ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಹೆಸರಿನ ಅಕ್ರಮ ತಡೆಯುವ ಇಚ್ಛೆ ಇಲ್ಲವೇ?: ಹೈಕೋರ್ಟ್‌ ತೀವ್ರ ವ್ಯಥೆ

Last Updated 7 ಜನವರಿ 2020, 1:45 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವರ ಹೆಸರಿನಲ್ಲಿ ನಡೆಯುವ ಅಕ್ರಮ ತಡೆಯಲು ನಿಮಗೆ ಇಚ್ಛೆಯಿಲ್ಲವೇ?, ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಈತನಕ ಅಕ್ರಮ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿಲ್ಲ. ನಿಜವಾಗಿಯೂ ಇದು ದುರದೃಷ್ಟಕರ ಸಂಗತಿ’ ಎಂದು ಹೈಕೋರ್ಟ್‌ ತೀವ್ರ ವ್ಯಥೆ ವ್ಯಕ್ತಪಡಿಸಿದೆ.

‘ಶಾಲೆ, ಉದ್ಯಾನ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿ ನಿರ್ಮಿಸಲಾಗಿರುವ ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವಿಗೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಪಾಲನೆ ಮಾಡುವಲ್ಲಿ ರಾಜ್ಯ ಸರ್ಕಾರ ಅಸೀಮ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ’ ಎಂದೂ ಕಿಡಿ ಕಾರಿದೆ.

ಈ ಕುರಿತಂತೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ವಿ.ಶ್ರೀನಿಧಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ‘2020ರ ಮಾರ್ಚ್‌ 31ರೊಳಗೆ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ತಹಶೀಲ್ದಾರ್‌ಗಳು ನೀಡುವ ವರದಿ ಕ್ರೋಡೀಕರಿಸಿ ನಂತರ
ತೆರವು ಕಾರ್ಯಕ್ಕೆ ಮುಂದಾಗುತ್ತೇವೆ’ಎಂದು ಅವರು ಸಮಜಾಯಿಷಿನೀಡಿದರು.

ಇದಕ್ಕೆ ಗರಂ ಆದ ಓಕಾ, ‘ಈ ಪ್ರಮಾಣ ಪತ್ರ ಒಪ್ಪಲು ಸಾಧ್ಯವಿಲ್ಲ. ಫೆಬ್ರುವರಿ 4ರೊಳಗೆ ಬೇರೆ ಪ್ರಮಾಣ ಪತ್ರ ಸಲ್ಲಿಸಿ’ ಎಂದು ವಿಚಾರಣೆ ಮುಂದೂಡಿದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸಲ್ಲಿಸಿರುವ ಪ್ರಮಾಣಪತ್ರಕ್ಕೂ ಸಿಡಿಮಿಡಿಯಾದರು.

‘ಪ್ರಮಾಣಪತ್ರದಲ್ಲಿ ಒಂದೂ ಅಕ್ರಮ ಧಾರ್ಮಿಕ ಕೇಂದ್ರಗಳಿಲ್ಲ ಎಂದು ಹೇಳಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ.ಅವರು ಸರಿಯಾಗಿ ಮತ್ತೊಮ್ಮೆ ಪರಿಶೀಲಿಸಿ ಪ್ರಮಾಣಪತ್ರ ಸಲ್ಲಿಸಬೇಕು, ಇಲ್ಲವಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಸಾರ್ವಜನಿಕ ಪ್ರದೇಶಗಳಲ್ಲಿರುವ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ 2009ರ ಸೆಪ್ಟೆಂಬರ್‌ 29ರಂದು ಮಹತ್ವದ ತೀರ್ಪು ನೀಡಿದೆ.

***

ಸಾರ್ವಜನಿಕ ಸ್ಥಳಗಳಲ್ಲಿನ ಅಕ್ರಮ ಧಾರ್ಮಿಕ ಕೇಂದ್ರಗಳ ತೆರವಿಗೆ 2009ರಲ್ಲೇ ಸುಪ್ರೀಂ ಕೋರ್ಟ್‌ ಸ್ಪಷ್ಟ ಆದೇಶ ನೀಡಿದೆ. ಆದರೆ, ನೀವಿನ್ನೂ ಮೀನಮೇಷ ಎಣಿಸುತ್ತಿದ್ದೀರಿ.

–ಅಭಯ್‌ ಎಸ್‌.ಓಕಾ,ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT