ಗುರುವಾರ , ಮೇ 26, 2022
28 °C

ನೀವೇ ವಾಹನ ಚಲಾಯಿಸಿ, ಕರ್ನಾಟಕ ನೋಡಿ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಸರ್ಕಾರ ಅಧೀನದ ಜಂಗಲ್ ಲಾಡ್ಜಸ್‌ ಆ್ಯಂಡ್ ರೆಸಾರ್ಟ್ಸ್‌ ಲಿಮಿಟೆಡ್ ಕಂಪನಿಯು ಸ್ಕೈವೇ ಟ್ರಾವೆಲ್ಸ್‌ ಸಂಸ್ಥೆಯ ಸಹಯೋಗದೊಂದಿಗೆ ಪ್ರವಾಸ ಪ್ರಿಯರಿಗೆ ವಿಶಿಷ್ಟ ಸೌಲಭ್ಯವೊಂದನ್ನು ಕಲ್ಪಿಸಿದೆ. ರಾಜ್ಯದ ಪ್ರೇಕ್ಷಣೀಯ ಸ್ಥಳಗಳನ್ನು ತಮ್ಮ ವಾಹನದಲ್ಲಿ, ತಾವೇ ಚಲಾಯಿಸಿ ನೋಡುವ ವ್ಯವಸ್ಥೆಯನ್ನು ಕಂಪನಿ ನೀಡಿದೆ.

‘ಕೋವಿಡ್‌ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಸಮೇತ ಪ್ರವಾಸಕ್ಕೆ ತೆರಳಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆಯನ್ನು ತಂದಿದ್ದೇವೆ. ಪ್ರವಾಸ ಹೋಗಲು ಬಯಸುವವರು ತಮ್ಮ ವಾಹನದಲ್ಲಿಯೇ ಬರಬಹುದು ಅಥವಾ ವಾಹನವನ್ನು ಬಾಡಿಗೆ ಪಡೆಯಬಹುದು. ವಸತಿ, ಊಟ, ಉಪಾಹಾರ ಮತ್ತು ಮಾರ್ಗದರ್ಶನ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನಮ್ಮ ಕಂಪನಿಯಿಂದಲೇ ಒದಗಿಸುತ್ತೇವೆ’ ಎಂದು ಸ್ಕೈವೇ ಟ್ರಾವೆಲ್ಸ್‌ ನಿರ್ದೇಶಕ ಎಸ್. ಮಹಾಲಿಂಗಯ್ಯ ಹೇಳಿದರು.

‘ಇಟಲಿ, ಫ್ರಾನ್ಸ್‌ ಸೇರಿದಂತೆ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಈ ವ್ಯವಸ್ಥೆ ಜನಪ್ರಿಯವಾಗಿದೆ. ಪ್ರವಾಸ ಕೈಗೊಳ್ಳುವವರ ಸುರಕ್ಷತೆಗಾಗಿ ಭದ್ರತೆಯನ್ನೂ ಒದಗಿಸಲಾಗಿರುತ್ತದೆ. ಪ್ರವಾಸಿಗರ ವಾಹನದ ಜೊತೆಗೆ ನಮ್ಮ ಸಂಸ್ಥೆಯ ಗಸ್ತುವಾಹನವೂ ಸಾಗುತ್ತದೆ. ಜಿಪಿಎಸ್‌ ತಂತ್ರಜ್ಞಾನ ಬಳಸಿಕೊಂಡು ಎಲ್ಲ ಪ್ರವಾಸಿ ವಾಹನಗಳ ಮೇಲೂ ನಿಗಾ ಇಟ್ಟಿರುತ್ತೇವೆ. ಪ್ರವಾಸಿಗರು ನಿರಾತಂಕವಾಗಿ ಪ್ರವಾಸ ಮಾಡಬೇಕು ಎಂಬ ಉದ್ದೇಶ ನಮ್ಮದು’ ಎಂದು ಅವರು ತಿಳಿಸಿದರು.

‘ಬೇರೆ ಚಾಲಕನನ್ನು ಕೇಳಿದರೆ ಆ ವ್ಯವಸ್ಥೆಯನ್ನೂ ಮಾಡುತ್ತೇವೆ’ ಎಂದೂ ಅವರು ತಿಳಿಸಿದರು.

ನಾಲ್ಕು ದಿನ ಹಾಗೂ ಐದು ದಿನಗಳ ಪ್ರವಾಸಕ್ಕೆ ವ್ಯಕ್ತಿಯೊಬ್ಬರಿಗೆ ₹19 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ. ಟೋಲ್‌ ಅನ್ನು ಪ್ರವಾಸಿಗರೇ ಭರ್ತಿ ಮಾಡಬೇಕು. ವಾಹನದ ಸೌಲಭ್ಯವನ್ನೂ ಒದಗಿಸಬೇಕೆಂದರೆ ಪ್ರವಾಸಿಗರ ಸಂಖ್ಯೆ ಹಾಗೂ ದೂರ ಆಧರಿಸಿ ಪ್ರತ್ಯೇಕ ಶುಲ್ಕ ಇರುತ್ತದೆ ಎಂದು ಕಂಪನಿ ಹೇಳಿದೆ.

ಮಾಹಿತಿಗೆ, www.junglelodges.com ಮತ್ತು www.skywaytour.com ಅಥವಾ 080–4055 4055.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.