ಶುಕ್ರವಾರ, ಜನವರಿ 27, 2023
27 °C

‘ಡಾ.ರಾಜ್‌ಕುಮಾರ್‌ ಪರದೆ’: ನಿತ್ಯ ಚಿತ್ರ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್‌ಕುಮಾರ್‌ ಅವರ 206 ಚಿತ್ರಗಳ ತುಣುಕು, ಪಾತ್ರವರ್ಗ ಸೇರಿ ಎಲ್ಲ ರೀತಿಯ ಚಿತ್ರಮಾಹಿತಿಯನ್ನು ಪ್ರತಿ ದಿನವೂ ನೀಡುವ ‘ಡಾ.ರಾಜ್‌‌ಕುಮಾರ್‌ ಪರದೆ’ ಯಡಿಯೂರು ವಾರ್ಡ್‌ನಲ್ಲಿ ಆರಂಭಗೊಂಡಿದೆ.

‘ಡಾ.ರಾಜ್‌ಕುಮಾರ್ ರಂಗಮಂದಿರ’ದ ಮುಂಭಾಗದಲ್ಲಿ 10x12 ಅಡಿಗಳ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 6ರಿಂದ 10 ಹಾಗೂ ಸಂಜೆ 5ರಿಂದ 10ರವರೆಗೆ ರಾಜ್‌ಕುಮಾರ್ ಅವರ ಚಲನಚಿತ್ರಗಳ ತುಣುಕುಗಳು, ಪಾತ್ರವರ್ಗ, ನಿರ್ದೇಶಕರು, ನಿರ್ಮಾಪಕರು ಮತ್ತು ಇತರೆ ತಾಂತ್ರಿಕವರ್ಗದವರ ಸಂಪೂರ್ಣ ಮಾಹಿತಿಯನ್ನು ಪರದೆಯಲ್ಲಿ ಬಿತ್ತರಿಸಲಾಗುತ್ತದೆ. ಅಲ್ಲದೆ, ರಾಜ್‌ಕುಮಾರ್‌ ಅವರು ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮಗಳ ವಿಡಿಯೊ, ಪದ್ಮಭೂಷಣ, ಕರ್ನಾಟಕ ರತ್ನ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪಡೆದ ತುಣುಕುಗಳು ಪ್ರಸಾರವಾಗಲಿವೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ವ್ಯಾಪ್ತಿಯ ಶಾಸ್ತ್ರೀನಗರ ಮತ್ತು ತ್ಯಾಗರಾಜನಗರ ಬಡಾವಣೆ ನಡುವೆ ಬಿಬಿಎಂಪಿ ವತಿಯಿಂದ ₹4 ಕೋಟಿ ವೆಚ್ಚದಲ್ಲಿ ಮೂರು ಮಹಡಿಗಳ ‘ಡಾ. ರಾಜ್‌ಕುಮಾರ್ ರಂಗಮಂದಿರ’ ಹಾಗೂ ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ  ‘ಶಾರದಾ ದೇವಿ ಮಹಿಳಾ ಹೊಲಿಗೆ ತರಬೇತಿ ಕೇಂದ್ರ’ಕ್ಕೆ ಕಂದಾಯ ಸಚಿವ ಆರ್‌. ಅಶೋಕ್‌ ಸೋಮವಾರ ಚಾಲನೆ ನೀಡಿದರು.

‘ಸಾಧಕರೊಬ್ಬರ ಬಗ್ಗೆ ನಿತ್ಯವೂ ಚಿತ್ರ ಮಾಹಿತಿಯನ್ನು ಒದಗಿಸುವ ಇಂತಹ ಪರದೆ ದೇಶದಲ್ಲೇ ಮೊದಲು’ ಎಂದು ಬಿಬಿಎಂಪಿ ಮಾಜಿ ಸದಸ್ಯೆ ಪೂರ್ಣಿಮಾ ರಮೇಶ್ ಹೇಳಿದರು.

‘ಡಾ. ರಾಜ್‌ಕುಮಾರ್ ರಂಗಮಂದಿರ’ದ ಒಂದನೇ ಮಹಡಿಯಲ್ಲಿ 150ಕ್ಕೂ ಹೆಚ್ಚು ಮಂದಿ ಯೋಗ ತರಬೇತಿ ಪಡೆಯಲು ಯೋಗಮಂದಿರ, ಎರಡನೇ ಮಹಡಿಯಲ್ಲಿ ಅತ್ಯಾಧುನಿಕ ಜಿಮ್‌, ರಂಗಭೂಮಿ ಚಟುವಟಿಕೆ ಪ್ರೋತ್ಸಾಹಿಸಲು ನೆಲಮಹಡಿಯಲ್ಲಿ ರಂಗವೇದಿಕೆ ನಿರ್ಮಿಸಲಾಗಿದೆ ಎಂದರು.

ಶಾಸ್ತ್ರೀನಗರದಲ್ಲಿ ‘ಶಾರದಾ ದೇವಿ ಮಹಿಳಾ ಹೊಲಿಗೆ ತರಬೇತಿ ಕೇಂದ್ರ’ ನಿರ್ಮಿಸಲಾಗಿದ್ದು, ಹೊಲಿಗೆ ತರಬೇತಿಯಲ್ಲದೇ ಎಂಬ್ರಾಯಿಡರಿ, ನಿಟ್ಟಿಂಗ್‌ ತರಬೇತಿಗಳನ್ನೂ ಉಚಿತವಾಗಿ ನೀಡಲಾಗುತ್ತದೆ ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್. ಆರ್. ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು