ಶುಕ್ರವಾರ, ಮೇ 27, 2022
21 °C

ಜಲಮಂಡಳಿ ಹುದ್ದೆಗಾಗಿ ನಕಲಿ ಅಂಕಪಟ್ಟಿ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಮಂಡಳಿಯ ’ಬಿ‘ ಹಾಗೂ ’ಸಿ‘ ದರ್ಜೆ ಹುದ್ದೆಗಳ ನೇಮಕಾತಿಗಾಗಿ ನಕಲಿ ಅಂಕಪಟ್ಟಿ ನೀಡಿದ ಆರೋಪದಡಿ ಅಭ್ಯರ್ಥಿಗಳಿಬ್ಬರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

‘ನಕಲಿ ಅಂಕಪಟ್ಟಿ ಸಂಬಂಧ ಜಲಮಂಡಳಿ ಆಡಳಿತಾಧಿಕಾರಿ ವಿದ್ಯಾಶ್ರೀ ಚಂದರಗಿ ಅವರು ದೂರು ನೀಡಿದ್ದಾರೆ. ಅಭ್ಯರ್ಥಿಗಳಾದ ಮುದ್ದೇಬಿಹಾಳ ತಾಲ್ಲೂಕಿನ ಸಂಗಪ್ಪ ಚವ್ಹಾಣ ಹಾಗೂ ದಾವಣಗೆರೆ ಜಿಲ್ಲೆಯ ಎನ್‌.ಮರಿಯಪ್ಪ ಎಂಬುವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜಲಮಂಡಳಿಯ 26 ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಅಂತಿಮ ಆಯ್ಕೆ ಪಟ್ಟಿ ಸಹ ಸಿದ್ಧಪಡಿಸಲಾಗಿತ್ತು. ಆಯ್ಕೆಯಾದ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ಪಡೆದುಕೊಂಡು ನೈಜತೆ ಪರಿಶೀಲನೆಗಾಗಿ ಆಯಾ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗಿತ್ತು. ಸಂಗಪ್ಪ ಹಾಗೂ ಮರಿಯಪ್ಪ ಅವರ ಅಂಕಪಟ್ಟಿ ನಕಲಿ ಎಂಬುದಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳೇ ವರದಿ ನೀಡಿದ್ದಾರೆ. ಅದನ್ನು ಆಧರಿಸಿ ವಿದ್ಯಾಶ್ರೀ ದೂರು ನೀಡಿದ್ದಾರೆ’ ಎಂದು ಹೇಳಿದರು.

‘ಆರೋಪಿ ಸಂಗಪ್ಪ, ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಂಕಪಟ್ಟಿ ನೀಡಿದ್ದರು. ಇನ್ನೊಬ್ಬ ಆರೋಪಿ ಮರಿಯಪ್ಪ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ನ ಅಂಕಪಟ್ಟಿ ಕೊಟ್ಟಿದ್ದರು. ಎರಡೂ ಅಂಕಪಟ್ಟಿಗಳು ನಕಲಿ ಎಂಬುದು ಪರಿಶೀಲನೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು