ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳ | ಪಿಯು ನಂತರದ ಆಯ್ಕೆ ‘ಭವಿಷ್ಯದ ಬದುಕು’: ನಟ ರಮೇಶ್‌

Published 23 ಏಪ್ರಿಲ್ 2023, 4:44 IST
Last Updated 23 ಏಪ್ರಿಲ್ 2023, 4:44 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯು ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕೋರ್ಸ್‌ ಓದಿಗಷ್ಟೇ ಸೀಮಿತವಲ್ಲ, ಅದು ಭವಿಷ್ಯದ ಬದುಕಿನ ದಾರಿಯೂ ಆಗಿರುತ್ತದೆ. ಆ ಆಯ್ಕೆ ವಿದ್ಯಾರ್ಥಿಗಳ ಆಸಕ್ತಿ, ಆಕರ್ಷಣೆಯ ವಿಷಯವಾಗಿರಲಿ ಎಂದು ನಟ ರಮೇಶ್ ಅರವಿಂದ್‌ ಆಶಿಸಿದರು.

’ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಶನಿವಾರ ಸಿಇಟಿ, ನೀಟ್‌ ವಿದ್ಯಾರ್ಥಿಗಳಿಗಾಗಿ ಆಯೋಜಸಿದ್ದ ‘ಎಡ್ಯುವರ್ಸ್‌: ವಿದ್ಯಾರ್ಥಿಗಳ ದಾರಿದೀಪ’ ಉದ್ಘಾಟಿಸಿ ಅವರು ಮಾತನಾಡಿದರು.

ಸಿಇಟಿ, ನೀಟ್‌ ಬರೆಯುವ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಮುಖ್ಯ. ಹಾಡು, ನೃತ್ಯ, ನಟನೆ ಗೊತ್ತಿಲ್ಲದೆ ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಯಶಸ್ವಿಯಾಗುವುದು ಕಷ್ಟವಾಗುತ್ತದೆ. ಶಿಕ್ಷಣದ ವಿಷಯದ ಆಯ್ಕೆಯೂ ಹಾಗೆ. ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಸ್ವಾಭಾವಿಕ ಸೆಳೆತದ ಮೇಲೆ ನಿರ್ಧರಿಸಬೇಕು. ಅದಕ್ಕೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿರುವ ‘ಎಡ್ಯುವರ್ಸ್‌’ ಸೂಕ್ತ ಮಾರ್ಗದರ್ಶನ ನೀಡುತ್ತಿದೆ ಎಂದು ಶ್ಲಾಘಿಸಿದರು.

ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕೋರ್ಸ್‌ ಜ್ಞಾನದ ಜತೆಗೆ, ಭವಿಷ್ಯವನ್ನೂ ಭದ್ರಮಾಡಬೇಕು. ಆದಾಯದ ಮೂಲವೂ ಆಗಬೇಕು. ಜೀವನಕ್ಕೆ ಆದಾಯವೂ ಮುಖ್ಯ. ಆಯ್ಕೆ ಮಾಡಿಕೊಂಡ ವೃತ್ತಿಯ ಜತೆಗೆ ನಿವೃತ್ತಿಯವರೆಗೂ ಸಾಗಬೇಕಿದೆ. ಅದಕ್ಕಾಗಿ ಮುಂದೊಂದು ದಿನ ವೃತ್ತಿಯ ಆಯ್ಕೆ ತಪ್ಪು ಎನಿಸದಂತೆ ಪಿಯು ಮುಗಿದಾಗಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

‘ನ್ಯೂಸ್‌ಫಸ್ಟ್‌’ ವಾಹಿನಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ರವಿಕುಮಾರ್, ವಿದ್ಯಾರ್ಥಿಗಳು ಭವಿಷ್ಯದ ಜೀವನ ರೂಪಿಸಿಕೊಳ್ಳಲು ‘ಎಡ್ಯುವರ್ಸ್‌’ ದಾರಿದೀಪವಾಗಿದೆ. ಪಿಯು ಫಲಿತಾಂಶದಲ್ಲಿ ಕಡಿಮೆ ಬಂದಿದೆ ಎಂದು ಬೇಸರ ಮಾಡಿಕೊಳ್ಳದೇ ಸಿಇಟಿಯಲ್ಲಿ ಹೆಚ್ಚು ರ್‍ಯಾಂಕ್‌ ಪಡೆಯಲು ಗಮನಹರಿಸ
ಬೇಕು ಎಂದು ಸಲಹೆ ನೀಡಿದರು.

‘ಆ್ಯಡ್‌ 6 ಅಡ್ವರ್ಟೈಸಿಂಗ್‌ ವ್ಯಸ್ಥಾಪಕ ನಿರ್ದೇಶಕಿ ಕೆ.ವಿಜಯಕಲಾ ಸುಧಾಕರ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ, ಟಿಪಿಎಂಎಲ್‌ ಮಾರಾಟ ವಿಭಾಗದ ಮುಖ್ಯಸ್ಥ ಆನಂದ್‌ ಉಪಸ್ಥಿತರಿದ್ದರು.

ಕೃಷ್ಣೇಗೌಡ
ಕೃಷ್ಣೇಗೌಡ

‘ಸ್ಕೋಪ್‌ ಕೋರ್ಸ್‌’ ಬೆನ್ನತ್ತಬೇಡಿ: ಕೃಷ್ಣೇಗೌಡ

‘ಸ್ಕೋಪ್‌ ಕೋರ್ಸ್‌’ಗಳ ಬೆನ್ನುಹತ್ತದೆ ಪೋಷಕರು ತಮ್ಮ ಮಕ್ಕಳಿಗೆ ಸಮಾಜಮುಖಿ ವಿಷಯಗಳ ಆಯ್ಕೆಗೆ ಮಾರ್ಗದರ್ಶನ ಮಾಡಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಎಂ.ಕೃಷ್ಣೇಗೌಡ ಹೇಳಿದರು.

‘ಎಡ್ಯುವರ್ಸ್‌: ವಿದ್ಯಾರ್ಥಿಗಳ ದಾರಿದೀಪ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಚ್ಚಿನ ಪೋಷಕರಿಗೆ ಮಕ್ಕಳು ಚೆನ್ನಾಗಿ ಓದಿ ನಮ್ಮಂತೆ ಹೆಚ್ಚಿನ ಸಂಪಾದನೆ ಮಾಡಬೇಕು. ಮನೆ, ಕಾರು, ಆಸ್ತಿ ಸಂಪಾದಿಸಬೇಕು ಎನ್ನುವುದೇ ಧ್ಯೇಯವಾಗಿರುತ್ತದೆ. ಸಮಾಜದಲ್ಲಿನ ಶ್ರೀಮಂತರೇ ಅವರಿಗೆ ಆದರ್ಶ. ಅದಕ್ಕಾಗಿಯೇ ಅವರು ‘ಸ್ಕೋಪ್‌ ಕೋರ್ಸ್’ಗಳ ಮೊರೆ ಹೋಗುತ್ತಾರೆ. ಮಗ ಜ್ಞಾನಿ, ಬುದ್ಧಿವಂತನಾಗಲು ಕೋರ್ಸ್‌ ಆಯ್ಕೆ ಮಾಡಬೇಕು ಎನ್ನುವವರ ಸಂಖ್ಯೆ ಕಡಿಮೆ. ಹೆಚ್ಚಿನ ಅಂಕಗಳ ಮೋಹವೂ ಇದೇ ಕಾರಣಕ್ಕೆ ಹುಟ್ಟಿಕೊಳ್ಳುತ್ತದೆ. ಅದಕ್ಕಾಗಿಯೇ, ಮಕ್ಕಳ ಶಿಕ್ಷಣವನ್ನು ಭವಿಷ್ಯದ ಹೂಡಿಕೆಯಾಗಿ ನೋಡುತ್ತಾರೆ ಎಂದು ವಿಶ್ಲೇಷಿಸಿದರು. ‘ಮಕ್ಕಳು ಕಡಿಮೆ ಅಂಕ ಪಡೆದಾಗ, ಹಿನ್ನಡೆ ಅನುಭವಿಸಿದಾಗ ‘ನಿನ್ನ ಜತೆ ನಾನಿದ್ದೇನೆ. ಹೆದರಬೇಡ’ ಎನ್ನುವವರು, ತಪ್ಪು ಮಾಡಿದಾಗ ನಯವಾಗಿ ತಿದ್ದುವವರು ನಿಜವಾದ ಪೋಷಕರು. ಪೋಷಕರ ನಡವಳಿಕೆಯೇ ಮಕ್ಕಳಿಗೆ ಮಾದರಿ. ಅದಕ್ಕಾಗಿ ಕುಟುಂಬಗಳಲ್ಲಿ ಹೊಂದಾಣಿಕೆ ಇರಬೇಕು. ಮಕ್ಕಳಿಗೆ ಸ್ವಾತಂತ್ರ್ಯ ಕೊಡಬೇಕು. ಅದು ಕಣ್ಗಾವಲಿನಲ್ಲಿರಬೇಕು. ಶಿಸ್ತು ಬೇಕು. ಆದರೆ, ನಾವು ಹೇಳಿದಂತೆಯೇ ಕೇಳಬೇಕು ಎನ್ನುವ ಹಟ ಇರಬಾರದು. ಆಯ್ಕೆಯ ಸ್ವಾತಂತ್ರ್ಯ ನೀಡಬೇಕು. ಹೇರಿಕೆ ಇಲ್ಲದ ಮಾರ್ಗ
ದರ್ಶನವಷ್ಟೇ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಕಡಿಮೆ ಅಂಕ, ಅನುತ್ತೀರ್ಣದಿಂದ ನಡೆಯುವ ಆತ್ಮಹತ್ಯೆ ಪ್ರಕರಣಗಳಿಗೆ ಪೋಷಕರ ಜತೆಗೆ ಸಮಾಜವೂ ಹೊಣೆಯಾಗಬೇಕಾಗುತ್ತದೆ. ಸವಾಲುಗಳನ್ನು ಮೆಟ್ಟಿನಿಲ್ಲುವ ಆತ್ಮವಿಶ್ವಾಸ ಮೂಡಿಸದೇ ಹೋದರೆ ಇಂತಹ ಅವಘಡಗಳು ಸಂಭವಿಸುತ್ತವೆ. ಸಣ್ಣ ಸಂತೋಷವನ್ನು ಅತಿಯಾಗಿ ಸಂಭ್ರಮಿಸುವ, ಸಣ್ಣ ದುಃಖಕ್ಕೆ ಸೋಲುವ ಮನಸ್ಸುಗಳೆರಡೂ ಅಪಾಯಕಾರಿ ಎಂದರು.

ಪತ್ರಕರ್ತ ರಾಘವೇಂದ್ರ ಆಚಾರ್ಯ ಇದ್ದರು. ‘ಪ್ರಜಾವಾಣಿ’ ಉಪ ಸಂಪಾದಕಿ ಕೆ.ಬಿ.ಶುಭಾ ಸಂವಾದ ನಡೆಸಿಕೊಟ್ಟರು.


ಓದುಗರ ಪ್ರೀತಿಗೆ ‘ಎಡ್ಯುವರ್ಸ್‌’ ಕೊಡುಗೆ

‘ಪ್ರಜಾವಾಣಿ’ 75 ವಸಂತ ದಾಟಿದ್ದರೂ 18ರ ಯುವತಿಯ ಕುತೂಹಲ, 35 ವಯಸ್ಸಿನ ಮಹಿಳೆಯ ಅಕ್ಕರೆ, 60ರ ಜೀವನ ಪಕ್ವತೆ ಹೊಂದಿರುವ ಪರಿಪೂರ್ಣ ಮಹಿಳೆಯಂತಿದೆ. 75 ವರ್ಷ ಪ್ರೀತಿ ತೋರಿದ ಓದುಗರಿಗೆ ಏನಾದರೂ ನೀಡಬೇಕು ಎಂಬ ಹಂಬಲವೇ ಈ ‘ಎಡ್ಯುವರ್ಸ್’ ಎಂದು ರಮೇಶ್‌ ಅರವಿಂದ್‌ ಬಣ್ಣಿಸಿದರು.‘ಪ್ರಜಾವಾಣಿ’ 75 ವಸಂತ ದಾಟಿದ್ದರೂ 18ರ ಯುವತಿಯ ಕುತೂಹಲ, 35 ವಯಸ್ಸಿನ ಮಹಿಳೆಯ ಅಕ್ಕರೆ, 60ರ ಜೀವನ ಪಕ್ವತೆ ಹೊಂದಿರುವ ಪರಿಪೂರ್ಣ ಮಹಿಳೆಯಂತಿದೆ. 75 ವರ್ಷ ಪ್ರೀತಿ ತೋರಿದ ಓದುಗರಿಗೆ ಏನಾದರೂ ನೀಡಬೇಕು ಎಂಬ ಹಂಬಲವೇ ಈ ‘ಎಡ್ಯುವರ್ಸ್’ ಎಂದು ರಮೇಶ್‌ ಅರವಿಂದ್‌ ಬಣ್ಣಿಸಿದರು.

‘ಪೆಲೆ’ ಗುರಿ ನಿಮ್ಮದಾಗಲಿ...

ವಿಷಯ ಆಯ್ಕೆ, ಬದುಕು ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ಫುಟ್‌ಬಾಲ್ ದಂತಕಥೆ ಪೆಲೆ ಮಾದರಿಯಾಗಬೇಕು. ಫುಟ್‌ಬಾಲ್ ಆಡುವಾಗ ಎಲ್ಲರೂ ಬಾಲ್‌ ಮೇಲೆ ಗಮನಹರಿಸಿದರೆ, ಪೆಲೆ ದೃಷ್ಟಿ  ಸದಾ ಗೋಲು ಗಳಿಸುವತ್ತ ನೆಟ್ಟಿರುತ್ತಿತ್ತು. ಹಾಗಾಗಿಯೇ ಅತಿ ಹೆಚ್ಚು ಯಶಸ್ಸು ತಮ್ಮದಾಗಿಸಿಕೊಂಡರು ಎಂದು ನಟ ರಮೇಶ್‌ ಅರವಿಂದ್‌ ಉದಾಹರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT