ಸೋಮವಾರ, ಸೆಪ್ಟೆಂಬರ್ 26, 2022
20 °C

ಟಿಪ್ಪು ಭಿತ್ತಿಚಿತ್ರಕ್ಕೆ ಹಾನಿ- ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಡಿಕೆಶಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: '75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪಕ್ಷ  ಆ. 15ರಂದು ಹಮ್ಮಿಕೊಂಡಿರುವ 'ಸ್ವಾತಂತ್ರ್ಯ ನಡಿಗೆ' ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಅಳವಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಕಟ್ಔಟ್ಅನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಈ ಘಟನೆ ಮನಸ್ಸಿಗೆ ನೋವು ತಂದಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. 

'ಪೊಲೀಸ್ ಅಧಿಕಾರಿಗಳಿದ್ದರೂ ಅದನ್ನು ಹರಿದಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಅವರು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಕೃತ್ಯ ಯಾರು ಎಸಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದರು.  

'ದೇಶದ ಪಾಲಿನ ಸಂಭ್ರಮದ ಸಂದರ್ಭವಿದು. ಈ ಸಮಯದಲ್ಲಿ ನಾವು ಶಾಂತಿ ಕಾಪಾಡಬೇಕು. ಕೆಲವು ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ನಾವು ವಿಚಲಿತರಾಗಬಾರದು' ಎಂದು ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು. 

ಟಿಪ್ಪು ಅವರ ಸ್ಮರಣೆ ಅಲ್ಪಸಂಖ್ಯಾತರ ಓಲೈಕೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, 'ಸ್ವಾತಂತ್ರ್ಯಕ್ಕಾಗಿ ಎಲ್ಲಾ ಸಮುದಾಯದವರೂ ಹೋರಾಟ ಮಾಡಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ವಿಚಾರ ಹೋರಾಟಗಾರರಲ್ಲಿ ಇತ್ತು, ಜಾತಿ, ಧರ್ಮದ ವಿಚಾರ ಅಲ್ಲ' ಎಂದರು. 

ಈ ವಿಚಾರವಾಗಿ ದೂರು ದಾಖಲಿಸಿದ್ದೀರಾ ಎಂಬ ಪ್ರಶ್ನೆಗೆ, 'ನಾವು ದೂರು ನೀಡುವ ಅಗತ್ಯವಿಲ್ಲ. ಸ್ಥಳದಲ್ಲೇ ಪೊಲೀಸರು ಇದ್ದರು. ಅವರು ಕ್ರಮ ಕೈಗೊಳ್ಳಬೇಕು' ಎಂದರು. 

'ಸರ್ಕಾರದ ಪುರಾತತ್ವ ಇಲಾಖೆ ಅಡಿಯಲ್ಲಿ ಟಿಪ್ಪು ಸುಲ್ತಾನ್ ಅರಮನೆ ಇದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶೇಷ ಅಲಂಕಾರ ಮಾಡಿ ಆಚರಣೆ ಮಾಡಲಾಗುತ್ತಿದೆ. ಆ ಮೂಲಕ, ಕೇಂದ್ರ ಸರ್ಕಾರ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದವರಿಗೆ ಗೌರವ ನೀಡುತ್ತಿದೆ' ಎಂದರು. 

'ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ನಮ್ಮ ಮೆಟ್ರೊ ಸಂಸ್ಥೆ ಎಲ್ಲ ರೀತಿಯ ಸಹಕಾರ ನೀಡಿದೆ. ನಾವು ಪಕ್ಷದ ವತಿಯಿಂದ ಹಣ ಪಾವತಿಸಿ ಟಿಕೆಟ್ ಖರೀದಿ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವವವರಿಗೆ ಉಚಿತವಾಗಿ ನೀಡುತ್ತಿದ್ದೇವೆ. ಬೆಂಗಳೂರಿಗೆ ವಿವಿಧ ಭಾಗಗಳಿಂದ ಬರುವವರು ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬರಲು ಹಾಗೂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಮುಕ್ತಾಯದ ನಂತರ ಹಿಂದಿರುಗಲು ಮೆಟ್ರೊ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು