ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕ ರಾಜಕಾರಣ ದೇಶವನ್ನು ಆಳುತ್ತಿದೆ: ದೇವನೂರ ಮಹಾದೇವ ಕಳವಳ

Last Updated 26 ಜನವರಿ 2020, 14:23 IST
ಅಕ್ಷರ ಗಾತ್ರ

ಬೆಂಗಳೂರು: ‘ಭಯೋತ್ಪಾದಕ ರಾಜಕಾರಣ ಇಂದು ದೇಶವನ್ನು ಆಳುತ್ತಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಕಳವಳ ವ್ಯಕ್ತಪಡಿಸಿದರು.

ದಲಿತ ಒಕ್ಕೂಟ, ಆದಿವಾಸಿ, ಅಲೆಮಾರಿ, ದಲಿತ ಮತ್ತು ಹಿಂದುಳಿದ ಜಾತಿ ಸಂಘಟನೆಗಳ ವೇದಿಕೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನದ ಉಳಿವಿಗಾಗಿ ಪ್ರತಿಭಟನಾ ರ‍್ಯಾಲಿ ಮತ್ತು ಜನಜಾಗೃತಿ ಆಂದೋಲನದಲ್ಲಿ ಅವರು ಮಾತನಾಡಿದರು.

‘ಭಯೋತ್ಪಾದಕ ರಾಜಕಾರಣ ‍ಪದ ನನ್ನದಲ್ಲ. ಸಿಎಎ, ಎಪಿಆರ್‌, ಎನ್‌ಆರ್‌ಸಿ ಪರಿಶೀಲಿಸಿ ಎಂದು ಕೇಂದ್ರಕ್ಕೆ ಮನವಿ ಮಾಡಿರುವ ಸುಭಾಷ್‌ ಚಂದ್ರ ಬೋಸ್ ಅವರ ಸೋದರ ಮೊಮ್ಮಗ ಚಂದ್ರಬೋಸ್ ಬಳಸಿದ್ದಾರೆ. ಅವರು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಎಂಬುದು ಇಲ್ಲಿ ವಿಶೇಷ. ಭಾರತ ಮಾತೆಯ ಸುಪುತ್ರರು ಅಲ್ಲೂ ಇರಬಹುದು, ಎಲ್ಲೆಲ್ಲೂ ಇರಬಹುದು. ಅವರೆಲ್ಲರೂ ಮಾತನಾಡಬೇಕಿದೆ’ ಎಂದು ಹೇಳಿದರು.

‘ಭಾರತದ ಇತಿಹಾಸದುದ್ದಕ್ಕೂ ಅಂತಃಕರಣದ ಮಹಾತ್ಮರು ಭಾರತೀಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಈ ವರ್ತಮಾನದಲ್ಲೂ ಗಾಂಧಿ, ಅಂಬೇಡ್ಕರ್ ಭಾರತೀಯತೆಯನ್ನು ಕಾಪಾಡುವ ಶಕ್ತಿಯಾಗಿ ಜೀವಂತವಾಗಿದ್ದಾರೆ. ಅವರನ್ನು ಕತ್ತರಿಸುವ ಪ್ರಯತ್ನ ನಡೆಯುತ್ತಲೇ ಇದೆ. ಈ ಇಬ್ಬರೂ ಅದ್ಯಾವ ತಳಿಯ ವೃಕ್ಷವೋ ಕಾಣೆ, ಕತ್ತರಿಸಿದಷ್ಟೂ ಚಿಗುರುತ್ತಿದ್ದಾರೆ. ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಎ ವಿರುದ್ಧದ ಪ್ರತಿಭಟನೆಯ ಸ್ಫೋಟದಲ್ಲಿ ಇದು ಪ್ರಕರ ಬೆಳಕಿನಂತೆ ಕಾಣುತ್ತಿದೆ. ಆ ಬೆಳಕು ಭಾರತದ ಉದ್ದಗಲಕ್ಕೂ ಚೆಲ್ಲುತ್ತಿದೆ’ ಎಂದರು.

ಭಾರತ ಮಾತನಾಡುತ್ತಿದೆ: ‘ಸಾಮಾನ್ಯವಾಗಿ ಯಾವುದೇ ರಾಜಕೀಯ, ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಳ್ಳದ ಐಐಎಸ್‌ಸಿ ವಿದ್ಯಾರ್ಥಿಗಳೂ ಸಿಎಎ ವಿರುದ್ಧ ಪ್ರತಿಭಟಿಸಿದ್ದಾರೆ. ‘ಮೌನ ಇನ್ನು ಮುಂದೆ ನಮ್ಮ ಆಯ್ಕೆ ಅಲ್ಲ, ಅನ್ಯಾಯ ಆಗುತ್ತಿರುವುದು ಗೊತ್ತಿದ್ದೂ ಸುಮ್ಮನಿದ್ದರೆ ನಾವೂ ದಬ್ಬಾಳಿಕೆ ಪರ ವಹಿಸಿದ್ದೇವೆ ಎಂದೇ ಆಗುತ್ತದೆ’ ಎಂದು ಹೇಳುತ್ತಿದ್ದಾರೆ. ಭಾರತ ಈಗ ಮಾತನಾಡುತ್ತಿದೆ’ ಎಂದು ಹೇಳಿದರು.

‘ಆದಿವಾಸಿಗಳು‌ ಈ ನಾಡಿನ ಅರಣ್ಯ ಸಂಪತ್ತನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಅವರನ್ನು ಕಾಡಿನಿಂದ ಹೊರಗಟ್ಟಿ ಅರಣ್ಯ ಲೂಟಿಗೆ ಅವಕಾಶ ನೀಡುವ ಹುನ್ನಾರವನ್ನು ಸರ್ಕಾರ ಹೊಂದಿದೆ. ದೇಶದ ಆರ್ಥಿಕತೆಯನ್ನು ಮುಳುಗಿಸುತ್ತಿರುವುದು ದೇಶದ್ರೋಹ ಅಲ್ಲ, ನಿರುದ್ಯೋಗವನ್ನು ವೃದ್ಧಿಸುತ್ತಿರುವುದು ದೇಶದ್ರೋಹ ಅಲ್ಲ, ಬೆಲೆ ಏರಿಕೆ ನಿಯಂತ್ರಿಸದೇ ಇರುವುದು ದೇಶದ್ರೋಹ ಅಲ್ಲ. ಆದರೆ, ಇದನ್ನೆಲ್ಲಾ ಪ್ರಶ್ನಿಸುವುದು ದೇಶದ್ರೋಹ’ ಎಂದು ಲೇವಡಿ ಮಾಡಿದರು.

ನೈಸರ್ಗಿಕ ಮಕ್ಕಳು ದೇಶದ್ರೋಹಿಗಳೇ?: ‘ಹಿಂದೊಮ್ಮೆ ನಾನು ಈ ದೇಶಪ್ರೇಮದ ಬಗ್ಗೆ ಬರೆದಿದ್ದೆ. ಅದು ಅಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ. ಮಕ್ಕಳಿಲ್ಲದ ದಂಪತಿ ಒಬ್ಬ ಹುಡುಗನನ್ನು ದತ್ತು ಪಡೆಯುತ್ತಾರೆ. ಮರುವರ್ಷವೇ ಆ ದಂಪತಿಗೆ ಗಂಡು ಮಗು ಹುಟ್ಟುತ್ತದೆ. ಬೆಳೆದು ದೊಡ್ಡವರಾದ ನಂತರ ದತ್ತು ಮಗ ದಿನಕ್ಕೆ ನೂರಾರು ಬಾರಿ ಅಪ್ಪ, ಅಮ್ಮ ಎಂದು ಕರೆಯುತ್ತಿರುತ್ತಾನೆ. ನೈಸರ್ಗಿಕ (ಸ್ವಂತ) ಮಗ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅಪ್ಪ–ಅಮ್ಮ ಎನ್ನುತ್ತಿರುತ್ತಾನೆ. ಇದು ಕತೆಯಲ್ಲ, ವಾಸ್ತವ’ ಎಂದು ಹೇಳಿದರು.

‘ಈ ಬಗ್ಗೆ ನಾನು ಮನಃಶಾಸ್ತ್ರಜ್ಞರಲ್ಲಿ ಪ್ರಸ್ತಾಪಿಸಿದ್ದೆ. ಸ್ವಂತ ಮಗ ನಾನಲ್ಲ ಎಂಬುದು ದತ್ತು ಮಗನಿಗೆ ಗೊತ್ತಿದೆ. ಅದಕ್ಕೆ ಪದೇ ಪದೇ ಹೇಳುತ್ತಾನೆ ಎಂದರು. ನನಗೆ ಅಯ್ಯೋ ಎನಿಸಿತು. ಇಲ್ಲೂ ಬಾಯಿ ಬಿಟ್ಟರೆ ದೇಶಪ್ರೇಮ ಎನ್ನುವವರನ್ನು ಕಂಡಾಗ ಸುಪ್ತ ಮನಸ್ಸಿನೊಳಗೆ ದತ್ತು ಮಗನ ಕತೆಯೇ ಇರಬೇಕೇನೋ, ಅನುಮಾನಾಸ್ಪದ ದೇಶವಾಸಿಗಳೇ ಇರಬಹುದು ಎಂಬ ಸಂಶಯ ಹುಟ್ಟುತ್ತದೆ’ ಎಂದರು.

‘ಈ ಅನುಮಾನಾಸ್ಪದ ದೇಶಭಕ್ತರನ್ನು ನಾನು ಬೇಡ ಎನ್ನುವುದಿಲ್ಲ. ಇಲ್ಲೇ ಹುಟ್ಟಿ ಈ ನೆಲದಲ್ಲೇ ಅಂಬೆಗಾಲಿಟ್ಟ ಕಂದಮ್ಮಗಳೆಲ್ಲಾ ಇಲ್ಲಿಯವರೇ ಎನ್ನುವವನು ನಾನು. ಆದರೆ, ಭಾರತದ ನೈಸರ್ಗಿಕ ಮಕ್ಕಳನ್ನೇ ದೇಶದ್ರೋಹಿಗಳೆಂದು ಕರೆಯುವುದು ಯಾವ ದುರಂತ’ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ರೈಲು ನಿಲ್ದಾಣದ ಬಳಿಯಿಂದ ಸ್ವತಂತ್ರ್ಯ ಉದ್ಯಾನದತನಕ ಸಾವಿರಾರು ಮಂದಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಹೋರಾಟ ನಿಲ್ಲದು: ರಾಜಮೋಹನ ಗಾಂಧಿ

‘ತಾಯಿ–ತಂದೆ, ಅಜ್ಜ–ಅಜ್ಜಿಯ ಹುಟ್ಟಿನ ಬಗ್ಗೆ ಮಾಹಿತಿ ಕೇಳುವ ಅಂಶವನ್ನು ರಾಷ್ಟ್ರೀಯ ಜನಸಂಖ್ಯೆ ನೋಂದಣಿ(ಎನ್‌ಪಿಆರ್‌) ಅರ್ಜಿಯಿಂದ ಅಳಿಸುವ ತನಕ ಸರ್ಕಾರದ ವಿರುದ್ಧದ ಹೋರಾಟ ನಿಲ್ಲದು’ ಎಂದು ಮಹತ್ಮಾ ಗಾಂಧೀಜಿ ಅವರ ಮೊಮ್ಮಗ ರಾಜಮೋಹನಗಾಂಧಿ ಹೇಳಿದರು.

‘ಯಾವುದೇ ಜಾತಿ ಅಥವಾ ಧರ್ಮವನ್ನು ಹೊರಗಿಟ್ಟು ಕಾನೂನು ರೂಪಿಸುವುದು ಸಂವಿಧಾನಕ್ಕೆ ವಿರುದ್ಧ. ಇದರ ವಿರುದ್ಧದ ಹೋರಾಟಕ್ಕೆ ನಾಯಕತ್ವ ಇಲ್ಲ. ಇದು ಜನಸಾಮಾನ್ಯರ ಹೋರಾಟ. ವಿದೇಶದ ಪತ್ರಿಕೆಗಳು ಈ ಬಗ್ಗೆ ಬರೆಯುತ್ತಿವೆ’ ಎಂದರು.

‘ಎನ್‌ಸಿಆರ್ ನಡೆಸುವುದಿಲ್ಲ ಎಂಬುದನ್ನು ಸಂಸತ್ತಿನಲ್ಲಿ ಪ್ರಕಟಿಸಬೇಕು. ಧರ್ಮನಿರಪೇಕ್ಷತೆಗೆ ವಿರುದ್ಧವಾಗಿರುವ ಸಿಎಎ ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವ ಸಸಿಕಾಂತ ಸೆಂಥಿಲ್‌, ‘ಈ ದೇಶದ ಮೂಲನಿವಾಸಿಗಳು ನಾವು. ಸಂವಿಧಾನಕ್ಕೆ ಧಕ್ಕೆ ತರುವಾಗ ಸುಮ್ಮನೆ ಕೂತು ನೋಡುವುದಿಲ್ಲ. ನಾವು ಬೀದಿಗೆ ಇಳಿದಿರುವುದು ತಡವಾಗಿದೆ. ಇನ್ನೂ ತಡಮಾಡಿದರೆ ನೀವು ನಿಮ್ಮ ಮಕ್ಕಳಿಗೆ ಮಾಡುವ ದ್ರೋಹ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT