ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟ ಪರಿಹರಿಸಲು ಮಹಾಲಕ್ಷ್ಮಿಗೆ ಮೊರೆ

ಕೋವಿಡ್‌ ನಡುವೆಯೂ ಕುಗ್ಗದ ಹಬ್ಬದ ಸಡಗರ * ದೇಗುಲಗಳಲ್ಲಿ ಪೂಜೆ * ಪಟಾಕಿ ಸಿಡಿಸಿ ಸಂಭ್ರಮಿಸಿದ ಮಕ್ಕಳು
Last Updated 15 ನವೆಂಬರ್ 2020, 21:38 IST
ಅಕ್ಷರ ಗಾತ್ರ

ಬೆಂಗಳೂರು:ಕೊರೊನಾ ಕರಿನೆರಳಿನ ನಡುವೆಯೂ ನಗರದಲ್ಲಿ ದೀಪಾವಳಿಯನ್ನು ಸಡಗರದಿಂದ ಆಚರಿಸಲಾಯಿತು. ಮೊದಲಿನ ಅದ್ಧೂರಿತನ ಇರದಿದ್ದರೂ, ಸಂಭ್ರಮಕ್ಕೆ ಮಿತಿ ಇರಲಿಲ್ಲ.

ಈ ಬಾರಿ ದೀಪಾವಳಿ ಅಮಾವಾಸ್ಯೆ ಎರಡು ದಿನ (ಶನಿವಾರ ಮತ್ತು ಭಾನುವಾರ) ಬಂದಿದ್ದು, ಎರಡೂ ದಿನವೂ ಪೂಜೆ–ಪುನಸ್ಕಾರಗಳು ನಡೆದವು. ಮನೆಯ ಮುಂದೆ ರಂಗೋಲಿ ಅರಳಿದರೆ, ಬಾಗಿಲುಗಳು ತಳಿರು–ತೋರಣಗಳಿಂದ ಕಂಗೊಳಿಸಿದವು. ಹಿರಿಯರು, ಮಕ್ಕಳಾದಿಯಾಗಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು.

ಮಾರುಕಟ್ಟೆಗಳಲ್ಲಿ ಬಾಳೆ ಕಂಬ, ಹೂವು–ಹಣ್ಣು, ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿ ಜೋರಾಗಿತ್ತು. ವಾಹನಗಳ ಪೂಜೆ ಭಾನುವಾರವೂ ಮುಂದುವರಿದಿತ್ತು.

ಪಟಾಕಿ ನಿಷೇಧಿಸಿದ್ದರಿಂದ ಬಹುತೇಕರು ಹಸಿರು ಪಟಾಕಿ ಅಥವಾ ಸುರ್‌ ಸುರ್‌ ಬತ್ತಿ, ಹೂಕುಂಡಗಳನ್ನು ಹಚ್ಚಿ ಸಂಭ್ರಮಿಸಿದರು.

ದೀಪಗಳ ಅಲಂಕಾರ:

ಸಂಜೆಯಾಗುತ್ತಿದ್ದಂತೆ ಮನೆಯ ಒಳಗೆ ಮತ್ತು ಹೊರಗೆ ದೀಪಗಳು ಬೆಳಗಿದವು. ವಿದ್ಯುತ್‌ದೀಪಗಳಿದ್ದ ಆಕಾಶಬುಟ್ಟಿಗಳು ಮನೆಗಳ ಅಂದವನ್ನು ಹೆಚ್ಚಿಸಿದ್ದವು. ಕೆಲವರು ನಡುಮನೆ, ದೇವರ ಮನೆಯ ಮುಂದೆ ಹೂವಿನ ರಂಗೋಲಿ ಹಾಕಿ ದೀಪಗಳನ್ನಿಟ್ಟು ಅಲಂಕರಿಸಿದ್ದರು.

ಹಲವು ಕಚೇರಿಗಳು, ಮಾರಾಟ ಮಳಿಗೆಗಳನ್ನೂ ಬಗೆ ಬಗೆಯ ವಿನ್ಯಾಸದ ನಾನಾ ಬಣ್ಣದ ಆಕಾಶಬುಟ್ಟಿಗಳಿಂದ ಅಲಂಕರಿಸಲಾಗಿತ್ತು. ಚಿನ್ನಾಭರಣ, ಬಟ್ಟೆ ಮಳಿಗೆಗಳು, ಮಾಲ್‌ಗಳು ಕೂಡ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದ್ದವು.

ಮಹಾಲಕ್ಷ್ಮಿ ದೇವಾಲಯ, ದುರ್ಗಾ ಪರಮೇಶ್ವರಿ‌ ದೇವಾಲಯ, ಇಸ್ಕಾನ್ ನ ಕೃಷ್ಣ ದೇಗುಲ, ಕೋಟೆ ವೆಂಕಟೇಶ್ವರ ದೇವಾಲಯ, ರಾಜರಾಜೇಶ್ವರಿ ದೇವಾಲಯ, ಸರ್ಕಲ್ ಮಾರಮ್ಮ, ತಿರುಪತಿ ತಿರುಮಲ ದೇವಸ್ಥಾನ, ಕಾಡುಮಲ್ಲೇಶ್ವರ ಮತ್ತಿತರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ದೇವಾಲಯಗಳ ಒಳ, ಹೊರಾಂಗಣ ಮತ್ತು ಗೋಪುರಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಸೋಮವಾರದಿಂದ ಕಾರ್ತಿಕ ಮಾಸ ಆರಂಭವಾಗುವುದರಿಂದ ಶಿವನ ದೇವಾಲಯಗಳಲ್ಲಿ ವಿಶೇಷ ದೀಪೋತ್ಸವ‌ ಹಾಗೂ ಆಚರಣೆಗಳು ಭಕ್ತರನ್ನು ಸೆಳೆಯಲಿವೆ‌.

ಶುಭಾಶಯ ವಿನಿಮಯ:

ಕೋವಿಡ್ ಕಾರಣದಿಂದ ಹೆಚ್ಚು ಜನ ಒಂದೆಡೆ ಸೇರಲು ಸಾಧ್ಯವಾಗದಿರುವ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿಯೇ ಹೆಚ್ಚು ಜನ ಶುಭಾಶಯ ವಿನಿಮಯ ಮಾಡಿಕೊಂಡರು. ವಾಟ್ಸ್ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಹಬ್ಬದ ಸಂದೇಶ ಸಾರುವ ಸಾಲುಗಳು, ಚಿತ್ರಗಳನ್ನು ಹಂಚಿಕೊಂಡರು. ದೇಶ ಮತ್ತು ರಾಜ್ಯ ಆದಷ್ಟು ಬೇಗ ಕೊರೊನಾ ಸೋಂಕು ಮುಕ್ತವಾಗಲಿ ಎಂಬ ಪ್ರಾರ್ಥನೆಯೇ ಪ್ರಮುಖವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT