ಗುರುವಾರ , ಜನವರಿ 20, 2022
15 °C

ವಿಮಾನದಲ್ಲಿ ಬಂದು ಮನೆಗಳಲ್ಲಿ ಕಳ್ಳತನ: ₹1.80 ಕೋಟಿ ಮೌಲ್ಯದ ಆಭರಣಗಳು ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಮಾನದಲ್ಲಿ ಬಂದು ನಗರದ ಹಲವು ಮನೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಹೊರ ರಾಜ್ಯದ ಮೂವರು ಆರೋಪಿಗಳನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪಶ್ಚಿಮ ಬಂಗಾಳದ ಬಿಲಾಲ್ ಮಂಡಲ (33), ಮಹಾರಾಷ್ಟ್ರದ ಸಲೀಂ ರಫೀಕ್ ಶೇಖ್ (43) ಹಾಗೂ ಬಿಹಾರದ ಮೊಹಮ್ಮದ್ ಜಾಲಿಕ್ (36) ಬಂಧಿತರು. ಅವರಿಂದ ₹ 1.80 ಕೋಟಿ ಮೌಲ್ಯದ ಆಭರಣ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೆಲಸದ ಸ್ಥಳದಲ್ಲಿ ಪರಿಚಯವಾಗಿದ್ದ ಆರೋಪಿಗಳು, ತಮ್ಮದೇ ತಂಡ ಕಟ್ಟಿಕೊಂಡು ಕಳ್ಳತನ ಮಾಡುತ್ತಿದ್ದರು. ಇವರ ಬಂಧನದಿಂದ 24 ಪ್ರಕರಣಗಳು ಪತ್ತೆಯಾಗಿವೆ’ ಎಂದರು.

‘ತಮ್ಮೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ ಆರೋಪಿಗಳು ಇಲ್ಲಿಯ ಬಾಡಿಗೆ ಮನೆಗಳಲ್ಲಿ ವಾಸವಿರುತ್ತಿದ್ದರು. ನಗರದಲ್ಲಿ ಸುತ್ತಾಡಿ, ಅಂಗಳದಲ್ಲಿ ಕಸ ಬಿದ್ದಿರುತ್ತಿದ್ದ ಹಾಗೂ ಬೀಗ ಹಾಕಿರುತ್ತಿದ್ದ ಮನೆಗಳನ್ನು ಗುರುತಿಸುತ್ತಿದ್ದರು. ರಾತ್ರಿ ವೇಳೆ ಮನೆಗಳ ಬಾಗಿಲು ಮೀಟಿ ಒಳನುಗ್ಗಿ ಕಳ್ಳತನ ಮಾಡುತ್ತಿದ್ದರು' ಎಂದೂ ತಿಳಿಸಿದರು.

ಕ್ಯಾಮೆರಾ ದೃಶ್ಯದ ಸುಳಿವು; ‘ಕನಕಪುರ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಇತ್ತೀಚೆಗೆ ಕಳ್ಳತನ ಆಗಿತ್ತು. ಆ ಬಗ್ಗೆ ಪ್ರಕರಣ ದಾಖಲಾಗಿತ್ತು. ಮನೆ ಹಾಗೂ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿತ್ತು. ಅದರ ದೃಶ್ಯದಿಂದ ಆರೋಪಿಗಳ ಸುಳಿವು ಸಿಕ್ಕಿತ್ತು’ ಎಂದೂ ಅಧಿಕಾರಿ ಹೇಳಿದರು.

‘3 ಕೆ.ಜಿ 286 ಗ್ರಾಂ ಚಿನ್ನಾಭರಣ, 18 ಕೆ.ಜಿ. ಬೆಳ್ಳಿ ಸಾಮಗ್ರಿ, ₹ 46,700 ನಗದು, ದ್ವಿಚಕ್ರ ವಾಹನ, 24 ಕೈ ಗಡಿಯಾರಗಳು ಹಾಗೂ ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ಕದ್ದ ಆಭರಣಗಳನ್ನು ಆರೋಪಿಗಳು, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ಮಾರಿದ್ದರು. ಕೆಲ ಆಭರಣಗಳನ್ನು ಮುತ್ತೂಟ್ ಫೈನಾನ್ಸ್‌ನಲ್ಲಿ ಅಡವಿಟ್ಟಿದ್ದರು’ ಎಂದೂ ವಿವರಿಸಿದರು.

ವ್ಯಾಪಾರಿ ಸೋಗು: ‘ಕಳ್ಳತನದಿಂದ ಬಂದ ಹಣದಲ್ಲಿ ಆರೋಪಿಗಳು, ಐಷಾರಾಮಿ ಜೀವನ ನಡೆಸುತ್ತಿದ್ದರು. ತಮ್ಮೂರಿನಲ್ಲಿ ಶ್ರೀಮಂತರೆಂದು ಗುರುತಿಸಿಕೊಂಡಿದ್ದರು. ತಾವು ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಸ್ಥಳೀಯರಿಗೆ ಹೇಳುತ್ತಿದ್ದರು’ ಎಂದೂ ಅಧಿಕಾರಿ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು