ಗುರುವಾರ , ಆಗಸ್ಟ್ 11, 2022
24 °C
ಅಂಗವಿಕಲ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

‘ಶ್ರವಣ ದೋಷಕ್ಕೆ ಶೀಘ್ರ ಪತ್ತೆಯೇ ಪರಿಹಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಕ್ಕಳಲ್ಲಿ ಶ್ರವಣದೋಷ ಸಮಸ್ಯೆ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಪತ್ತೆ ಮಾಡಿದಲ್ಲಿ ಸುಲಭವಾಗಿ ಪರಿಹಾರ ಒದಗಿಸಬಹುದು’ ಎಂದು ಮೆಡಿಕೇರಿ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನ ಡಾ. ಶಂಕರ್ ಮೆಡಿಕೇರಿ ತಿಳಿಸಿದರು.

ವಿಶ್ವ ಅಂಗವಿಕಲರ ದಿನದ ಪ್ರಯುಕ್ತ ರೋಟರಿ ಬೆಂಗೂರು ಪಶ್ಚಿಮ ವಲಯವು ನಗರದಲ್ಲಿ ಗುರುವಾರ ಹಮ್ಮಿಕೊಂಡ ‘ಜ್ಞಾನ ದೀವಿಗೆ’ ಕಾರ್ಯಕ್ರಮದಲ್ಲಿ 10ನೇ ತರಗತಿಯ ಅಂಗವಿಕಲ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ಮಾತನಾಡಿದರು.

‘ಅಂಗವಿಕಲರ ಅಗತ್ಯ ಮತ್ತು ಸಮಸ್ಯೆ ಅರಿತು, ಸಹಾಯ ಮಾಡಬೇಕಿದೆ. ಕೆಲವರಿಗೆ ಹುಟ್ಟುವಾಗಲೇ ಶ್ರವಣದೋಷದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಗು ಹುಟ್ಟಿದ ಕೆಲ ದಿನಗಳಲ್ಲೇ ಶ್ರವಣ ದೋಷ ಪರೀಕ್ಷೆ ನಡೆಸಬೇಕು. ಶ್ರವಣದೋಷದ ತೀವ್ರತೆ ಹೆಚ್ಚಿದಂತೆ ಅದರ ಚಿಕಿತ್ಸೆಯೂ ಸವಾಲಾಗುತ್ತಾ ಹೋಗುತ್ತದೆ. ಈ ಸಮಸ್ಯೆಯ ಪ್ರಮಾಣವನ್ನು ಅಳೆಯಲು ನಿರ್ದಿಷ್ಟ ಪರೀಕ್ಷೆಗಳಿವೆ’ ಎಂದರು.

‘ಶ್ರವಣ ದೋಷವನ್ನು ಬೇಗ ಗುರುತಿಸಿದಲ್ಲಿ ಔಷಧಗಳಿಂದಲೇ ಕೆಲವರಿಗೆ ವಾಸಿಮಾಡಬಹುದು. ಕೆಲವರಿಗೆ ಶ್ರವಣ ಸಾಧನಗಳ ಅಗತ್ಯ ಇರುತ್ತದೆ. ಇನ್ನೂ ಕೆಲವರಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಈ ಮಾದರಿಯ ಶಸ್ತ್ರಚಿಕಿತ್ಸೆ ದುಬಾರಿ. ಇದರಿಂದಾಗಿ ಬಡ–ಮಧ್ಯಮ ವರ್ಗದವರಿಗೆ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಕಷ್ಟ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ವಿವಿಧ ಯೋಜನೆಗಳಡಿ ಬಿಪಿಎಲ್ ಕಾರ್ಡ್‌ ಹೊಂದಿರುವವರಿಗೆ ಈ ಶಸ್ತ್ರಚಿಕಿತ್ಸೆಗೆ ನೆರವು ನೀಡುತ್ತಿವೆ’ ಎಂದರು.

ರೋಟರಿ ಬೆಂಗಳೂರು ಪಶ್ಚಿಮ ವಲಯದ ಅಧ್ಯಕ್ಷ ಡಾ. ನಟೇಶ್ ಬಾಬು, ‘ಕೋವಿಡ್‌ನಿಂದಾಗಿ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿದೆ. ಹಾಗಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಠ್ಯ ಒಳಗೊಂಡ ಟ್ಯಾಬ್ ವಿತರಿಸಲಾಗುತ್ತಿದೆ. ಫಲಿತಾಂಶ ಕಡಿಮೆ ಇರುವ ಹಾಗೂ ದಾನಿಗಳು ಇಚ್ಛಿಸಿದ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ರಾಜ್ಯದ ವಿವಿಧೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು