ಮಂಗಳವಾರ, ಆಗಸ್ಟ್ 16, 2022
30 °C
ಮೇಯರ್‌ ಹುದ್ದೆ ಸಿಗದವರಿಗೆ ವಲಯ ಸಮಿತಿ ಅಧ್ಯಕ್ಷರಾಗಲು ಅವಕಾಶ – ಬಿಬಿಎಂಪಿ ಮಸೂದೆಯಲ್ಲಿ ಹೊಸ ಅಂಶ

ಅಧಿಕಾರ ವಿಕೇಂದ್ರೀಕರಣ– ವಲಯಕ್ಕೊಂದು ಸಮಿತಿ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆ ಆಗಲಿರುವ ‘ಬಿಬಿಎಂಪಿ ಮಸೂದೆ 2020’ ಅಧಿಕಾರ ವಿಕೇಂದ್ರೀಕರಣದ ಅನೇಕ ಅಂಶಗಳಿವೆ. ಮೇಯರ್‌ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಕೌನ್ಸಿಲ್‌ ರಚಿಸುವುದರ ಜೊತೆಗೆ ವಲಯ ಮಟ್ಟದಲ್ಲಿ ಪ್ರತ್ಯೇಕ ಸಮಿತಿ ರಚಿಸುವ ಬಗ್ಗೆ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಆಯಾ ವಲಯಗಳ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಅನುಷ್ಠಾನದ ಅಧಿಕಾರವನ್ನು ಈ ಸಮಿತಿಗೆ ವಹಿಸಲಾಗುತ್ತದೆ.

ಎಸ್‌.ರಘು ನೇತೃತ್ವದ ವಿಧಾನ ಮಂಡಲದ ಜಂಟಿ ಸಲಹಾ ಸಮಿತಿ ಅನುಮೋದಿಸಿರುವ ಈ ಹೊಸ ಮಸೂದೆಯಲ್ಲಿ ಮೇಯರ್‌ ಅಧಿಕಾರಾವಧಿ 30 ತಿಂಗಳುಗಳಿಗೆ ಹೆಚ್ಚಿಸಲಾಗುತ್ತಿದೆ. ಹಾಗಾಗಿ ಒಂದು ಅವಧಿಗೆ ಇಬ್ಬರಿಗೆ ಮಾತ್ರ ನಗರದ ಪ್ರಥಮ ಪ್ರಜೆಯಾಗುವ ಅವಕಾಶ ದಕ್ಕಲಿದೆ. ಮೇಯರ್‌ ಸ್ಥಾನದ ಆಕಾಂಕ್ಷಿಗಳು ಅಸಮಾಧಾನ ತಣಿಸಲು ವಲಯ ಸಮಿತಿ ಅಧ್ಯಕ್ಷರಾಗಲು ಅವಕಾಶ ಕಲ್ಪಿಸುವಂತಹ ಜಾಣ ಉಪಾಯವನ್ನು ಸಲಹಾ ಸಮಿತಿಯು ಮಸೂದೆಯಲ್ಲಿ ಪ್ರಸ್ತಾಪಿಸಿದೆ.

ವಲಯ ಸಮಿತಿಗಳಿಗೆ ಅದರ ವ್ಯಾಪ್ತಿಯ ವಾರ್ಡ್ ಒಂದರ ಪಾಲಿಕೆ ಸದಸ್ಯರು ಅಧ್ಯಕ್ಷರಾಗಲಿದ್ದಾರೆ. ಆಯಾ ವಲಯದ ವಾರ್ಡ್‌ಗಳ ಪಾಲಿಕೆ ಸದಸ್ಯರು ಅವರನ್ನು ಚುನಾಯಿಸಲಿದ್ದಾರೆ. ಈ ಸಮಿತಿ ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ಆಯಾ ವಲಯದಲ್ಲಿ ಯಾವ ಪಕ್ಷವು ಬಹುಮತ ಗಳಿಸಲಿದೆ ಎಂಬುದನ್ನು ಆಧರಿಸಿದೆ. ಪಾಲಿಕೆಯಲ್ಲಿ ಅಧಿಕಾರದಲ್ಲಿರದಿದ್ದರೂ  ಪಕ್ಷವೊಂದು ನಿರ್ದಿಷ್ಟ ವಲಯದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪಾಲಿಕೆ ಸದಸ್ಯರನ್ನು ಹೊಂದಿದ್ದರೆ, ಆ ಪಕ್ಷಕ್ಕೆ ವಲಯ ಸಮಿತಿ ಅಧ್ಯಕ್ಷ ಸ್ಥಾನ ಒಲಿಯಲಿದೆ. 

ಮೇಯರ್‌ ಅಧಿಕಾರಾವಧಿಯನ್ನು 30 ತಿಂಗಳಿಗೆ ಹೆಚ್ಚಿಸಿದ್ದರೂ, ವಲಯ ಸಮಿತಿ ಅಧ್ಯಕ್ಷರಾಗುವವರಿಗೆ ಈ ಅವಕಾಶ ಇಲ್ಲ. ಅವರ ಅಧಿಕಾರಾವಧಿ ಒಂದು ವರ್ಷಕ್ಕೆ ಸೀಮಿತ. ಒಮ್ಮೆ ಈ ಸಮಿತಿ ಅಧ್ಯಕ್ಷರಾಗಿ ಚುನಾಯಿತನಾಗುವ ವ್ಯಕ್ತಿ ಇನ್ನೊಂದು ಅವಧಿಗೆ ಅಧ್ಯಕ್ಷರಾಗುವಂತಿಲ್ಲ. ಹಾಗಾಗಿ ಸಹಜವಾಗಿಯೇ ಐದು ವರ್ಷದ ಅಧಿಕಾರಾವಧಿಯಲ್ಲಿ ವಲಯವೊಂದರಲ್ಲಿ ಐವರಿಗೆ ಸಮಿತಿ ಅಧ್ಯಕ್ಷರಾಗುವ ಅವಕಾಶ ಒಲಿಯಲಿದೆ.

ವಲಯ ಆಯುಕ್ತರು ಈ ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು ತಿಂಗಳಿಗೆ ಒಂದು ಬಾರಿಯಾದರೂ ಸಮಿತಿ ಸಭೆಯನ್ನು ನಡೆಸಲು ಕ್ರಮಕೈಗೊಳ್ಳಬೇಕು. ಈ ಸಭೆ ನಡೆಸಲು ಒಟ್ಟು ಸದಸ್ಯ ಬಲದ ನಾಲ್ಕನೇ ಒಂದಂಶ ಸದಸ್ಯರು ಹಾಜರಿರಬೇಕು. ಸಭೆಯ ನಡಾವಳಿಗಳನ್ನು ದಾಖಲಿಸಿ ಮುಖ್ಯ ಆಯುಕ್ತರಿಗೆ ಕಳುಹಿಸಿಕೊಡುವ ಹೊಣೆ ವಲಯ ಆಯುಕ್ತರದು.

ವಲಯ ಸಮಿತಿಗಳ ಕಾರ್ಯನಿರ್ವಹಣೆಗಾಗಿಯೇ ಪಾಲಿಕೆ ಕಚೇರಿಯನ್ನು ಹಾಗೂ ಸಿಬ್ಬಂದಿಯನ್ನು ಒದಗಿಸಲಿದೆ. 

ಕಸ ನಿರ್ವಹಣೆಯಲ್ಲಿ ಪರಿಣಿತರೊಬ್ಬರನ್ನು ಹಾಗೂ ನಗರ ಆಡಳಿತದ ತಜ್ಞರೊಬ್ಬರನ್ನು ಸಮಿತಿ ಸದಸ್ಯರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡಲಿದೆ. ಸಮಿತಿ ಸದಸ್ಯರಾಗುವವರಿಗೆ ಏನು ಅರ್ಹತೆಗಳಿರಬೇಕು, ಅವರ ಆಯ್ಕೆ ವಿಧಾನ ಹೇಗೆ, ಅವರಿಗೆ ಎಷ್ಟು ಗೌರವಧನ ನಿಗದಿಪಡಿಸಬೇಕು ಎಂಬ ಬಗ್ಗೆ ಸರ್ಕಾರ ಸೂಕ್ಕ್ತ ನಿಯಮ ರೂಪಿಸಲಿದೆ.

ಆ ವಲಯದ ಉಸ್ತುವಾರಿ ಯಾಗಿರುವ ಎಂಜಿನಿಯರ್‌, ಆಯಾ ವಲಯದ ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಜಲಮಂಡಳಿಯ ಕೆಲಸ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಳು, ವಾರ್ಡ್‌ಗಳ ಸಂಚಾರ ವ್ಯವಸ್ಥೆ ನಿರ್ವಹಣೆಯ ಹೊಣೆಹೊತ್ತ ಪೊಲೀಸ್‌ ಅಧಿಕಾರಿ ಹಾಗೂ ಬೆಸ್ಕಾಂ ಅಧಿಕಾರಿಗಳೂ ಸಮಿತಿಯ  ಅಧಿಕಾರೇತರ ಸದಸ್ಯರಾಗಿರುತ್ತಾರೆ. ಅವರಿಗೆ ಮತದಾನದ ಹಕ್ಕು ಇರುವುದಿಲ್ಲ.

ವಲಯಸಮಿತಿ ಅಂಗೀಕರಿಸುವ ಯೋಜನೆಗಳು ಕಾನೂನು ಬದ್ಧವಾಗಿರಬೇಕು. ನಿರ್ಣಯ ತಳೆಯುವಾಗ ಸಾಧ್ಯವಾದಷ್ಟು ಒಮ್ಮತದ ಅಭಿಪ್ರಾಯಕ್ಕೆ ಬರಬೇಕು. ಒಮ್ಮತದ ಅಭಿಪ್ರಾಯ ಸಾಧ್ಯವಿಲ್ಲದೇ ಇದ್ದಾಗ ನಿರ್ಣಯಗಳನ್ನು ಸದಸ್ಯರ ಮತಕ್ಕೆ ಹಾಕಿ ಬಹುಮತದ ಆಧಾರದಲ್ಲಿ ಕ್ರಮಕೈಗೊಳ್ಳಬೇಕು ಎಂಬ ಅಂಶವೂ ಮಸೂದೆಯಲ್ಲಿದೆ.

ಅನುದಾನ ಹಂಚಿಕೆ: ಬಿಬಿಎಂಪಿ ಬಜೆಟ್‌ನಲ್ಲಿ ನಿರ್ದಿಷ್ಟ ವಲಯಕ್ಕೆ ನಿಗದಿಪಡಿಸಲಾದ ಅನುದಾನವನ್ನು ವಲಯ ಸಮಿತಿಯು ವಾರ್ಡ್‌ ಸಮಿತಿಗಳಿಗೆ ಹಂಚಿಕೆ ಮಾಡಲಿದೆ. ಈ ಅನುದಾನಗಳ ಹಂಚಿಕೆ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿಯೇ ನಡೆಯಬೇಕು. ವಾರ್ಡ್‌ ಸಮಿತಿಯು ನಿಗದಿತ ಅವಧಿಯಲ್ಲಿ ಅದನ್ನು ಉಪಯೋಗಿಸಿಕೊಂಡು ಬಳಕೆ ಪ್ರಮಾಣ ಪತ್ರವನ್ನು  ವಲಯ ಸಮಿತಿಗೆ ಸಲ್ಲಿಸಬೇಕು.

ವಲಯ ಸಮಿತಿಯ ಕಾರ್ಯಗಳೇನು?

* ಬಿಬಿಎಂಪಿಯ ಯೋಜನೆಗಳು ಅಥವಾ ಕಾರ್ಯಕ್ರಮಗಳನ್ನು ಆ ವಲಯದ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವ ಉಸ್ತುವಾರಿ ನೋಡಿಕೊಳ್ಳುವುದು

* ಎಂಜಿನಿಯರ್‌ಗಳಿಗೆ ಅಥವಾ ಇತರ ಅಧಿಕಾರಿಗಳಿಗೆ ಯಾವುದೇ ಯೋಜನೆ ಅಥವಾ ಕಾರ್ಯಕ್ರಮ ಅನುಷ್ಠಾನಕ್ಕಾಗಿ ನಿರ್ದೇಶನ ನೀಡುವುದು

* ಕಸ ನಿರ್ವಹಣೆ, ಸಾರ್ವಜನಿಕ ಬೀದಿಗಳ ಅಭಿವೃದ್ಧಿ, ಉದ್ಯಾನಗಳೂ ಸೇರಿದಂತೆ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ, ವಲಯದ ಸಾರ್ವಜನಿಕ ಸ್ಥಳಗಳು ಆಹ್ಲಾದಕರ ನೋಟವನ್ನು ಹೊಂದಿರುವಂತೆ ನೋಡಿಕೊಳ್ಳುವುದು ಹಾಗೂ ಮುಂತಾದ ಮೂಲಸೌಕರ್ಯ ಯೋಜನೆಗಳಿಗೆ ಮಂಜೂರಾತಿ ನೀಡುವುದು

* ವಾರ್ಡ್‌ ಸಮಿತಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೈಗೊಂಡ ನಿರ್ಣಗಳನ್ನು ಪರಿಶೀಲಿಸಿ ಅವುಗಳ ಅನುಷ್ಠಾನಕ್ಕೆ ಪಾಲಿಕೆಗೆ ಶಿಫಾರಸು ಮಾಡುವುದು.

* ನಾಗರಿಕ ಪ್ರಜ್ಞೆಯನ್ನು ಮೂಡಿಸಲು  ಸಾರ್ವಜನಿಕ ಸಹಭಾಗಿತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು

* ಪಾಲಿಕೆಯು ಕಾಲ ಕಾಲಕ್ಕೆ ಗೊತ್ತುಪಡಿಸುವ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಳ್ಳುವುದು

ನಿರ್ಣಯ ರದ್ದುಪಡಿಸುವ ಅಧಿಕಾರ ಮುಖ್ಯ ಆಯುಕ್ತರಿಗೆ

ವಲಯ ಸಮಿತಿ ಕೈಗೊಳ್ಳುವ ನಿರ್ಣಯಗಳನ್ನು ಪರಾಮರ್ಶಿಸುವ ಹಾಗೂ ಅದನ್ನು ರದ್ದುಪಡಿಸುವ ಅಧಿಕಾರವನ್ನು ಮುಖ್ಯ ಆಯುಕ್ತರಿಗೆ (ಮಸೂದೆಯಲ್ಲಿ ಈಗಿನ ಬಿಬಿಎಂಪಿ ಆಯಕ್ತರ ಹುದ್ದೆಯನ್ನು ಮುಖ್ಯ ಆಯುಕ್ತರು ಹುದ್ದೆಯನ್ನಾಗಿ ಪರಿವರ್ತಿಸುವ ಪ್ರಸ್ತಾಪವಿದೆ) ನೀಡಲಾಗಿದೆ.  ಸಮಿತಿಯ ನಿರ್ಣಯ ಬಿಬಿಎಂಪಿ ಕಾಯ್ದೆಗೆ ಅಥವಾ ಪ್ರಸ್ತುತ ಅಸ್ತಿತ್ವದಲ್ಲಿರುವ ಇತರ ಕಾಯ್ದೆಗಳಿಗೆ ವಿರುದ್ಧವಾಗಿದೆ ಎಂದು ಮನಗಂಡರೆ ಮುಖ್ಯ ಆಯುಕ್ತರು ಅದನ್ನು ರದ್ದುಪಡಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು