ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಪತ್ರ ತಡೆಹಿಡಿಯುವ ಕಾಲೇಜುಗಳು

ವಿದ್ಯಾರ್ಥಿಗಳಿಂದ ನ್ಯಾಯಕ್ಕಾಗಿ ಮೊರೆ: ತೀವ್ರ ಹೋರಾಟದ ಎಚ್ಚರಿಕೆ
Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಹಲವಾರು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಶಿಕ್ಷಣ ಸಾಲ ಮತ್ತು ವೈಯಕ್ತಿಕ ಕಾರಣಗಳಿಂದ ಕೋರ್ಸುಗಳನ್ನು ಮೊಟಕುಗೊಳಿಸಿ ಬೇರೆ ಕಾಲೇಜುಗಳಿಗೆ ಸೇರುವ ಪ್ರಮೇಯ ಇದೆ. ಆದರೆ ಮೂಲ ದಾಖಲೆಗಳನ್ನು ನೀಡುವಲ್ಲಿ ಕಾಲೇಜುಗಳು ಸತಾಯಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕ್ಯಾಂಪಸ್‌ ಫ್ರಂಟ್ ಆಫ್‌ ಇಂಡಿಯಾ (ಸಿಎಫ್‌ಐ) ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಿಷಯದಲ್ಲಿ ತೀವ್ರ ಹೋರಾಟ ನಡೆಸಲು ಮುಂದಾಗಿದ್ದು, ಸರ್ಕಾರ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆದೇಶವನ್ನು ಎಲ್ಲ ಎಂಜಿನಿಯರಿಂಗ್‌ ಕಾಲೇಜುಗಳು ಪಾಲಿಸಬೇಕು ಎಂದು ಆಗ್ರಹಿಸಿದೆ.

ಹಲವು ಕಾರಣಗಳಿಗಾಗಿ ವಿದ್ಯಾರ್ಥಿಗಳು ತಾವು ಸೇರಿದ್ದ ಕಾಲೇಜು ಬಿಟ್ಟು ಬೇರೆ ಕಾಲೇಜು ಸೇರುವ ಪ್ರಮೇಯ ಬರುತ್ತದೆ. ಆಗ ಹೊಸ ಕಾಲೇಜಿನಲ್ಲಿ ಮೂಲ ದಾಖಲೆಗಳನ್ನು ಕೇಳುತ್ತಾರೆ. ಆದರೆ ಈ ಹಿಂದೆ ದಾಖಲಾಗಿದ್ದ ಕಾಲೇಜುಗಳ ಆಡಳಿತ ಮಂಡಳಿಯು ದಾಖಲೆ ಪತ್ರವನ್ನು ನೀಡಲು ನಿರಾಕರಿಸುತ್ತಿವೆ. ಕಾಲೇಜಿನ ಈ ನಿಯಮದಿಂದ ವಿದ್ಯಾರ್ಥಿಗಳು ಅತಂತ್ರಗೊಂಡು ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗಿದೆ ಎಂದು ಸಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಕಿರ್ ತಿಳಿಸಿದ್ದಾರೆ.

ಆದೇಶದಲ್ಲಿ ಏನಿದೆ?: ಸರ್ಕಾರ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆದೇಶದಂತೆ ವಿದ್ಯಾರ್ಥಿಗಳು ಶಿಕ್ಷಣವನ್ನು ಅನಾರೋಗ್ಯ ಹಾಗೂ ಬೇರೆ ಶಿಕ್ಷಣ ಸಂಸ್ಥೆಗಳಿಗೆ ಸೇರಬಯಸುವ ಮತ್ತು ಇನ್ನೂ ಹಲವು ಕಾರಣಗಳಿಂದ ಮೊಟಕುಗೊಳಿಸಿದರೆ, ಅವರ ಮೂಲ ದಾಖಲೆ ಪತ್ರವನ್ನು ತಡೆಹಿಡಿಯುವಂತಿಲ್ಲ. ಒಂದು ವೇಳೆ ಇಂತಹ ಬೆಳವಣಿಗೆಗಳು ಕಂಡುಬಂದಲ್ಲಿ ಅಂತಹ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ವಿಟಿಯು ಅಧೀನದಲ್ಲಿರುವ ರಾಜ್ಯದ ಎಲ್ಲ ಖಾಸಗಿ ಕಾಲೇಜುಗಳಿಗೆ ಸುತ್ತೋಲೆಯ ಮೂಲಕ ಆದೇಶಿಸಲಾಗಿತ್ತು.

ಆದರೆ ಹಲವು ಎಂಜಿನಿಯರಿಂಗ್‌ ಕಾಲೇಜುಗಳು ಇಲಾಖೆಯ ಆದೇಶವನ್ನು ಉಲ್ಲಂಘಿಸಿ ದಾಖಲೆ ಪತ್ರವನ್ನು ಕೇಳಲು ಹೋದ ವಿದ್ಯಾರ್ಥಿಗಳಿಗೆ ಸಂಪೂರ್ಣ 4 ವರ್ಷದ ಶುಲ್ಕವನ್ನು ಪಾವತಿಸಲು ಸೂಚಿಸುತ್ತಿವೆ. ಇಲ್ಲದಿದ್ದರೆ ತಮ್ಮ ಮೂಲ ಪ್ರಮಾಣಪತ್ರವನ್ನು ನೀಡಲು ಅಸಾಧ್ಯ ಎಂದು ಹೇಳುತ್ತಿವೆ.

ಸಂಸ್ಥೆಗಳ ಈ ನಿರ್ಧಾರದಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಮುಂದಿನ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೋಗಲು ಅಸಾಧ್ಯವಾಗಿ ಅತಂತ್ರರಾಗಿದ್ದಾರೆ. ಈ ಬಗ್ಗೆ ಹಲವಾರು ದೂರುಗಳು ಜಿಲ್ಲಾಧಿಕಾರಿಯವರ ಮೂಲಕ ಸಂಬಂಧಪಟ್ಟವರಿಗೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ತಾಂತ್ರಿಕ ಶಿಕ್ಷಣ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇಂತಹ ವಿದ್ಯಾಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮಹಮ್ಮದ್ ಶಾಕಿರ್ ಅವರು ಆಗ್ರಹಿಸಿದ್ದಾರೆ.

*
ಶೀಘ್ರ ನ್ಯಾಯ ದೊರಕದೆ ಇದ್ದಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿ ರಾಜ್ಯಮಟ್ಟದಲ್ಲಿ ಹೋರಾಟ ಸಂಘಟಿಸಲಿದ್ದೇವೆ.
-ಮಹಮ್ಮದ್ ಶಾಕಿರ್, ಸಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT