ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಳಿಗಾಲದಲ್ಲಿ ನಳನಳಿಸುತಿದೆ ಕಬ್ಬನ್‌ ಉದ್ಯಾನ

ಮತ್ತೆ ವೇಗ ಪಡೆದ ಕಾಮಗಾರಿಗಳು: ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಕೆಲಸಗಳು ಈ ತಿಂಗಳ ಅಂತ್ಯಕ್ಕೆ ಪೂರ್ಣ
Last Updated 6 ಡಿಸೆಂಬರ್ 2022, 2:34 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿಲಿಕಾನ್‌’ ಸಿಟಿ ವಾಯುವಿಹಾರಿಗಳ ಸ್ವರ್ಗ, ಪ್ರೇಮಿಗಳ ನೆಚ್ಚಿನ ತಾಣ ಕಬ್ಬನ್‌ ಉದ್ಯಾನಕ್ಕೆ (ಜಯಚಾಮರಾಜೇಂದ್ರ ಒಡೆಯರ್‌ ಉದ್ಯಾನ) ಸ್ಮಾರ್ಟ್‌ ಸ್ಪರ್ಶ ನೀಡಲಾಗುತ್ತಿದೆ. ‘ಸ್ಮಾರ್ಟ್‌ಸಿಟಿ’ ಯೋಜನೆಯಡಿ ಉದ್ಯಾನದಲ್ಲಿ ಎರಡು ಹಂತಗಳಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು‍ ಶೇ 90ರಷ್ಟು ಪೂರ್ಣಗೊಂಡಿದ್ದು, ಡಿಸೆಂಬರ್‌ ಅಂತ್ಯಕ್ಕೆ ‘ಸ್ಮಾರ್ಟ್‌ ಉದ್ಯಾನ’ವಾಗಲಿದೆ.

ಉದ್ಯಾನದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಮೂಲ ಉದ್ದೇಶದೊಂದಿಗೆ ಮೂರು ವರ್ಷಗಳ ಹಿಂದೆ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. 2022 ಮೇ ಒಳಗೆ ಕಾಮಗಾರಿ ಮುಗಿಯಬೇಕಾಗಿತ್ತು. ಲಾಕ್‌ಡೌನ್‌ ಮತ್ತು ನಿರಂತರ ಸುರಿದ ಮಳೆಯಿಂದ ಕಾಮಗಾರಿಗಳ ವೇಗ ತಗ್ಗಿತ್ತು. ಇದರಿಂದ ಗಡುವಿನೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಬಹುತೇಕ ಎಲ್ಲಾ ಕಾಮಗಾರಿಗಳು ಮುಗಿದಿದ್ದು, ಉಳಿದ ಕಾಮಗಾರಿಗಳ ವೇಗ ಹೆಚ್ಚಿಸಲಾಗಿದೆ.

’ಮೊದಲ ಹಂತದ ಕಾಮಗಾರಿಯಲ್ಲಿ ಪಾದಚಾರಿ ಮಾರ್ಗ, ಕಾಲುವೆ, ಕಮಲದ ಕೊಳದ ಶುದ್ಧೀಕರಣ, ರಸ್ತೆಗಳ ಅಭಿವೃದ್ಧಿ ಮತ್ತು ಸೇತುವೆಗಳನ್ನು ನಿರ್ಮಿಸಲಾಗಿದ್ದು, ಅಂತಿಮ ಸ್ಪರ್ಶ ನೀಡುವ ಕೆಲಸಗಳಷ್ಟೇ ಬಾಕಿ ಉಳಿದಿವೆ. ಎರಡನೇ ಹಂತದ ಕಾಮಗಾರಿಯಲ್ಲಿ ಕರಗದ ಕುಂಟೆ, ಡ್ರೈ ಪಾಂಡ್, ಬಯೋ ಗ್ಯಾಸ್‌ ಪ್ಲಾಂಟ್‌, ನೂತನ ಬೆಂಚ್‌ಗಳನ್ನು ಅಳವಡಿಸುವುದು ಮತ್ತು ಟ್ರೀ ಮ್ಯಾಪಿಂಗ್‌ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಡಿಸೆಂಬರ್‌ ಅಂತ್ಯದೊಳಗೆ ಮುಗಿಯಲಿವೆ’ ಎಂದು ಕಬ್ಬನ್‌ ಉದ್ಯಾನ ಸ್ಮಾರ್ಟ್‌ಸಿಟಿ ಯೋಜನೆಯ ಸಹಾಯಕ ಎಂಜಿನಿಯರ್‌ ಶ್ರೀಗೌರಿ ಮಾಹಿತಿ ನೀಡಿದರು.

ಕಮಲದ ಕೊಳ: ಉದ್ಯಾನದಲ್ಲಿರುವ ಕಮಲದ ಕೊಳವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇದು 250ಕ್ಕೂ ಹೆಚ್ಚು ಬಗೆಯ ಪಕ್ಷಿಗಳ ಆವಾಸ ಸ್ಥಾನವೂ ಆಗಿತ್ತು. ಆದರೆ, 10–12 ವರ್ಷಗಳಿಂದ ಹೂಳು ತುಂಬಿಕೊಂಡು ಹದಗೆಟ್ಟ ಸ್ಥಿತಿಯಲ್ಲಿತ್ತು. ಕೊಳದ ನವೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ಹಂತದಲ್ಲೇ ಆದ್ಯತೆ ನೀಡಲಾಗಿತ್ತು.

‘ಎರಡು ಸಲ ಕೊಳ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದರೂ ಮಳೆ ನೀರು ತುಂಬಿಕೊಂಡು, ಕಾಮಗಾರಿಗೆ ತೊಡಕಾಗಿತ್ತು. ಸದ್ಯ ಕೊಳದಲ್ಲಿ ಸಂಗ್ರಹವಾಗಿದ್ದ ಹೂಳು ತೆಗೆದು ಅಭಿವೃದ್ಧಿಗೊಳಿಸಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಬಿದಿರು ಸಸಿಗಳ ನಡುವೆ ಮಳೆ ನೀರನ್ನು ನೇರವಾಗಿ ಹರಿಸಲು ಕೊಳಕ್ಕೆ ಸಂಪರ್ಕಿಸುವ ಸಣ್ಣ ಕಾಲುವೆಯೊಂದನ್ನೂ ನಿರ್ಮಿಸಲಾಗಿದೆ. ಇದನ್ನು ಮತ್ತಷ್ಟು ಅಂದಗೊಳಿಸಲು ಕಾಲುವೆಗೆ ಅಡ್ಡವಾಗಿ ಒಂದು ಕಿರುಸೇತುವೆ ನಿರ್ಮಾಣ ಮಾಡಿದ್ದು, ಕೊಳದ ಸುತ್ತಲೂ ಜನರ ಓಡಾಟಕ್ಕೆ ಪಾದಚಾರಿಮಾರ್ಗ ಹಾಗೂ ರಕ್ಷಣಾ ಬೇಲಿ ನಿರ್ಮಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಎಚ್.ಟಿ.ಬಾಲಕೃಷ್ಣ ವಿವರಿಸಿದರು.

‘ಸುಮಾರು ₹1.5 ಕೋಟಿ ವೆಚ್ಚದಲ್ಲಿ ಕಮಲದ ಕೊಳದ ಅಭಿವೃದ್ಧಿಯನ್ನು ಕಾಂಕ್ರೀಟ್‌ಮುಕ್ತವಾಗಿ ಮಾಡಲಾಗಿದೆ. ಸಾಧ್ಯವಾದಷ್ಟೂ ನೈಸರ್ಗಿಕ ರೂಪ‍ದಲ್ಲೇ ಕೊಳದ ನವೀಕರಣ ಮಾಡಲಾಗಿದ್ದು, ಕಾಲುವೆಯ ಬದಿಗಳು ಹಾಗೂ ಕೊಳದ ಖಾಲಿ ಜಾಗದಲ್ಲಿ ಆಲಂಕಾರಿಕ ಕಲ್ಲುಗಳನ್ನು ಆಕರ್ಷಕವಾಗಿ ಜೋಡಿಸಲಾಗಿದೆ’ ಎಂದರು.

ಪಾದಚಾರಿ ಮಾರ್ಗ ಹಾಗೂ ಜಾಗಿಂಗ್‌ ಟ್ರ್ಯಾಕ್: ಮೊದಲ ಹಂತದಲ್ಲಿ ₹8 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದ 8 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳ ನವೀಕರಣ ಕಾಮಗಾರಿಗಳು ಬಹುತೇಕ ಅಂತಿಮ ಹಂತಕ್ಕೆ ತಲುಪಿವೆ. ಬಾಲಭವನ ಮಾರ್ಗ ಹಾಗೂ ಪ್ರೆಸ್‌ಕ್ಲಬ್‌ ಮುಂಭಾಗದ ರಸ್ತೆಗಳಲ್ಲೂ ಹೊಸ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗಿದೆ.

ಟ್ರೀ ಮ್ಯಾಪಿಂಗ್‌, ಐಡೆಂಟಿಫಿಕೇಷನ್‌ ಆ್ಯಂಡ್‌ ಟ್ರೇಸಿಂಗ್‌: ಕಬ್ಬನ್‌ ಉದ್ಯಾನದಲ್ಲಿರುವ ಪ್ರತಿ ಮರದ ವಿವರಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ‘ಸ್ಮಾರ್ಟ್‌ಸಿಟಿ’ ಯೋಜನೆ ಅಡಿಯಲ್ಲಿ ₹23 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿತ್ತು. ಉದ್ಯಾನದ ಎಲ್ಲ ಮರಗಳ ಹೆಸರು, ಅವುಗಳ ಮೂಲ, ವೈಶಿಷ್ಟ್ಯ ಸಾರುವ ಫಲಕಗಳನ್ನು ಅಳವಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಕಬ್ಬನ್‌ ಉದ್ಯಾನದಲ್ಲಿ ವಿವಿಧ ಜಾತಿಯ 8,837 ಮರಗಳಿದ್ದು, 197ಕ್ಕೂ ಹೆಚ್ಚು ಪಾರಂಪರಿಕ ಪ್ರಭೇದಗಳಿವೆ. ಅವುಗಳ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲ. ಕಬ್ಬನ್ ಉದ್ಯಾನದಲ್ಲಿ ಬಹಳ ವರ್ಷಗಳಷ್ಟು ಹಳೆಯದಾದ ಸಾವಿರಾರು ಮರಗಳಿವೆ. ಪ್ರತಿ ಮರವೂ ವಿಭಿನ್ನವಾದ ಗುಣಲಕ್ಷಣಗಳನ್ನು ಒಳಗೊಂಡಿದೆ. ಹಲವು ಅಪರೂಪದ ಹಾಗೂ ಪಾರಂಪರಿಕ ಮರಗಳೂ ಉದ್ಯಾನದಲ್ಲಿದ್ದು, ಅವುಗಳ ಸಂಪೂರ್ಣ ವಿವರ ಸಿದ್ಧವಾಗಿದೆ. ಇದರಿಂದ ವಿದ್ಯಾರ್ಥಿಗಳು, ಪ್ರವಾಸಿಗರಿಗೆ ಮತ್ತು ವಾಯುವಿಹಾರಿಗಳಿಗೆ ಅನುಕೂಲವಾಗಲಿದೆ.

ಮರಕ್ಕೆ ಹಾನಿಯಾಗದಂತೆ ಫಲಕ: ‘ಈ ಯೋಜನೆಯಡಿ ಅಳವಡಿಸುವ ಫಲಕಗಳು ಮರಗಳಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ. ಮೊಳೆ ಹೊಡೆಯುವುದು, ರಾಸಾಯನಿಕ ಲೇ‍ಪನ ಸೇರಿ ಯಾವುದೇ ಅಪಾಯಕಾರಿ ವಿಧಾನಗಳನ್ನು ಬಳಸುವುದಿಲ್ಲ. ಫಲಕ ಅಳವಡಿಕೆಗೆ ಆಧುನಿಕ ವಿಧಾನ ಅನುಸರಿಸಲಾಗುವುದು. ಕಾಮಗಾರಿ ಕೈಗೊಂಡ ಸಂಸ್ಥೆ ಮರಗಳಿಗೆ ಜಿಪಿಎಸ್, ಕ್ಯೂಆರ್ ಕೋಡ್ ಅಳವಡಿಸುವ ಪ್ರಸ್ತಾವವನ್ನು ಸ್ಮಾರ್ಟ್‌ಸಿಟಿಯವರಿಗೆ ಸಲ್ಲಿಸಿದೆ. ಅದು ಮಾತುಕತೆಯ ಹಂತದಲ್ಲಿದ್ದು, ಇನ್ನೂ ಅಂತಿಮಗೊಂಡಿಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಎಚ್.ಟಿ.ಬಾಲಕೃಷ್ಣ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT