ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆ ಬಟ್ಟೆ ಧರಿಸಿ ಬಂದಿದ್ದ ವ್ಯಕ್ತಿಗೆ ನಮ್ಮ ಮೆಟ್ರೊ ಪ್ರಯಾಣಕ್ಕೆ ನಿರಾಕರಣೆ!

ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ಘಟನೆ: ಬಿಎಂಆರ್‌ಸಿಎಲ್ ಸ್ಪಷ್ಟನೆ: ಭದ್ರತಾ ಮೇಲ್ವಿಚಾರಕ ಸೇವೆಯಿಂದ ವಜಾ
Published 26 ಫೆಬ್ರುವರಿ 2024, 9:48 IST
Last Updated 26 ಫೆಬ್ರುವರಿ 2024, 9:48 IST
ಅಕ್ಷರ ಗಾತ್ರ

ಬೆಂಗಳೂರು: ‘ಬಟ್ಟೆ ಗಲೀಜಾಗಿದೆ’ ಎಂಬ ಕಾರಣಕ್ಕೆ ಪ್ರಯಾಣಿಕರೊಬ್ಬರನ್ನು ಮೆಟ್ರೊ ನಿಲ್ದಾಣದೊಳಗೆ ಬಿಡದೇ ಭದ್ರತಾ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದು, ಈ ಘಟನೆಯ ವಿಡಿಯೊ ಆಧರಿಸಿ ಸೆಕ್ಯುರಿಟಿ ಗಾರ್ಡ್‌ ಯಾದವ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ಫೆ.18ರಂದು ನಡೆದಿರುವ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಕಾರ್ತಿಕ್ ಐರಾನಿ ಎಂಬುವವರು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದೇ ವಿಡಿಯೊ ಹಂಚಿಕೊಂಡಿರುವ ಹಲವರು, ಮೆಟ್ರೊ ಭದ್ರತಾ ಸಿಬ್ಬಂದಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೊ ಚಿತ್ರೀಕರಣ ಮಾಡಿರುವ ಕಾರ್ತಿಕ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ಮೆಟ್ರೊ ಸಾರ್ವಜನಿಕರ ಸಾರಿಗೆ. ಗಲೀಜು ಬಟ್ಟೆ ಧರಿಸಿದ್ದಾರೆಂಬ ಕಾರಣಕ್ಕೆ ಪ್ರಯಾಣಿಕ
ನನ್ನು ನಿಲ್ದಾಣದೊಳಗೆ ಬಿಡದಿರುವುದು ಖಂಡನೀಯ. ಭದ್ರತಾ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದರು.

ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದಂತೆ ಎಚ್ಚೆತ್ತ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ಅಧಿಕಾರಿಗಳು, ಪ್ರಯಾಣಿಕನ ಕ್ಷಮೆ ಕೋರಿದ್ದಾರೆ. ಜೊತೆಗೆ, ಸೆಕ್ಯುರಿಟಿ ಗಾರ್ಡ್ ಯಾದವ್‌ ಅವರನ್ನು ಸೇವೆಯಿಂದ ವಜಾ ಮಾಡಿದ್ದಾರೆ. ಘಟನೆ ಬಗ್ಗೆ ವಿಸ್ತೃತ ತಖೆಗೆ ಆದೇಶ ಹೊರಡಿಸಿದ್ದಾರೆ.

ಘಟನೆ ವಿವರ:
‘ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಬಂದಿದ್ದರು. ಕೆಲಸದ ನಿಮಿತ್ತ ರಾಜಾಜಿನಗರಕ್ಕೆ ಬಂದಿದ್ದ ಅವರು ಮೆಟ್ರೊ ಮೂಲಕ ಮೆಜೆಸ್ಟಿಕ್‌ಗೆ ಹೊರಟಿದ್ದರು. ತಲೆ ಮೇಲೆ ಬಟ್ಟೆಯ ಗಂಟು ಹೊತ್ತಿದ್ದರು. ಬಟ್ಟೆಗಳು ಗಲೀಜಾಗಿದ್ದವು. ಸರದಿಯಲ್ಲಿ ನಿಂತು ಟಿಕೆಟ್ ಪಡೆದು ನಿಲ್ದಾಣದೊಳಗೆ ತೆರಳುತ್ತಿದ್ದರು. ಪ್ರವೇಶ ದ್ವಾರದಲ್ಲಿ ಅವರನ್ನು ತಡೆದಿದ್ದ ಸಿಬ್ಬಂದಿ, ‘ನಿನ್ನ ಬಟ್ಟೆಗಳು ಗಲೀಜಾಗಿವೆ. ನಿಲ್ದಾಣದೊಳಗೆ ಬಿಡುವುದಿಲ್ಲ. ಹೊರಗೆ ಹೋಗು’ ಎಂದು ಏರುಧ್ವನಿಯಲ್ಲಿ ಬೆದರಿಸಿದ್ದರು. ಮುಗ್ಧರಾಗಿದ್ದ ವ್ಯಕ್ತಿಗೆ ದಿಕ್ಕು ತೋಚದಂತಾಗಿತ್ತು. ಹಿಂದಿ ಮಾತನಾಡುತ್ತಿದ್ದ ವ್ಯಕ್ತಿ, ಒಳಗೆ ಬಿಡುವಂತೆ ಬೇಡಿಕೊಂಡರೂ ಸಿಬ್ಬಂದಿ ಬಿಟ್ಟಿರಲಿಲ್ಲ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ವ್ಯಕ್ತಿಯ ಸಹಾಯಕ್ಕೆ ಬಂದಿದ್ದ ಸಾರ್ವಜನಿಕರು, ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು.
‘ವ್ಯಕ್ತಿ ರೈತರಂತೆ ಕಾಣುತ್ತಿದ್ದಾರೆ. ಬಟ್ಟೆ ಗಲೀಜು ಎಂಬ ಕಾರಣ ನೀಡಿ ತಡೆಯುತ್ತಿದ್ದೀರಾ?
ಬಟ್ಟೆ ಗಲೀಜಾದರೆ ಬಿಡಬಾರದೆಂದು ಯಾರಾದರೂ ಹೇಳಿದ್ದಾರಾ? ಈ ಮೆಟ್ರೊ ಇರುವುದು ವಿಐಪಿಗಾ? ನಾವು ಚೆನ್ನಾಗಿ ಬಟ್ಟೆ ಧರಿಸಿದ್ದೇವೆ. ಹಾಗಾದರೆ ಉಚಿತವಾಗಿ ಒಳಗೆ ಬಿಡುತ್ತೀರಾ?’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ‘ವ್ಯಕ್ತಿ ಬಳಿ ಅನುಮಾನಾಸ್ಪದ ವಸ್ತುಗಳು ಇದ್ದರೆ ಒಳಗೆ ಬಿಡಬೇಡಿ. ಆದರೆ, ಈ ವ್ಯಕ್ತಿ ಹತ್ತಿರ ಕೇವಲ ಬಟ್ಟೆಗಳಿವೆ. ಈ ಕಾರಣ ನೀಡಿ ಒಳಗೆ ಬಿಡದಿರುವುದು ದೊಡ್ಡ ತಪ್ಪು’ ಎಂದು ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದರು. ಇದಾದ ನಂತರ, ಸಾರ್ವಜನಿಕರೇ ವ್ಯಕ್ತಿಯನ್ನು ನಿಲ್ದಾಣದೊಳಗೆ ಕರೆದೊಯ್ದು ರೈಲು ಹತ್ತಿಸಿ ಕಳುಹಿಸಿದರು’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT