ತಂಡ ಕಟ್ಟಿಕೊಂಡು ಜನರನ್ನು ಬೆದರಿಸುತ್ತಿದ್ದ. ಮಾದಕ ವಸ್ತು ಮಾರಾಟದಲ್ಲೂ ತೊಡಗಿಸಿಕೊಂಡಿದ್ದ. ಆತನ ಜೊತೆ ಸಹೋದರನನ್ನೂ ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ತೂಕದಲ್ಲಿ ಜನರಿಗೆ ವಂಚನೆ; ಮೂವರು ವಶಕ್ಕೆ
ಬೆಂಗಳೂರು:
ತೂಕದ ಯಂತ್ರದಲ್ಲಿರುವ ಸಂಖ್ಯೆಗಳನ್ನು ಅಕ್ರಮವಾಗಿ ಬದಲಾಯಿಸಿ ಜನರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಹಲವು ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

‘ತೂಕ ಯಂತ್ರದ ತಂತ್ರಜ್ಞಾನವನ್ನು ಬದಲಿಸಿ ಸಂಖ್ಯೆಗಳನ್ನು ತಮ್ಮಿಷ್ಟದಂತೆ ಮಾರ್ಪಡಿಸಿ ಜನರನ್ನು ವಂಚಿಸಲಾಗುತ್ತಿತ್ತು. ಮಾನ್ಯತೆ ಪಡೆದ ಕಂಪನಿಯಿಂದ ಖರೀದಿಸಿದ್ದ ಯಂತ್ರಗಳನ್ನು ಅಕ್ರಮವಾಗಿ ಮಾರ್ಪಡಿಸುತ್ತಿದ್ದ ಆರೋಪದಡಿ ರವೀಂದ್ರ, ನಾಗೇಶ್ ಹಾಗೂ ರಾಘವೇಂದ್ರ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತರಕಾರಿ, ಮಾಂಸ ಮಾರಾಟ ಹಾಗೂ ಕಿರಾಣಿ ಅಂಗಡಿಗಳ ತೂಕದ ಯಂತ್ರಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಈ ಬಗ್ಗೆ ದೂರುಗಳು ಬಂದಿದ್ದವು. ಎಂಟು ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ, ಅಕ್ರಮ ಬಯಲಾಯಿತು.’

‘ಅಕ್ರಮದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆಗೆ ಬರುವಂತೆ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT