ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನಮತ್ತ ಚಾಲನೆ ವಿರುದ್ಧ ಕಾರ್ಯಾಚರಣೆ ಆರಂಭ: ಬಿ.ಆರ್. ರವಿಕಾಂತೇಗೌಡ

Last Updated 25 ಸೆಪ್ಟೆಂಬರ್ 2021, 22:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾನಮತ್ತ ಚಾಲನೆ ಪತ್ತೆಗಾಗಿ ನಗರದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಹೆಚ್ಚಾಗಿದ್ದರಿಂದ 2020ರ ಮಾರ್ಚ್‌ನಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಪಾನಮತ್ತ ಚಾಲನೆಯಿಂದ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಹೀಗಾಗಿ, ವೈದ್ಯರ ಸಲಹೆ ಪಡೆದು ಶನಿವಾರ ರಾತ್ರಿಯಿಂದಲೇ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುತ್ತಿದೆ’ ಎಂದರು.

‘ಚಾಲಕರ ಬಾಯಿ ಪರೀಕ್ಷೆಗಾಗಿ 699 ಆಲ್ಕೋಮೀಟರ್‌ಗಳನ್ನು ಬಳಸಲಾಗುತ್ತಿದೆ. ಒಬ್ಬರಿಗೆ ಒಂದು ಆಲ್ಕೋಮೀಟರ್ ಬಳಸಿದರೆ, ಅದನ್ನು 48 ಗಂಟೆ ಕವರ್‌ನಲ್ಲಿ ಶೇಖರಿಸಿಡಲಾಗುವುದು. ನಂತರ, ಸ್ಯಾನಿಟೈಸ್ ಮಾಡಿ ಮರು ಬಳಕೆ ಮಾಡಲಾಗುವುದು’ ಎಂದು ಹೇಳಿದರು.

‘ವಾಹನ ಚಾಲಕರನ್ನು ತಡೆದು ಮೇಲ್ನೋಟಕ್ಕೆ ಪರೀಕ್ಷೆ ನಡೆಸಲಾಗುವುದು. ಮದ್ಯದ ವಾಸನೆ ಹೆಚ್ಚಿದ್ದರೆ, ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಲಾಗುವುದು. ಅಗತ್ಯವಿದ್ದವರಿಗೆ ಮಾತ್ರ ಆಲ್ಕೋಮೀಟರ್‌ನಿಂದ ತಪಾಸಣೆ ನಡೆಸಲಾಗುವುದು’ ಎಂದರು.

‘ಕಾರ್ಯಾಚರಣೆ ವೇಳೆ ಸಾರ್ವಜನಿಕರು ಪೊಲೀಸರ ಜೊತೆ ಸಹಕರಿಸಬೇಕು. ಯಾರಾದರೂ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಪ್ರಕರಣ ಗಂಭೀರವಾಗಿದ್ದರೆ, ರೌಡಿ ಪಟ್ಟಿಯಲ್ಲಿ ಹೆಸರು ಸೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದೂ ರವಿಕಾಂತೇಗೌಡ ಹೇಳಿದರು.

‘45 ಟೋಯಿಂಗ್‌ ಸಿಬ್ಬಂದಿ ಅಮಾನತು’
‘ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸದ ಹಾಗೂ ನಿಯಮಬಾಹಿರವಾಗಿ ವಾಹನಗಳ ಟೋಯಿಂಗ್ ಮಾಡಿದ್ದ ಆರೋಪದಡಿ ಟೈಗರ್ ವಾಹನಗಳ 45 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಐದು ಟೋಯಿಂಗ್ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ’ ಎಂದು ಬಿ.ಆರ್. ರವಿಕಾಂತೇಗೌಡ ಹೇಳಿದರು.

‘ಟೈಗರ್ ವಾಹನದಲ್ಲಿ ಎಎಸ್‌ಐ ಇರಬೇಕು. ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುವ ವಾಹನಗಳ ಫೋಟೊ ತೆಗೆದುಕೊಳ್ಳಬೇಕು. ಟೋಯಿಂಗ್‌ ಮಾಡುವ ಮುನ್ನ ಧ್ವನಿವರ್ಧಕದಲ್ಲಿ ಘೋಷಿಸಬೇಕು. ಟೋಯಿಂಗ್ ಮಾಡುವಾಗ ಮಾಲೀಕರು ಬಂದರೆ, ಸ್ಥಳದಲ್ಲೇ ದಂಡ ಕಟ್ಟಿಸಿಕೊಂಡು ವಾಹನ ನೀಡಬೇಕು. ಈ ಎಲ್ಲ ಸೂಚನೆಗಳನ್ನು ಸಿಬ್ಬಂದಿಗೆ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT