ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಹಂಚಿಕೆಯಲ್ಲಿ ತಾರತಮ್ಯ; ಪೊಲೀಸರಲ್ಲಿ ಅಸಮಾಧಾನ

ಗೃಹ ಇಲಾಖೆಯಿಂದ ಅಧಿಸೂಚನೆ ಪ್ರಕಟ; ಆಕ್ಷೇಪಣೆ ಸಲ್ಲಿಸಿದ ಅಧಿಕಾರಿಗಳು
Last Updated 18 ಜುಲೈ 2020, 19:18 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಹುದ್ದೆಗಳ ಬಡ್ತಿ ಹಾಗೂ ವೇತನ ಸಂಬಂಧ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಇದಕ್ಕೆ ಪೊಲೀಸ್ ಇಲಾಖೆಯ ನಾಗರಿಕ (ಸಿವಿಲ್) ಅಧಿಕಾರಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಇಲಾಖೆಯ ಸಿವಿಲ್‌ ಪೊಲೀಸ್‌ ಅಧಿಕಾರಿಗಳ ವೇತನಕ್ಕಿಂತ, ಸಿಐಡಿ ವಿಭಾಗದ ಪತ್ತೆದಾರಿ ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ವೇತನ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕೆಲ ಅಧಿಕಾರಿಗಳು, ಈಗಾಗಲೇ ಅಧಿಸೂಚನೆಗೆ ಆಕ್ಷೇಪಣೆ ಸಹ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

‘ಪೊಲೀಸ್ ಇಲಾಖೆಯ ಎಸ್ಪಿ, ಡಿವೈಎಸ್ಪಿ, ಇನ್‌ಸ್ಪೆಕ್ಟರ್‌, ಪಿಎಸ್‌ಐ ಹುದ್ದೆಗಳ ಬಡ್ತಿ ಹಾಗೂ ವೇತನ ಸಂಬಂಧ ಹೊಸದಾಗಿ ಹೊರಡಿಸಿರುವ ಅಧಿಸೂಚನೆಯಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗಿದೆ. ಜನರ ಜೊತೆ ಒಡನಾಟವಿಟ್ಟುಕೊಂಡು ಕೆಲಸ ಮಾಡುವ ಸಿವಿಲ್ ಪೊಲೀಸ್ ಅಧಿಕಾರಿಗಳಿಗಿಂತ, ಪತ್ತೆದಾರಿ ಪೊಲೀಸ್ ಅಧಿಕಾರಿಗಳಿಗೆ ಬೇಗನೇ ಬಡ್ತಿ ಒದಗಿಸುವ ಹಾಗೂ ಹೆಚ್ಚಿನ ವೇತನ ನೀಡುವ ಅಂಶ ಅಧಿಸೂಚನೆಯಲ್ಲಿದೆ. ಜೊತೆಗೆ, ಇತರ ಹುದ್ದೆಗಳಲ್ಲೂ ಸಮಾನ ಕೆಲಸಕ್ಕೆ ಸಮಾನ ವೇತನ ಸಿಕ್ಕಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ದೂರಿದರು.

‘ಜುಲೈ 14ರಂದು ಈ ಅಧಿಸೂಚನೆ ಹೊರಡಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು 28ರವರೆಗೆ ಅವಕಾಶ ನೀಡಲಾಗಿದೆ. ಐದಕ್ಕೂ ಹೆಚ್ಚು ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಅದರ ಪ್ರಗತಿ ಏನು ಎಂಬುದನ್ನು ಕಾದು ನೋಡುತ್ತಿದ್ಧೇವೆ. ತಾರತಮ್ಯ ಸರಿಪಡಿಸದಿದ್ದರೆ ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು’ ಎಂದೂ ತಿಳಿಸಿದರು.

ಅಧಿಸೂಚನೆ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಇಲಾಖೆ ಹಿರಿಯ ಅಧಿಕಾರಿಯೊಬ್ಬರು, ‘ಇದು ಅಧಿಸೂಚನೆ ಮಾತ್ರ. ಆಕ್ಷೇಪಣೆ ಪರಿಶೀಲಿಸಿ ಮುಂದಿನ ಕ್ರಮ’ ಎಂದರು.

ಅಧಿಸೂಚನೆಯಲ್ಲಿರುವ ವೇತನ ವಿವರ
ಡಿವೈಎಸ್ಪಿ (ಸಿವಿಲ್)
– 48,900–92,700
ಡಿವೈಎಸ್ಪಿ (ಪತ್ತೆದಾರಿ)–52,650–97,100
ಪೊಲೀಸ್ ಇನ್‌ಸ್ಪೆಕ್ಟರ್ (ಸಿವಿಲ್)– 43,100–83,900
ಇನ್‌ಸ್ಪೆಕ್ಟರ್(ಪತ್ತೆದಾರಿ)–45,300–88,300
ಪಿಎಸ್‌ಐ(ಪತ್ತೆದಾರಿ)–40,900–78,200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT