ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಪರಿಶಿಷ್ಟ ಜಾತಿಗೆ ಕಾಟಿಕ್‌ ಸಮುದಾಯ ಸೇರಿಸಲು ಆಗ್ರಹ

Published 26 ಜುಲೈ 2023, 15:47 IST
Last Updated 26 ಜುಲೈ 2023, 15:47 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಕಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ಕಾಟಿಕ್ ಸಮಾಜ ಆಗ್ರಹಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಪ್ರಧಾನ ಸಂಚಾಲಕ ಆರ್.ಕೆ. ಸಿದ್ರಾಮಣ್ಣ, ‘ಕಾಟಿಕ್‌ (ಖಟಿಕ್) ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ರಾಜ್ಯದಲ್ಲಿ ಸಮುದಾಯವು ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇದೆ. ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಭಾಗದಲ್ಲಿ ನೆಲೆಸಿದ್ದು, ರಾಜಕೀಯವಾಗಿ ಹಿಂದುಳಿದಿದೆ. ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ, ರಾಜ್ಯದಲ್ಲಿ ಪ್ರಸ್ತುತ ಪ್ರವರ್ಗ 1 ಮತ್ತು 2ಎ ವರ್ಗದಲ್ಲಿರುವ ನಮ್ಮ ಎಲ್ಲ ಉಪಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘2011ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಡಾ.ಬಿ.ಆರ್. ಅಂಬೇಡ್ಕರ್‌ ಸಂಶೋಧನಾ ಸಂಸ್ಥೆಯ ಮೂಲಕ ಕುಲಶಾಸ್ತ್ರೀಯ ಅಧ್ಯಯನ ಮಾಡಲಾಗಿದೆ. ಕಾಟಿಕ್‌ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ವರದಿಯನ್ನು 2012ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕುಲಶಾಸ್ತ್ರೀಯ ಅಧ್ಯಯನದ ಮೇಲೆ ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.

‘ಈ ಸಮುದಾಯದ ಕುಲ ಕಸುಬು ಕುರಿ ಮತ್ತು ಮೇಕೆ ಮಾಂಸ ಮಾರಾಟ ಮಾಡುವುದಾಗಿದೆ. ರಾಜ್ಯದಲ್ಲಿ ಕಾಟಿಕ್, ಖಟಿಕ್, ಕಟುಗ, ಕಟುಕ, ಕಲಾಲ್, ಸೂರ್ಯವಂಶ ಕ್ಷತ್ರಿಯ, ಹಿಂದೂ ಕಲಾಲ್, ಹಿಂದೂ ಕಟಿಕ್, ಶೇರಗಾರ, ಆರೇ, ಅರೆಕಸಾಯಿ, ಅರೆಕಟಿಕಲ್ಲು, ಕಲಾಲ್ ಕಟಿಕ್, ಕಸಾಬ್, ಕಸಾಯಿ, ಮರಟ್ಟಿ ಎಂಬ ಹೆಸರುಗಳಿಂದು ಸಮುದಾಯವನ್ನು ಗುರುತಿಸಲಾಗುತ್ತಿದೆ’ ಎಂದರು.

ಸಂಚಾಲಕರಾದ ವೆಂಕಟ್, ರಾಜು, ಹನುಮಂತ ರಾವ್, ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT