ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡ್ರಿಂಕ್‌ ಆ್ಯಂಡ್‌ ಡ್ರೈವ್‌’ ತಪಾಸಣೆ ತಾತ್ಕಾಲಿಕ ಸ್ಥಗಿತ?

ಪೊಲೀಸ್ ಕಮಿಷನರ್ ತುರ್ತು ಸಭೆ * ವದಂತಿ ಹಬ್ಬಿಸುವವರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ
Last Updated 14 ಮಾರ್ಚ್ 2020, 22:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ‘ಕೋವಿಡ್–19’ ಪ್ರಕರಣಗಳು ಕಂಡುಬಂದಿರುವ ಬೆನ್ನಲ್ಲೇ ‘ಡ್ರಿಂಕ್ ಆ್ಯಂಡ್ ಡ್ರೈವ್’ ತಪಾಸಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸಂಚಾರ ಪೊಲೀಸರು ಮುಂದಾಗಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳು ಠಾಣಾಧಿಕಾರಿಗಳಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ.

ಮಾಲ್, ಸಿನಿಮಾ ಮಂದಿರ, ಪಬ್‌ ಸೇರಿ ಜನ ಹೆಚ್ಚು ಸೇರುವ ಸ್ಥಳಗಳನ್ನು ಬಂದ್ ಮಾಡಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ನಗರದಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಶನಿವಾರ ಅಧಿಕಾರಿಗಳ ಸಭೆ ನಡೆಸಿದರು.

ಹೆಚ್ಚುವರಿ ಪೊಲೀಸ್ ಕಮಿಷನರ್ ಹಾಗೂ ಎಲ್ಲ ವಿಭಾಗದ ಡಿಸಿಪಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂಜಾಗ್ರತಾ ಕ್ರಮಗಳ ಜೊತೆಯಲ್ಲೇ ಜನರಲ್ಲಿ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.

‘ನಗರದಲ್ಲಿ ’ಡ್ರಿಂಕ್ ಆ್ಯಂಡ್ ಡ್ರೈವ್’ ತಪಾಸಣೆ ಚಾಲ್ತಿಯಲ್ಲಿದೆ. ಹಲವೆಡೆ ಚಾಲಕರ ಎದುರು ನಿಂತುಕೊಂಡು ಕಾನ್‌ಸ್ಟೆಬಲ್‌ಗಳು ಬಾಯಿ ತಪಾಸಣೆ ಮಾಡುತ್ತಿದ್ದಾರೆ. ಇದರಿಂದಾಗಿ ವೈರಸ್‌ ಹರಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ರಾಜ್ಯ ಸರ್ಕಾರ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಅದರನ್ವಯವೇ ಸದ್ಯಕ್ಕೆ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಸ್ಥಗಿತಗೊಳಿಸುವುದು ಒಳ್ಳೆಯದು’ ಎಂದು ಕೆಲ ಅಧಿಕಾರಿಗಳು ಅಭಿಪ್ರಾಯಪಟ್ಟರು.

ಅದಕ್ಕೆ ಒಪ್ಪಿಗೆ ವ್ಯಕ್ತಪಡಿಸಿದ ಹಿರಿಯ ಅಧಿಕಾರಿಗಳು, ಮಾರ್ಚ್ 21ರವರೆಗೆ ತಪಾಸಣೆ ಮಾಡದಿರಲು ಠಾಣಾಧಿಕಾರಿಗಳಿಗೆ ಸೂಚನೆ ನೀಡುವಂತೆ ತಿಳಿಸಿದರು. ಅಗತ್ಯಬಿದ್ದರೆ ತಪಾಸಣೆ ನಡೆಸಿ ತಪ್ಪಿತಸ್ಥ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದರು.

‘ಸಿಬ್ಬಂದಿ ಹಿತದೃಷ್ಟಿಯಿಂದ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಮುಂದಿನ ಬೆಳವಣಿಗೆಯನ್ನು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ವದಂತಿ ಹಬ್ಬಿಸುವರ ವಿರುದ್ಧ ಪ್ರಕರಣ: ಕೋವಿಡ್–19 ಬಗ್ಗೆ ವದಂತಿಗಳನ್ನು ಹಬ್ಬಿಸುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಭಾಸ್ಕರ್ ರಾವ್ ಸೂಚನೆ ನೀಡಿದರು.

ಔಷಧ ಅಂಗಡಿಗಳ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ವೈರಸ್‌ ತಂದೊಡ್ಡಿರುವ ಆತಂಕದಿಂದಾಗಿ ಮೂಗು ಮತ್ತು ಬಾಯಿ ಮುಚ್ಚಿಕೊಳ್ಳುವ ಮಾಸ್ಕ್‌ ಮತ್ತು ಕೈ ಸ್ವಚ್ಛಗೊಳಿಸಲು ಬಳಸುವ ಸ್ಯಾನಿಟೈಸರ್‌ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಔಷಧ ಅಂಗಡಿಗಳ ಮೇಲೆ ಸಿಸಿಬಿ ಪೊಲೀಸರು ಶನಿವಾರ ದಾಳಿ ನಡೆಸಿದರು.

ವಿವಿಧ ತಂಡಗಳಲ್ಲಿ ದಾಳಿ ಕಾರ್ಯಾಚರಣೆ ನಡೆಸಿದ ಪೊಲೀಸರು 210 ಔಷಧ ಅಂಗಡಿಗಳನ್ನು ತಪಾಸಣೆ ಮಾಡಿದರು. ಜಯನಗರ, ಕಲಾಸಿಪಾಳ್ಯ, ಚಾಮರಾಜಪೇಟೆ, ಮಹಾಲಕ್ಷ್ಮಿ ಬಡಾವಣೆ ಹಾಗೂ ಸಂಜಯನಗರದ ಐದು ಔಷಧದ ಮಳಿಗೆಗಳಲ್ಲಿ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳನ್ನು ದುಬಾರಿ ಬೆಲೆಗೆ ಮಾರುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಕ್ರಮ ಜರುಗಿಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಇವೆರಡೂ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗಿದ್ದು, ನಿಗದಿತ ಬೆಲೆಗೆ ಗ್ರಾಹಕರಿಗೆ ಸಿಗುವಂತೆ ಮಾಡಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್‌–19: ಹೊಸಟೆಲಿಗ್ರಾಂ ಗುಂಪು ರಚನೆ
ಬೆಂಗಳೂರು: ಕೊರೊನಾ ಭೀತಿ ಕುರಿತು ಜನರ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿಯೇ ‘ಕೋವಿಡ್‌–19 ಕರ್ನಾಟಕ ಟೀಂ’ ಎಂಬ ಹೊಸ ಅನೌಪಚಾರಿಕ ಟೆಲಿಗ್ರಾಂ ಗುಂಪನ್ನು ರಚಿಸಲಾಗಿದ್ದು, ಇಲ್ಲಿರುವ ವೈದ್ಯರು, ತಜ್ಞರು ಜನರ ಎಲ್ಲ ಪ್ರಶ್ನೆಗಳು, ಸಂಶಯಗಳಿಗೆ ಉತ್ತರ ನೀಡಲಿದ್ದಾರೆ.

ಈ ಗುಂಪನ್ನು ರಚಿಸಿರುವ ಕುರಿತು ಟ್ವೀಟ್‌ ಮಾಡಿರುವ ವಾರ್ತಾ ಇಲಾಖೆಯ ಕಾರ್ಯದರ್ಶಿ ಪಿ.ಮಣಿವಣ್ಣನ್‌, ‘ಕೋವಿಡ್‌–19 ಕುರಿತು ನಿಮ್ಮಲ್ಲಿ ಪ್ರಶ್ನೆಗಳಿವೆಯೇ? ಯಾರನ್ನು ಕೇಳಬೇಕು ಎಂದು ಗೊತ್ತಾಗುತ್ತಿಲ್ಲವೇ? 104 ಸಂಖ್ಯೆ ಕಾರ್ಯನಿರತವಾಗಿದೆಯೇ? ಹಾಗಿದ್ದರೆ ಈ ಟೆಲಿಗ್ರಾಂ ಗುಂಪನ್ನು ಸೇರಿಕೊಳ್ಳಿ. ನಿಮಗೆ ಉತ್ತರಗಳನ್ನು ಕೊಡಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದ್ದಾರೆ.

‘ಈ ಗುಂಪಿಗೆ 50 ಅಡ್ಮಿನ್‌ಗಳಿದ್ದು, ಉತ್ತರಗಳು ಸಹ ಜನಸಾಮಾನ್ಯರಿಂದ ಮತ್ತು ತಜ್ಞರಿಂದಲೇ ಸಿಗುತ್ತವೆ. ನಾವು ಮಾಹಿತಿ ಸರಿಯಾಗಿ ಹರಿಯುವಂತೆ ಮಾಡುವ ಮಧ್ಯವರ್ತಿಗಳು ಮಾತ್ರ’ ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಮಧ್ಯೆ, 104 ಸಹಾಯವಾಣಿಗೆ ಹೆಚ್ಚಿನ ಕರೆಗಳು ಬರುತ್ತಿರುವುದರಿಂದ ಆರೋಗ್ಯ ಇಲಾಖೆಯು ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿಸಿದೆ. ‘104 ಸಹಾಯವಾಣಿಯಲ್ಲಿನ ಸಂಪರ್ಕವನ್ನು 40ಕ್ಕೆ ಹೆಚ್ಚಿಸಲಾಗಿದೆ. ಆಂಬುಲೆನ್ಸ್‌ ಸೇವೆಗಾಗಿ 108 ಆಂಬುಲೆನ್ಸ್‌ ಸೇವೆಗಳ ಸಿಬ್ಬಂದಿಯೊಬ್ಬರನ್ನು ಇದಕ್ಕಾಗಿ ನಿಯೋಜಿಸಲಾಗಿದೆ’ ಎಂದು ತಿಳಿಸಲಾಗಿದೆ.

ಪೊಲೀಸರಿಗೆ ಕಮಿಷನರ್‌ ನೀಡಿರುವ ಸಲಹೆಗಳು

* ಸಾಬೂನು ಹಾಗೂ ಸ್ಯಾನಿಟೈಸರ್ ಬಳಸಿ ಆಗಾಗ ಕೈ ತೊಳೆದುಕೊಳ್ಳಬೇಕು

* ಠಾಣೆ ಹಾಗೂ ಕಚೇರಿ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು

* ಪರಸ್ಪರ ಹಸ್ತಲಾಘವ ನೀಡುವುದನ್ನು ನಿಯಂತ್ರಿಸಿಕೊಳ್ಳಬೇಕು

* ಜನಸಂದಣಿ ಪ್ರದೇಶಗಳಿಗೆ ಭೇಟಿ ಮಾಡಿದಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು

* ಸಾರ್ವಜನಿಕರೊಂದಿಗೆ ಮಾತನಾಡುವಾಗ 3 ಅಡಿ ದೂರ ನಿಂತುಕೊಳ್ಳಬೇಕು

* ಕೋವಿಡ್–19 ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ದೃಢಪಟ್ಟರೆ ಠಾಣಾಧಿಕಾರಿಗೆ ತಿಳಿಸಿ ರಜೆ ಪಡೆದುಕೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT