ಪದವಿ ಕಾಲೇಜುಗಳಲ್ಲಿ ಕಲರವ

ಬೆಂಗಳೂರು: ಸುಮಾರು 9 ತಿಂಗಳುಗಳ ನಂತರ ನಗರದ ಪದವಿ ಕಾಲೇಜುಗಳ ಎಲ್ಲ ತರಗತಿಗಳಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಕಾಣಿಸಿಕೊಂಡರು. ಪ್ರಥಮ ವರ್ಷದ ಮತ್ತು ಪ್ರಥಮ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ಪದವಿ ಕಾಲೇಜು ಮೆಟ್ಟಿಲು ಹತ್ತಿದ್ದು, ಹೊಸ ಸ್ನೇಹಿತರನ್ನು ಕಂಡು ಖುಷಿ ಪಟ್ಟರು.
ಅಂತಿಮ ವರ್ಷದ ವಿದ್ಯಾರ್ಥಿಗಳು ಕಿರಿಯರನ್ನು ಸಂಭ್ರಮದಿಂದ ಸ್ವಾಗತಿಸಿದರು. ಆನ್‌ಲೈನ್ ತರಗತಿಯ ವ್ಯವಸ್ಥೆ ಇದ್ದರೂ, ಹೆಚ್ಚಿನ ವಿದ್ಯಾರ್ಥಿಗಳು ನೇರ ತರಗತಿ ಹಾಜರಾಗಲು ಉತ್ಸಾಹ ತೋರಿದರು.
ಉಳ್ಳಾಲುವಿನಲ್ಲಿರುವ ಆಕ್ಸಫರ್ಡ್ ಪಿಯು ಮತ್ತು ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಆರ್. ಸುಪ್ರೀತ್, ‘ ಬಹುತೇಕ ವಿದ್ಯಾರ್ಥಿಗಳು ಆಫ್‌ಲೈನ್ ತರಗತಿಗೆ ಹಾಜರಾಗಲು ಉತ್ಸಾಹ ತೋರುತ್ತಿದ್ದಾರೆ. ಸಂಪೂರ್ಣ ಭೌತಿಕ ತರಗತಿ ಆರಂಭಿಸಿ ಎಂದು ಮನವಿಯನ್ನೂ ಸಲ್ಲಿಸುತ್ತಿದ್ದಾರೆ. ಆದರೆ, ಆಫ್‌ಲೈನ್–ಆನ್‌ಲೈನ್ ಎರಡೂ ತರಗತಿ ನಡೆಸುವ ಆಯ್ಕೆ ಇರಬೇಕು ಎಂದು ಸರ್ಕಾರ ಹೇಳಿದೆ. ಅದನ್ನು ಪಾಲಿಸುತ್ತಿದ್ದೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಕಾಲೇಜು ಬಸ್‌ಗೆ ಬರಲು ಹಿಂದೇಟು:
‘ವಿದ್ಯಾರ್ಥಿಗಳಿಗಾಗಿ ಕಾಲೇಜಿನಿಂದ ಬಸ್ ವ್ಯವಸ್ಥೆಯನ್ನೂ ಮಾಡಿದ್ದೇವೆ. ಆದರೆ, ಬಹುತೇಕ ವಿದ್ಯಾರ್ಥಿಗಳು ಈ ಬಸ್‌ಗಳಿಗೆ ಬಾರದೆ, ಖಾಸಗಿ ವಾಹನಗಳಲ್ಲಿ ಶಾಲೆಗೆ ಬರುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ’ ಎಂದು ಖಾಸಗಿ ಕಾಲೇಜಿನ ಪ್ರಾಚಾರ್ಯರೊಬ್ಬರು ಹೇಳಿದರು.
‘ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನೇರ ತರಗತಿಯನ್ನು ಯಶಸ್ವಿಯಾಗಿ ನಡೆಸಿರುವುದರಿಂದ, ಉಳಿದ ತರಗತಿಗಳಿಗೆ ಕೋವಿಡ್ ಮಾರ್ಗಸೂಚಿಯಂತೆ ಪಾಠ ಮಾಡುವುದು ಸವಾಲು ಎನಿಸುವುದಿಲ್ಲ. ಅಂತರ ಕಾಪಾಡುವುದು ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಶೇಷಾದ್ರಿಪುರ ಸಂಜೆ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಎನ್.ಎಸ್. ಸತೀಶ್ ಹೇಳಿದರು.
ಕೋವಿಡ್ ಪರೀಕ್ಷೆ:
ಕೋವಿಡ್ ಲಕ್ಷಣ ಹೊಂದಿದವರಿಗೆ ಮಾತ್ರ ಪರೀಕ್ಷೆ ಮಾಡಿಸಬೇಕು ಎಂದು ಸರ್ಕಾರ ಹೇಳಿದ್ದರೂ, ಕೆಲವು ಖಾಸಗಿ ಕಾಲೇಜುಗಳು ಮುಂಜಾಗ್ರತಾ ಕ್ರಮವಾಗಿ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಿಸಲು ವ್ಯವಸ್ಥೆ ಮಾಡಿದ್ದವು. ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಉಚಿತವಾಗಿ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಲಾಯಿತು.
‘ವಿದ್ಯಾರ್ಥಿಗಳು ಮತ್ತು ಬೋಧಕರು ಯಾವುದೇ ಆತಂಕವಿಲ್ಲದೆ ತರಗತಿಗೆ ಹಾಜರಾಗಬೇಕು ಎಂಬ ಉದ್ದೇಶ ನಮ್ಮದು. ಕೋವಿಡ್ ಪರೀಕ್ಷೆ ಮಾಡಿಸಿಬಿಟ್ಟರೆ ಅವರು ನಿಶ್ಚಿಂತೆಯಿಂದ ಇರಬಹುದು ಎಂಬ ಉದ್ದೇಶದಿಂದ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದೇವೆ’ ಎಂದು ಖಾಸಗಿ ಕಾಲೇಜೊಂದರ ಪ್ರಾಚಾರ್ಯರು ಹೇಳಿದರು.
ಸಂಕ್ರಾಂತಿ ಸೇರಿದಂತೆ ಸರಣಿ ರಜೆ ಇದ್ದುದರಿಂದಲೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಸೋಮವಾರದಿಂದ ಹಾಜರಾಗಿ ಹೆಚ್ಚುವ ನಿರೀಕ್ಷೆ ಇದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.