ಭಾನುವಾರ, ಅಕ್ಟೋಬರ್ 24, 2021
25 °C

ದಾಸನಪುರ ಎಪಿಎಂಸಿಗೆ ಮತ್ತೆ ಗ್ರಹಣ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ದಾಸನಪುರದಲ್ಲಿ ನಿರ್ಮಿಸಿರುವ ಎಪಿಎಂಸಿಗೆ ಮತ್ತೊಮ್ಮೆ ಗ್ರಹಣ ಹಿಡಿದಿದೆ. ಕೋವಿಡ್ ಸಂದರ್ಭದಲ್ಲಿ ಕಳೆಗಟ್ಟಿದ್ದ ಈ ಮಾರುಕಟ್ಟೆ ಈಗ ಬಣಗುಡುತ್ತಿದೆ.

ಬೆಳೆಯುತ್ತಿರುವ ಬೆಂಗಳೂರನ್ನು ದೃಷ್ಟಿಯಲ್ಲಿಟ್ಟುಕೊಂಡು 2006ರಲ್ಲಿ ‌ದಾಸನಪುರ ಬಳಿ 67 ಎಕರೆ ಸ್ವಾಧೀನಪಡಿಸಿಕೊಂಡ ಸರ್ಕಾರ, ವಿಶಾಲವಾದ ಮಾರುಕಟ್ಟೆ ನಿರ್ಮಿಸಿತು. ಎ ಮತ್ತು ಬಿ ಬ್ಲಾಕ್ ಕಾಮಗಾರಿ ಪೂರ್ಣಗೊಂಡು 12 ವರ್ಷಗಳೇ ಕಳೆದಿದ್ದು, ಮಾರುಕಟ್ಟೆ ಮಾತ್ರ ಪರಿಪೂರ್ಣವಾಗಿ ಆರಂಭವಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ಜನ ಸಂದಣೆ ಕಡಿಮೆ ಮಾಡಲು ಈ ಮಾರುಕಟ್ಟೆಯನ್ನು ಸರ್ಕಾರ ಬಳಸಿಕೊಂಡಿತು. ಈರುಳ್ಳಿ–ಬೆಳ್ಳುಳ್ಳಿ ಮತ್ತು ಆಲೂಗಡ್ಡೆ ವರ್ತಕರನ್ನು ಯಶವಂತಪುರದಿಂದ ದಾಸನಪುರಕ್ಕೆ ಸಂಪೂರ್ಣವಾಗಿ ಸ್ಥಳಾಂತರ ಮಾಡಿತು.

ಕೋವಿಡ್ ಎರಡನೇ ಅಲೆ ಲಾಕ್‌ಡೌನ್ ಮುಗಿದ ಬಳಿಕ ಯಶವಂತಪುರಕ್ಕೆ ಮರಳಿ ಹೋಗುವ ಒತ್ತಾಯ ವರ್ತಕರಿಂದ ಆರಂಭವಾಯಿತು. ಪಕ್ಕದಲ್ಲೇ ನಿರ್ಮಾಣ ಹಂತದಲ್ಲಿರುವ ಸಿ ಬ್ಲಾಕ್ ಕಾಮಗಾರಿ ಮುಗಿಯುತ ತನಕ ಮಾತ್ರ ಯಶವಂತಪುರಕ್ಕೆ ಸ್ಥಳಾಂತರ ಆಗಲು ಅವಕಾಶ ನೀಡುವುದಾಗಿ ಕೃಷಿ ಮಾರುಕಟ್ಟೆ ಇಲಾಖೆ ಷರತ್ತು ವಿಧಿಸಿತ್ತು. ಈ ಷರತ್ತಿಗೆ ಒಪ್ಪಿದರೆ ಮಾತ್ರ ಸ್ಥಳಾಂತರಕ್ಕೆ ಅವಕಾಶ ನೀಡುವುದಾಗಿ ತಿಳಿಸಿತ್ತು.

ಆದರೆ, ಯಶವಂತಪುರದಲ್ಲಿ ಸ್ವಂತ ಮತ್ತು ಬಾಡಿಗೆ ಮಳಿಗೆ ಹೊಂದಿರುವ ವರ್ತಕರು ಅದಕ್ಕೆ ಒಪ್ಪಲಿಲ್ಲ. ಬಳಿಕ ಎಲ್ಲಾ ಷರತ್ತುಗಳನ್ನು ಸರ್ಕಾರ ವಾಪಸ್ ಪಡೆದು ಸ್ಥಳಾಂತರಕ್ಕೆ ಅವಕಾಶ ನೀಡಿದೆ. 309 ವರ್ತಕರು ದಾಸನಪುರದಿಂದ ಯಶವಂತಪುರಕ್ಕೆ ಮರಳಿ ವಹಿವಾಟು ಆರಂಭಿಸಿದ್ದಾರೆ. ಆದರೆ, ಅತ್ತ ದಾಸನಪುರ ಮಾರುಕಟ್ಟೆ ವಹಿವಾಟು ಸಂಪೂರ್ಣ ಕುಸಿದಿದೆ. ಯಶವಂತಪುರದಲ್ಲಿ ಮಳಿಗೆ ಇಲ್ಲದ ಶೇ 30ರಷ್ಟು ವರ್ತಕರು ಮಾತ್ರ ಅಲ್ಲಿ ಉಳಿದಿದ್ದು, ಮಾರುಕಟ್ಟೆ ಪ್ರಾಂಗಣವೇ ಖಾಲಿ ಖಾಲಿಯಾಗಿ ಕಾಣಿಸುತ್ತಿದೆ.

ಇಡೀ ಮಾರುಕಟ್ಟೆಯಲ್ಲಿ ಅಲ್ಲೊಂದು ಇಲ್ಲೊಂದು ಲಾರಿ ನಿಂತಿದ್ದರೆ, ವರ್ತಕರ ಮುಖದಲ್ಲಿ ದುಃಖ ಮಡುಗಟ್ಟಿದೆ. ಚೀಲ ಹೊರುವ ಹಮಾಲಿಗಳು ಮತ್ತು ಈರುಳ್ಳಿ ಬೇರ್ಪಡಿಸುವ ಕೆಲಸ ಮಾಡುವ ಮಹಿಳೆಯರು ಕೆಲಸವಿಲ್ಲದೆ ಖಾಲಿ ಕೈನಲ್ಲಿ ಕುಳಿತಿದ್ದಾರೆ. ಮಾರುಕಟ್ಟೆ ನಂಬಿ ಸುತ್ತಮುತ್ತ ತೆರೆದುಕೊಂಡಿರುವ ಅಂಗಡಿಗಳು, ಕ್ಯಾಂಟಿನ್‌ಗಳನ್ನು ನಡೆಸುವವರ ಮುಖಗಳೂ ಬಾಡಿ ಹೋಗಿವೆ.

ವಿಶಾಲವಾಗಿರುವ ಈ ಮಾರುಕಟ್ಟೆಯಲ್ಲಿ ರೈತರಿಗೆ, ಖರೀದಿದಾರರಿಗೆ ಮತ್ತು ವರ್ತಕರಿಗೆ ಅನುಕೂಲಗಳು ಹೆಚ್ಚಿವೆ. ಲಾರಿಗಳು ಯಾವುದೇ ದಟ್ಟಣೆಗೆ ಸಿಲುಕದೆ ಬಂದು ಹೋಗಬಹುದು. ಹಳ್ಳಿಗಳಿಂದ ಬರುವ ರೈತರು ನಗರದೊಳಗೆ ಬರದೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಆದರೆ, ವರ್ತಕರನ್ನು ಹಿಡಿದಿಟ್ಟುಕೊಳ್ಳಲು ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದು ದಾಸನಪುರದಲ್ಲಿ ಉಳಿದಿರುವ ವರ್ತಕರು ಬೇಸರ ವ್ಯಕ್ತಪಡಿಸುತ್ತಾರೆ.

309 ವರ್ತಕರು ಯಶವಂತಪುರಕ್ಕೆ ವಾಪಸ್ ಹೋಗಿ 10 ದಿನಗಳಾಗಿವೆ. ಕ್ರಮೇಣವಾಗಿ ರೈತರು ಯಶವಂತಪುರದ ಕಡೆಗೆ ಮುಖ ಮಾಡಿದ್ದಾರೆ. ಶನಿವಾರ ಯಶವಂತಪುರ ಮಾರುಕಟ್ಟೆಗೆ 26,911 ಚೀಲ ಈರುಳ್ಳಿ ಬಂದಿದ್ದರೆ, 16,875 ಚೀಲ ಆಲೂಗಡ್ಡೆ ಬಂದಿದೆ. ದಾಸನಪುರ ಮಾರುಕಟ್ಟೆಗೆ 24,664 ಚೀಲ ಈರುಳ್ಳಿ ಮತ್ತು 1,375 ಚೀಲ ಮಾತ್ರ ಆಲೂಗಡ್ಡೆ ಬಂದಿದೆ. ದಿನ ಕಳೆದಂತೆ ಇನ್ನೂ ಕಡಿಮೆಯಾಗಲಿದೆ ಎಂಬುದು ವರ್ತಕರು ಆತಂಕ.

ಸರ್ಕಾರ ನೀಡಿದ ಭರವಸೆ ನಂಬಿ ನಾಲ್ಕು ವರ್ಷಗಳಿಂದ ಸಾಲ ಮಾಡಿ ಅಂಗಡಿ ತೆರೆದಿದ್ದೇವೆ. ಈಗ ಮನೆ, ಆಸ್ತಿ ಮಾರಾಟ ಮಾಡುವ ಸ್ಥಿತಿ ಬಂದಿದೆ. ಎರಡು ಕಡೆ ಸಗಟು ಮಾರುಕಟ್ಟೆ ನಡೆಸಲು ಅವಕಾಶ ನೀಡಿದರೆ ರೈತರು ಮತ್ತು ಖರೀದಿದಾರರಿಗೆ ಗೊಂದಲ ಉಂಟಾಗಲಿದೆ. ಯಾವ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗಲಿದೆ ಎಂಬುದು ಗೊತ್ತಾಗದೆ ರೈತರು ನಷ್ಟ ಅನುಭವಿಸುವ ಸಾಧ್ಯತೆಯೂ ಇದೆ. ಇನ್ನು ನಗರದೊಳಗೇ ಉತ್ಪನ್ನಗಳು ಲಭ್ಯವಾದರೆ ಖರೀದಿದಾರರು ಈ ಮಾರುಕಟ್ಟೆಗೆ ಬರುವುದನ್ನೇ ನಿಲ್ಲಿಸುತ್ತಾರೆ. ಆಗ ಈ ಮಾರುಕಟ್ಟೆಯ ಉ‌ತ್ಪನ್ನಗಳಿಗೆ ಬೆಲೆ ಸಿಗದಂತಾಗಿ ರೈತರಿಗೆ ತೊಂದರೆ ಆಗಲಿದೆ. ಈ ರೀತಿಯ ಗೊಂದಲಮಯ ಸ್ಥಿತಿಯನ್ನು ಸರ್ಕಾರವೇ ಹುಟ್ಟು ಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇದು ದಾಸನಪುರ ಮಾರುಕಟ್ಟೆ ವರ್ತಕರ ಅಳಲಾದರೆ, ಯಶವಂತಪುರಕ್ಕೆ ಮರಳಿ ಬಂದಿರುವ ವರ್ತಕರು ಅಭಿಪ್ರಾಯ ಬೇರೆಯೇ ಇದೆ. ‘ಯಶವಂತಪುರದಲ್ಲಿ ಕೆಲವರು ಸ್ವಂತ ಮಳಿಗೆ ಹೊಂದಿದ್ದರೆ, ಹಲವರು ಬಾಡಿಗೆ ಮಳಿಗೆಯನ್ನು ಕೃಷಿ ಮಾರುಕಟ್ಟೆ ಇಲಾಖೆಯೇ ನೀಡಿದೆ. ಸ್ವಂತ ಮಳಿಗೆ ಬಿಟ್ಟು ದಾಸನಪುರದಲ್ಲಿ ಈಗಾಗಲೇ ಮಳಿಗೆ ಪಡೆದಿರುವ ವರ್ತಕರ ಮಳಿಗೆಯಲ್ಲೇ ನಾವೂ ವಹಿವಾಟು ನಡೆಸುವುದು ಹೇಗೆ’ ಎಂದು ಪ್ರಶ್ನಿಸುತ್ತಾರೆ.

ಕೃಷಿ ಮಾರುಕಟ್ಟೆ ಇಲಾಖೆಯ ಗೊಂದಲಮಯ ತೀರ್ಮಾನಗಳು, ದೂರದೃಷ್ಟಿ ಇಲ್ಲದ ಆಲೋಚನೆಗಳಿಂದ ಎರಡೂ ಮಾರುಕಟ್ಟೆಯ ವರ್ತಕರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.‌

ಅಂಕಿ–ಅಂಶ

67 ಎಕರೆ: ದಾಸನಪುರ ಮಾರುಕಟ್ಟೆಯ ವಿಸ್ತೀರ್ಣ

252: ಎರಡು ಬ್ಲಾಕ್‌ನಲ್ಲಿ ಇರುವ ಮಳಿಗೆ

4 ಕಿ.ಮೀ.: ತುಮಕೂರು ರಸ್ತೆಯಿಂದ ಇರುವ ದೂರ

ಸಂಪೂರ್ಣ ಸ್ಥಳಾಂತರ ಆದ ತರಕಾರಿ ಮಾರುಕಟ್ಟೆ

ಯಶವಂತಪುರದಲ್ಲಿ ಇದ್ದ ತರಕಾರಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ದಾಸನಪುರಕ್ಕೆ ಸ್ಥಳಾಂತರ ಮಾಡಲಾಗಿದೆ. ತರಕಾರಿ ವಹಿವಾಟಿಗೇ ಪ್ರತ್ಯೇಕ ಮಾರುಕಟ್ಟೆ ನಿರ್ಮಾಣವಾಗಿದೆ. ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರು ಯಶವಂತಪುರಕ್ಕೆ ಮರಳಿದರೂ, ತರಕಾರಿ ವ್ಯಾಪಾರಿಗಳು ದಾಸನಪುರದಲ್ಲಿನ ಸುಸಜ್ಜಿತ ಮಾರುಕಟ್ಟೆಯಲ್ಲೇ ಉಳಿದಿದ್ದಾರೆ. ಅದೇ ರೀತಿಯಲ್ಲಿ ಈರುಳ್ಳಿ–ಆಲೂಗಡ್ಡೆ ವಹಿವಾಟು ಒಂದೇ ಕಡೆ ನಡೆಯುವಂತೆ ಮಾಡಬೇಕು ಎಂಬುದು ದಾಸನಪುರ ವರ್ತಕರ ಒತ್ತಾಯ.

ಒಂದೇ ಮಾರುಕಟ್ಟೆ ಉಳಿಸಬೇಕು

ದಾಸನಪುರ ಮಾರುಕಟ್ಟೆ ಸುಸಜ್ಜಿತ ವ್ಯವಸ್ಥೆ ಇದೆ. ವಿಶಾಲವಾಗಿ ಇರುವುದರಿಂದ ರೈತರು, ವರ್ತಕರು ಮತ್ತು ಖರೀದಿದಾರರು ಸೇರಿ ಎಲ್ಲರಿಗೂ ಅನುಕೂಲ ಆಗಿತ್ತು. ಎರಡು ಮಾರುಕಟ್ಟೆ ಇದ್ದರೆ ನಗರದ ಮಧ್ಯಭಾಗದಲ್ಲಿ ಇರುವ ಯಶವಂತಪುರ ಮಾರುಕಟ್ಟೆಯಲ್ಲಿ ವಹಿವಾಟ ಚುರುಕಾಗುತ್ತದೆ. ಹೊರಭಾಗದಲ್ಲಿರುವ ದಾಸನಪುರ ಮಾರುಕಟ್ಟೆ ಮಂಕಾಗುತ್ತದೆ. ಹೀಗಾಗಿ, ಒಂದೇ ಮಾರುಕಟ್ಟೆಯನ್ನು ಉಳಿಸಬೇಕು. ಯಶವಂತಪುರದ ವರ್ತಕರನ್ನು ದಾಸನಪುರಕ್ಕೆ ಸ್ಥಳಾಂತರ ಮಾಡಲು ಆಗದಿದ್ದರೆ, ನಮ್ಮನ್ನೂ ಅಲ್ಲಿಗೇ ಸ್ಥಳಾಂತರ ಮಾಡಲಿ. ವ್ಯಾಪಾರ ಇಲ್ಲದೆ ನಾವು ಇಲ್ಲಿ ಕುಳಿತು ಏನು ಮಾಡಬೇಕು.

–ಶ್ರೀರಾಮ ರೆಡ್ಡಿ, ದಾಸನಪುರ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ

***

ಬಾಡಿಗೆ ಮನ್ನಾ ಮಾಡಬೇಕು

ನಾಲ್ಕು ವರ್ಷಗಳಿಂದ ಇಲ್ಲಿನ ವರ್ತಕರನ್ನು ಪ್ರಯೋಗದ ವಸ್ತುಗಳನ್ನಾಗಿ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಮನೆ–ಆಸ್ತಿ ಮಾರಾಟ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ. ವ್ಯಾಪಾರವೇ ಇಲ್ಲದಿರುವಾಗ ಬಾಡಿಗೆ ಕಟ್ಟಲು ಒತ್ತಾಯಿಸಲಾಗುತ್ತಿದೆ. ಪ್ರತಿ 11 ತಿಂಗಳಿಗೆ ಬಾಡಿಗೆ ಹೆಚ್ಚಳ ಮಾಡಲಾಗಿದೆ. ಪ್ರತಿ ಮಳಿಗೆಗೆ ₹20 ಸಾವಿರ ಇದೆ. ವಹಿವಾಟಿಲ್ಲದೆ ಬಾಡಿಗೆ ಕಟ್ಟುವುದು ಹೇಗೆ? ಮಾರುಕಟ್ಟೆ ಅಭಿವೃದ್ಧಿ ಆಗುವ ತನಕ ಬಾಡಿಗೆ ಮನ್ನಾ ಮಾಡಬೇಕು. ಒಂದೇ ಮಾರುಕಟ್ಟೆ ಮಾಡಿದರೆ ಬಾಡಿಗೆ ಪಾವತಿಸಲು ನಾವು
ಹಿಂಜರಿಯುವುದಿಲ್ಲ.

–ಪ್ರಸನ್ನ, ದಾಸನಪುರ ಎ‍ಪಿಎಂಸಿ ವರ್ತಕ

***

ಎರಡೂ ಮಾರುಕಟ್ಟೆ ಇರಲಿ

ಕೋವಿಡ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ದಾಸನಪುರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಸೋಂಕು ಹರಡುವುದನ್ನು ತಡೆಯುವ ಸಾರ್ವಜನಿಕ ಉದ್ದೇಶದಿಂದ ಮೂಲಸೌಕರ್ಯಗಳ ಕೊರತೆ ಇದ್ದರೂ ಸ್ಥಳಾಂತರಕ್ಕೆ ಒಪ್ಪಿದೆವು. ಮಳಿಗೆ ಇಲ್ಲದಿದ್ದರೂ ಸ್ನೇಹಿತರ ಅಂಗಡಿಗಳಲ್ಲಿ ಚೀಲ ಇಳಿಸಿಕೊಂಡು ವಹಿವಾಟು ನಡೆಸಿದೆವು. ಕೋವಿಡ್‌ ಕಡಿಮೆಯಾದ ಬಳಿಕ ನಮ್ಮ ಸ್ವಂತ ಮಳಿಗೆಗಳಿಗೆ ವಾಪಸ್ ಬರಲು ಷರತ್ತುಗಳನ್ನು ಸರ್ಕಾರ ವಿಧಿಸಿತ್ತು. ಸಚಿವರು ಮತ್ತು ಅಧಿಕಾರಿಗಲಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಷರತ್ತು ಕೈಬಿಟ್ಟು ಸ್ಥಳಾಂತರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಎರಡೂ ಮಾರುಕಟ್ಟೆ ಉಳಿಸಲಿ. ಕೆಲ ದಿನಗಳಷ್ಟೇ ತೊಂದರೆ ಆಗಲಿದೆ. ಕ್ರಮೇಣ ಎರಡೂ ಮಾರುಕಟ್ಟೆ ಅಭಿವೃದ್ಧಿ ಆಗುವುದರಲ್ಲಿ ಅನುಮಾನ ಇಲ್ಲ.

–ಉದಯಶಂಕರ್, ಯಶವಂತಪುರ ಎಪಿಎಂಸಿ(ಈರುಳ್ಳಿ ಮತ್ತು
ಆಲೂಗಡ್ಡೆ) ವರ್ತಕರ ಸಂಘದ ಕಾರ್ಯದರ್ಶಿ

***

ಕೆಲಸವೂ ಇಲ್ಲ, ದುಡಿಮೆಯೂ ಇಲ್ಲ

ಯಶವಂತಪುರಕ್ಕೆ ವರ್ತಕರು ಮರಳಿದ ಬಳಿಕ ಕೆಲಸ ಇಲ್ಲದೆ ಬರಿಗೈ ಆಗಿದ್ದೇವೆ. ದಿನಕ್ಕೆ ₹60 ಪ್ರಯಾಣ ದರ ಖರ್ಚು ಮಾಡಿಕೊಂಡು ಬರಬೇಕು. ಬೇರ್ಪಡಿಸಿಕೊಟ್ಟರೆ ರೈತರು ಕೊಡುವ ಈರುಳ್ಳಿ ಅಥವಾ ಆಲೂಗಡ್ಡೆಯನ್ನೇ ಮಾರಾಟ ಮಾಡಿಕೊಂಡು ಜೀವನ ಸಾಗಿಸಬೇಕು. ಈಗ ವಹಿವಾಟು ಕಡಿಮೆ ಆಗಿರುವುದರಿಂದ ಕೆಲಸವೇ ಇಲ್ಲವಾಗಿದೆ. ನಮ್ಮ ಕಷ್ಟ ಯಾರಿಗೆ ಹೇಳುವುದು

–ಲಕ್ಷ್ಮಿ, ಕಾರ್ಮಿಕ ಮಹಿಳೆ

***
ಎರಡೂ ಮಾರುಕಟ್ಟೆಯಲ್ಲೂ ವಹಿವಾಟು ಮುಂದುವರಿಸಲು ಸದ್ಯಕ್ಕೆ ಸರ್ಕಾರ ತೀರ್ಮಾನಿಸಿದೆ. ಸಿ ಬ್ಲಾಕ್ ಕಾಮಗಾರಿ ಪೂರ್ಣಗೊಂಡ ಬಳಿಕ ಏನು ಮಾಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಸರ್ಕಾರ ತೀರ್ಮಾನಿಸಲಿದೆ
- ಕರಿಗೌಡ, ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು