ಸೋಮವಾರ, ಜನವರಿ 20, 2020
24 °C
ಗಂಭೀರ ಪ್ರಕರಣ ನಡೆದಿದ್ದರೆ ಸ್ವಯಂಪ್ರೇರಿತ ಮೊಕದ್ದಮೆ ದಾಖಲು: ಪೊಲೀಸ್‌ ಕಮಿಷನರ್‌

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ‘ಮತ್ತು’: 426 ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ (ಡಿ. 31) ಪಾನಮತ್ತರಾಗಿ ವಾಹನ ಚಲಾಯಿಸುವ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ 426 ಪ್ರಕರಣಗಳನ್ನು ದಾಖಲಿಸಿಕೊಂಡು, ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಬುಧವಾರ ಮಾತನಾಡಿದ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌, ‘ಪೂರ್ವ ವಿಭಾಗದಲ್ಲಿ 99, ಪಶ್ಚಿಮ ವಿಭಾಗದಲ್ಲಿ 254, ಉತ್ತರ ವಿಭಾಗದಲ್ಲಿ 73 ಪ್ರಕರಣಗಳನ್ನು ದಾಖಲಿಸಿಕೊಂಡು, ವಾಹನಗಳ ಚಾಲಕರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.

‘ಹೊಸ ವರ್ಷದ ಆಚರಣೆ ವೇಳೆ ನಡೆದಿರುವ ಘಟನೆಗಳ ಬಗ್ಗೆ  ಮುಖ್ಯಮಂತ್ರಿ, ಗೃಹ ಸಚಿವ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕ
ರಿಗೆ ಸಂಪೂರ್ಣ ಮಾಹಿತಿ ನೀಡಿದ್ದೇನೆ’ ಎಂದೂ ಹೇಳಿದರು.

‘ಹೊಸ ವರ್ಷಾಚರಣೆ ವೇಳೆ ನಾವು (ಪೊಲೀಸರು) ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯ ನಿರ್ವಹಿಸಿದ್ದೇವೆ. ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ ಮುಂತಾದ ಕಡೆಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಭ್ರಮಾಚರಣೆ ಯಲ್ಲಿ ಭಾಗವಹಿಸಿದ್ದರು. ಅದರಲ್ಲೂ ಕೋರಮಂಗಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದರು. ನಮ್ಮ ಸಿಬ್ಬಂದಿ ತಾಳ್ಮೆಯಿಂದ ಕೆಲಸ ಮಾಡಿದ್ದಾರೆ. ಮೂರು ಲಕ್ಷದಷ್ಟು ಜನರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದರು.

‘ನಮಗೆ ಬಂದ ಮಾಹಿತಿ ಪ್ರಕಾರ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಅಹಿತಕರ ಘಟನೆಗಳು ಸಂಭವಿಸಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೆವು. ಆದರೆ, ಯಾವುದೇ ಪ್ರಕರಣ ವರದಿಯಾಗಿಲ್ಲ. ಒಂದು ವೇಳೆ ಏನಾದರೂ ಗಂಭೀರ ಪ್ರಕರಣಗಳು ನಡೆದಿದ್ದರೆ, ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತೇವೆ’ ಎಂದರು.

ಬುಧವಾರ ರಾತ್ರಿ ಬ್ರಿಗೇಡ್ ರಸ್ತೆಯಲ್ಲಿ ಯುವಕನಿಗೆ ಯುವತಿ ಚಪ್ಪಲಿಯಲ್ಲಿ ಹೊಡೆದ ಪ್ರಕರಣವನ್ನು ಕಮಿಷನರ್‌ ಗಮನಕ್ಕೆ ತಂದಾಗ, ‘ಯುವತಿ ಸರಿಯಾದ ಉತ್ತರ ಕೊಟ್ಟಿದ್ದಾರೆ. ಆ ಯುವಕ ಈ ಘಟನೆಯನ್ನು ತನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ಇನ್ನೊಮ್ಮೆ ಆ ರೀತಿಯ ಕೆಲಸ ಮಾಡುವುದಿಲ್ಲ’ ಎಂದೂ ಅಭಿಪ್ರಾಯಪಟ್ಟರು.

ಮೆಟ್ರೊ: 4.43 ಲಕ್ಷ ಜನರ ಪ್ರಯಾಣ
ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡು ಜನ, ಮನೆಗೆ ತೆರಳಲು ಹೆಚ್ಚು ಬಳಸಿದ್ದು ಮೆಟ್ರೊ ರೈಲನ್ನು. ಮಂಗಳವಾರ ರಾತ್ರಿ 11.30ರಿಂದ ಬುಧವಾರ ತಡರಾತ್ರಿ 2 ಗಂಟೆಯವರೆಗೆ ಮೆಟ್ರೊದಲ್ಲಿ 32 ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸಿದ್ದಾರೆ.

ಇಡೀ ದಿನದಲ್ಲಿ ಒಟ್ಟು 4,43,865 ಜನ ಮೆಟ್ರೊ ಸೇವೆ ಬಳಸಿಕೊಂಡಿದ್ದಾರೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.

ಇಂದಿನಿಂದ ರಾತ್ರಿ 12ರವರೆಗೆ ಮೆಟ್ರೊ: ಜ.2ರಿಂದ (ಗುರುವಾರ) ಮೆಟ್ರೊ ರೈಲುಗಳು ರಾತ್ರಿ 12ರವರೆಗೆ ಸಂಚರಿಸಲಿವೆ ಎಂದು ನಿಗಮ ಹೇಳಿದೆ. ಬೆಳಿಗ್ಗೆ 5ರಿಂದ ಸಂಚಾರ ಆರಂಭವಾಗಲಿದ್ದು, ರಾತ್ರಿ 12.30ರ ವೇಳೆಗೆ ಸೇವೆ ಮುಕ್ತಾಯವಾಗಲಿದೆ ಎಂದು ನಿಗಮ ಹೇಳಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು