ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಅತಿಕ್ರಮಣ ಕಡಿವಾಣಕ್ಕೆ ಕಠಿಣ ಕ್ರಮ ಅಗತ್ಯ- ಪ್ರಜಾ ವೇದಿಕೆ

‘ನಮ್ಮ ಕೆರೆ’ ಚರ್ಚೆಯಲ್ಲಿ ಮೂಡಿದ ಒಮ್ಮತದ ಅಭಿಪ್ರಾಯ
Published 19 ಆಗಸ್ಟ್ 2023, 16:36 IST
Last Updated 19 ಆಗಸ್ಟ್ 2023, 16:36 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆರೆ ಅತಿಕ್ರಮಣಗಳನ್ನು ನಿಲ್ಲಿಸಬೇಕು. ಕೆರೆಗಳ ಅಭಿವೃದ್ಧಿಗೆ ಸಂಘಟಿತ ಕೆಲಸಗಳಾಗಬೇಕು. ಕೊಳಚೆ ನೀರನ್ನು ಶುದ್ಧೀಕರಿಸಿ ಮರು ಬಳಕೆಯಾಗಬೇಕು. ಕೈಗಾರಿಕೆಗಳು ನೇರವಾಗಿ ಕೊಳಚೆಯನ್ನು ಹೊರಬಿಡಬಾರದು. ಬಳಕೆದಾರರನ್ನು ಒಳಗೊಂಡಂತೆ ಕೆರೆ ಸಂರಕ್ಷಣಾ ಸಮಿತಿ ರಚಿಸಬೇಕು...’

ಇದು ಸಿಟಿಜನ್ಸ್‌ ಫಾರ್‌ ಸ್ಯಾಂಕಿ ಮತ್ತು ಬೆಂಗಳೂರು ಪ್ರಜಾ ವೇದಿಕೆಯಿಂದ ಶನಿವಾರ ಕಾನೂನು, ಪರಿಸರ, ನಾಗರಿಕ ಚಟುವಟಿಕೆ, ರಾಜಕೀಯ ಮತ್ತು ನಾಗರಿಕ ಆಡಳಿತ ತಜ್ಞರ ಜೊತೆಗೆ ನಡೆದ ‘ನಮ್ಮ ಕೆರೆ’ ಚರ್ಚೆಯಲ್ಲಿ ಕೇಳಿಬಂದ ಅಭಿಪ್ರಾಯಗಳು.

ಕೆರೆಗಳ ಅಭಿವೃದ್ಧಿ ಎಂದರೆ ಕೆರೆಯನ್ನುಉಳಿಸಿ,  ಸಂರಕ್ಷಿಸುವುದೇ ಆಗಬೇಕು. ಕೆರೆಗಳ ಸುತ್ತ ಪಾರ್ಕ್‌, ನಡಿಗೆ ಪಥ ಮಾಡುವುದೆಲ್ಲ ಆನಂತರದ ಕೆಲಸಗಳಷ್ಟೇ ಎಂದು ನಾಗರಿಕ ಹೋರಾಟಗಾರ ಎನ್‌.ಎಸ್‌. ಮುಕುಂದ ಹೇಳಿದರು.

ಕೆರೆಗೆ ಸಂಬಂಧಿಸಿದ ಕಂದಾಯ ದಾಖಲೆಗಳು, ಗಡಿ ನಕ್ಷೆಗಳು ಒಳಗೊಂಡಂತೆ ಎಲ್ಲ ವಿವರ ಲಭ್ಯವಾಗುವ ವೆಬ್‌ಸೈಟ್‌ ಬೇಕು. ಪ್ರತಿ ವಾರ್ಡ್‌ನಲ್ಲಿ ಕೆರೆ ಸಂರಕ್ಷಣಾ ಸಮಿತಿ ಮಾಡಬೇಕು ಎಂದು ಸಲಹೆ ನೀಡಿದರು.

ಕೆರೆ ಸಂರಕ್ಷಣೆ ಮತ್ತು ನಿರ್ವಹಣೆಗೆ ಅಧಿಕೃತ ಅಧಿಕಾರಿಗಳು ಇರಬೇಕು. ಈಗ ಇರುವವರಿಗೆ ಬೇರೆ ಜವಾಬ್ದಾರಿಯ ಜೊತೆಗೆ ಇದನ್ನು ನೀಡಲಾಗಿದೆ. ಅವರಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಕೂಡ ಇರಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಕೆಟಿಸಿಡಿ ಪ್ರಾಧಿಕಾರದ ಸಭೆ ನಡೆಸಬೇಕು ಎಂದು ನಿವೃತ್ತ ಐಎಫ್‌ಎಸ್‌ ಅಧಿಕಾರಿ ಯು.ವಿ. ಸಿಂಗ್‌ ತಿಳಿಸಿದರು.

ಕೆರೆಯನ್ನು ರಕ್ಷಿಸಲು ಹೋರಾಟ ಮಾಡುವವರ ಮೇಲೆ ಎಫ್‌ಐಆರ್‌ ಆದ ಕೂಡಲೇ ಅದನ್ನು ಮರಣ ಶಾಸನ ಎಂದು ತಿಳಿದುಕೊಳ್ಳಬೇಕಿಲ್ಲ. ಕಾನೂನು ತಜ್ಞರ ಸಹಾಯ ‍ಪಡೆದು ನ್ಯಾಯಾಲಯದಲ್ಲಿಯೂ ಹೊರಗೂ ಹೋರಾಟ ಮುಂದುವರಿಸಲು ಸಾಧ್ಯ ಎಂದು ವಕೀಲ ಸ್ಮರಣ್ ಶೆಟ್ಟಿ ಹೇಳಿದರು.

ಕೆರೆಗಳಿಗೆ ಕಾರ್ಖಾನೆಗಳ ನೀರು ಹರಿದಾಗ ಮೀನುಗಳು ಸಾಯುತ್ತವೆ. ನಾವು ಪರೀಕ್ಷಿಸಿದಾಗ ಅದರಲ್ಲಿ ರಾಸಾಯನಿಕ ಹೆಚ್ಚಿರುವುದು ಕಂಡು ಬರುತ್ತದೆ. ಸರ್ಕಾರದ ಶಿಫಾರಸಿನಂತೆ ಪರೀಕ್ಷೆ ನಡೆಸಿದಾಗ ನೀಡುವ ವರದಿಗಳು ನೀರು ಶುದ್ಧವಾಗಿದೆ ಎಂದು ಹೇಳುತ್ತವೆ. ಸತ್ಯ ತಿಳಿಸುವ ಕೆಲಸ ಆಗಬೇಕು. ಕಾರ್ಖಾನೆಗಳ ನೀರು ಮರುಬಳಕೆಯಾಗಬೇಕು. ಅದಕ್ಕಿಂತ ಮೊದಲು ಸರಿಯಾಗಿ ಶುದ್ಧೀಕರಣವಾಗಬೇಕು ಎಂದು ಐಐಎಸ್‌ಸಿ ಪ್ರೊಫೆಸರ್‌ ಟಿ.ವಿ. ರಾಮಚಂದ್ರ ತಿಳಿಸಿದರು.

ಕೆರೆ ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ಬಿಬಿಎಂಪಿ ಅಲ್ಲದೇ ಹಲವು ವೇದಿಕೆಗಳು, ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲರನ್ನು ಒಂದೇ ವೇದಿಕೆಯಡಿ ತರುವ ಅಗತ್ಯವಿದೆ. ಆಗ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸಾಧ್ಯ ಎಂದು ಬಿಬಿಎಂಪಿ ಕೆರೆಗಳ ವಿಭಾಗ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋತ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಯಾರೋ ಕೆರೆ, ರಾಜಕಾಲುವೆಗಳ ಅತಿಕ್ರಮಣ ಮಾಡುತ್ತಾರೆ. ಅದರಿಂದ ಉಂಟಾಗುವ ಕೃತಕ ನೆರೆ, ಇನ್ನಿತರ ಸಮಸ್ಯೆಗಳಿಗೆ ಇನ್ಯಾರೋ ಬಲಿಯಾಗುತ್ತಾರೆ ಎಂದು ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷ ರಾಜೀವ್‌ ಗೌಡ ವಿಷಾದಿಸಿದರು. 

ಪಿಕಲ್ ಜಾರ್ ಮೀಡಿಯಾದ ಸಂಸ್ಥಾಪಕಿ ವಸಂತಿ ಹರಿಪ್ರಕಾಶ್‌ ಸಂವಾದ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT