ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕತ್ತು ಹಿಸುಕಿ ಅತ್ತೆಯ ಕೊಂದು ಹೃದಯಾಘಾತ ನಾಟಕ: ಸೊಸೆ ಬಂಧನ

Published 18 ಅಕ್ಟೋಬರ್ 2023, 0:38 IST
Last Updated 18 ಅಕ್ಟೋಬರ್ 2023, 0:38 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಲಕ್ಕಮ್ಮ (52) ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಸೊಸೆ ರಶ್ಮಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಲಕ್ಕಮ್ಮ ಅವರನ್ನು ಕೊಲೆ ಮಾಡಿದ್ದ ಆರೋಪಿಗಳು, ಹೃದಯಾಘಾತವೆಂದು ನಾಟಕವಾಡಿದ್ದರು. ಲಕ್ಕಮ್ಮ ಅವರ ಮಗ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡು, ಆರೋಪಿ ರಶ್ಮಿ, ಪ್ರಿಯಕರ ಅಕ್ಷಯ್ ಹಾಗೂ ಪುರುಷೋತ್ತಮ್‌ನನ್ನು ಬಂಧಿಸಲಾಗಿದೆ’ ಎಂದು ಕಮಿಷನರ್ ಬಿ. ದಯಾನಂದ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಲಕ್ಕಮ್ಮ ಅವರ ಮಗ ಮಂಜುನಾಥ್, ಸಾಫ್ಟ್‌ವೇರ್ ಕಂಪನಿ ಉದ್ಯೋಗಿ. 10 ವರ್ಷಗಳ ಹಿಂದೆ ರಶ್ಮಿ ಜೊತೆ ಮದುವೆಯಾಗಿತ್ತು. ಬಹುಮಹಡಿ ಕಟ್ಟಡದಲ್ಲಿ ಮಂಜುನಾಥ್–ರಶ್ಮಿ ಕುಟುಂಬ ವಾಸವಿತ್ತು. ಅದೇ ಕಟ್ಟಡದ ಮೊದಲ ಮಹಡಿಯ ಮನೆಯಲ್ಲಿ ಆರೋಪಿ ಅಕ್ಷಯ್ ಬಾಡಿಗೆಗಿದ್ದ’ ಎಂದು ತಿಳಿಸಿದರು.

ಅಕ್ಷಯ್ ಜೊತೆ ಅಕ್ರಮ ಸಂಬಂಧ: ‘ಬಣ್ಣಗಳ ಮಾರಾಟ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್, ಮನೆಯಲ್ಲಿ ಒಬ್ಬನೇ ಇರುತ್ತಿದ್ದ. ಮಂಜುನಾಥ್ ಅವರು ನಿತ್ಯವೂ ಬೆಳಿಗ್ಗೆ ಕೆಲಸಕ್ಕೆ ಹೋದರೆ, ರಾತ್ರಿಯೇ ವಾಪಸು ಬರುತ್ತಿದ್ದರು. ರಶ್ಮಿ ಹಾಗೂ ಲಕ್ಕಮ್ಮ ಮಾತ್ರ ಮನೆಯಲ್ಲಿರುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರಶ್ಮಿ ಜೊತೆ ಅಕ್ಷಯ್ ಸ್ನೇಹ ಬೆಳೆಸಿದ್ದ. ನಂತರ, ಇಬ್ಬರ ನಡುವೆ ಅಕ್ರಮ ಸಂಬಂಧ ಏರ್ಪಟ್ಟಿತ್ತು. ಪತಿ ಕೆಲಸಕ್ಕೆ ಹೋಗುತ್ತಿದ್ದಂತೆ ಅಕ್ಷಯ್ ಜೊತೆ ರಶ್ಮಿ ಕಾಲ ಕಳೆಯುತ್ತಿದ್ದರು. ಆದರೆ, ಲಕ್ಕಮ್ಮ ಮನೆಯಲ್ಲಿದ್ದಾಗ ಅವರಿಬ್ಬರ ಏಕಾಂತಕ್ಕೆ ತೊಂದರೆ ಉಂಟಾಗುತ್ತಿತ್ತು’ ಎಂದು ತಿಳಿಸಿವೆ.

ನಿದ್ದೆ ಮಾತ್ರೆ ಬೆರೆಸಿದ್ದ ಮುದ್ದೆ ತಿನ್ನಿಸಿ ಕೊಲೆ: ‘ಚೀಟಿ ವ್ಯವಹಾರದಲ್ಲಿ ಲಕ್ಕಮ್ಮ ಹಾಗೂ ರಶ್ಮಿ ನಡುವೆ ಜಗಳವಾಗಿತ್ತು. ಅತ್ತೆ ಕೊಲ್ಲಲು ಯೋಚಿಸಿದ್ದ ರಶ್ಮಿ, ಅಕ್ಷಯ್‌ಗೆ ವಿಷಯ ತಿಳಿಸಿದ್ದರು. ‘ನಮ್ಮಿಬ್ಬರ ಸಂಬಂಧಕ್ಕೆ ಅತ್ತೆ ಅಡ್ಡಿಯಾಗುತ್ತಿದ್ದಾರೆ. ಅವರನ್ನು ಕೊಲೆ ಮಾಡಿದರೆ, ನಾವಿಬ್ಬರೂ ಚೆನ್ನಾಗಿ ಇರಬಹುದು’ ಎಂದು ಹೇಳಿದ್ದರು. ಅದಕ್ಕೆ ಅಕ್ಷಯ್ ಒಪ್ಪಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅ. 5ರಂದು ಮಧ್ಯಾಹ್ನ ನಿದ್ದೆ ಮಾತ್ರೆ ಬೆರೆಸಿ ರಾಗಿ ಮುದ್ದೆ ತಯಾರಿಸಿದ್ದ ರಶ್ಮಿ, ಅತ್ತೆ ಲಕ್ಕಮ್ಮ ಅವರಿಗೆ ತಿನ್ನಿಸಿದ್ದರು. ಇದರಿಂದಾಗಿ ಲಕ್ಕಮ್ಮ ನಿದ್ರೆಗೆ ಜಾರಿದ್ದರು. ಇದೇ ಸಂದರ್ಭದಲ್ಲಿ ಮನೆಗೆ ಬಂದಿದ್ದ ಅಕ್ಷಯ್ ಹಾಗೂ ಈತನ ಸ್ನೇಹಿತ ಪುರುಷೋತ್ತಮ್, ಕತ್ತು ಹಿಸುಕಿ ಲಕ್ಕಮ್ಮ ಅವರನ್ನು ಕೊಂದು ಸ್ಥಳದಿಂದ ಹೊರಟು ಹೋಗಿದ್ದರು’ ಎಂದು ತಿಳಿಸಿವೆ.

‘ಮನೆಯಲ್ಲಿ ಚೀರಾಡಿದ್ದ ರಶ್ಮಿ, ‘ನಮ್ಮ ಅತ್ತೆ ಹೃದಯಾಘಾತದಿಂದ ತೀರಿಕೊಂಡರು’ ಎಂದು ಸ್ಥಳೀಯರನ್ನು ಸೇರಿಸಿದ್ದರು. ಸಂಬಂಧಿಕರಿಗೂ ವಿಷಯ ಗೊತ್ತಾಗಿತ್ತು. ನಂತರ, ಮೃತದೇಹವನ್ನು ಸ್ವಂತ ಊರಾದ ಕುಣಿಗಲ್ ತಾಲ್ಲೂಕಿನ ಮುದಿಗೆರೆ ಶೆಟ್ಟಿಪಾಳ್ಯಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರವನ್ನೂ ನೆರವೇರಿಸಲಾಗಿತ್ತು. ಕೊಲೆ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ವಾಟ್ಸ್‌ಆ್ಯಪ್‌ ಚಾಟಿಂಗ್‌ ನೀಡಿದ ಸುಳಿವು:

‘ಕೊಲೆ ನಡೆದು 9 ದಿನಗಳ ನಂತರ ಅಕ್ಷಯ್ ಸ್ನೇಹಿತನೊಬ್ಬ, ಲಕ್ಕಮ್ಮ ಅವರ ಮಗನಿಗೆ ಮಾಹಿತಿ ನೀಡಿದ್ದರು. ‘ನಿಮ್ಮ ತಾಯಿಯನ್ನು ಪತ್ನಿ ಹಾಗೂ ಪ್ರಿಯಕರ ಅಕ್ಷಯ್ ಸೇರಿಕೊಂಡು ಕೊಂದಿದ್ದಾರೆ. ಈ ಬಗ್ಗೆ ಅವರಿಬ್ಬರು ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್ ಮಾಡಿರುವುದನ್ನು ನಾನು ನೋಡಿದ್ದೇನೆ’ ಎಂದಿದ್ದರು. ಅವಾಗಲೇ ಮಗ, ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ರಶ್ಮಿ ಹಾಗೂ ಅಕ್ಷಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಪ್ಪೊಪ್ಪಿಕೊಂಡರು. ನಂತರ, ಪುರುಷೋತ್ತಮ್ ಸಹ ಸಿಕ್ಕಿಬಿದ್ದ. ಇದೀಗ ಮೂವರನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT