ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಜೀನೋಮ್‌ ಸೀಕ್ವೆನ್ಸಿಂಗ್‌‌ಗೆ ಮಾದರಿ ಕಳುಹಿಸುವಿಕೆ ಇಳಿಕೆ

ಜನವರಿಯಲ್ಲಿ ಇದುವರೆಗೆ 3.21 ಲಕ್ಷ ಕೋವಿಡ್‌ ಪ್ರಕರಣ l ಓಮೈಕ್ರಾನ್‌ ಸೋಂಕಿತರ ಪ್ರಮಾಣವೇ ಜಾಸ್ತಿ
Last Updated 23 ಜನವರಿ 2022, 20:38 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜನವರಿ ತಿಂಗಳಿನಲ್ಲಿ ಇದುವರೆಗೆ 3,21,232 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವುಗಳಲ್ಲಿ ಓಮೈಕ್ರಾನ್ ಸೋಂಕಿನಿಂದ ಕಾಣಿಸಿಕೊಂಡಿರುವ ಪ್ರಕರಣಗಳೇ ಜಾಸ್ತಿ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಇತ್ತೀಚೆಗೆ ಕಾಣಿಸಿಕೊಂಡ ಹೆಚ್ಚಿನ ಪ್ರಕರಣಗಳು ಓಮೈಕ್ರಾನ್‌ ಸೋಂಕಿನಿಂದಲೇ ಹರಡುತ್ತಿದೆ ಎಂಬ ಕಾರಣಕ್ಕೆ ಬಿಬಿಎಂಪಿಯು ಸೋಂಕಿತರ ಗಂಟಲ ದ್ರವದ ಮಾದರಿಯನ್ನು ವೈರಾಣುವಿನ ವಂಶವಾಹಿಗಳ ಸಂರಚನೆಯ ವಿಶ್ಲೇಷಣೆಗಾಗಿ (ಜೀನೋಮ್‌ ಸೀಕ್ವೆ ನ್ಸಿಂಗ್‌ಗೆ) ಕಳುಹಿಸುವ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿದೆ.

ಸೀಮಿತ ಸಂಖ್ಯೆಯ ಗಂಟಲ ದ್ರವ ಮಾದರಿಗಳನ್ನು ಮಾತ್ರ ಜೀನೋಮ್‌ ಸೀಕ್ವೆಂನ್ಸಿಂಗ್‌ಗೆ ಒಳಪಡಿಸುತ್ತಿರು
ವುದರಿಂದ ನಗರದಲ್ಲಿ ಪತ್ತೆಯಾಗುತ್ತಿರುವ ಓಮೈಕ್ರಾನ್‌ ಸೋಂಕಿನವುಗಳೆಷ್ಟು ಎಂಬುದರ ಖಚಿತ ಮಾಹಿತಿ ಬಿಬಿಎಂಪಿ ಬಳಿಯೂ ಲಭ್ಯವಿಲ್ಲ.

ಕೊರೊನಾ ವೈರಾಣು ಗಳ ಜೀನೋಮ್‌ ಸೀಕ್ವೆನ್ಸಿಂಗ್ ಫಲಿತಾಂಶ ಪಡೆಯುವುದಕ್ಕೆ ಒಂದು ವಾರಕ್ಕೂ ಅಧಿಕ ಸಮಯ ತಗಲುತ್ತಿತ್ತು. ಈ ಪರೀಕ್ಷೆ ನಡೆಸುವ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಿಸಿ, ಫಲಿತಾಂಶ ಕೈಸೇರಲು ತಗಲುವ ಅವಧಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಬಿ ಎಂಪಿ ಪ್ರಯತ್ನ ನಡೆಸಿತ್ತು.

ಎರಡೇ ದಿನಗಳಲ್ಲಿ ಫಲಿತಾಂಶ ಪಡೆಯುವ ನಿಟ್ಟಿನಲ್ಲೂ ಪ್ರಯತ್ನ ಸಾಗಿತ್ತು. ಆದರೆ, ನಗರದಾದ್ಯಂತ ಓಮೈಕ್ರಾನ್‌ ಸೋಂಕಿನ ಪ್ರಮಾಣ ದಿಢೀರ್‌ ಹೆಚ್ಚಳವಾದ ಬಳಿಕ ಪಾಲಿಕೆಯು ಈ ಪ್ರಯತ್ನವನ್ನು ಕೈಬಿಟ್ಟಿದೆ.

‘ತಿಂಗಳ ಹಿಂದೆ; ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚಳವಾಗಲು ಶುರುವಾದಾಗ ಸೋಂಕು ದೃಢಪಟ್ಟ ಬಹುತೇಕ ಎಲ್ಲರ ಗಂಟಲ ದ್ರವದ ಮಾದರಿಯನ್ನು ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸುತ್ತಿದ್ದೆವು. ಈಗ ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸುವ ಮಾದರಿಗಳ ಪ್ರಮಾಣ ವನ್ನು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಕಡಿಮೆ ಮಾಡಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿ ವ್ಯಾ‍ಪ್ತಿಯಲ್ಲಿ ಶೇ 90ಕ್ಕೂ ಅಧಿಕ ಪ್ರಕರಣಗಳು ಓಮೈಕ್ರಾನ್‌ ಸೋಂಕಿನಿಂದಲೇ ಕಾಣಿಸಿಕೊಳ್ಳುತ್ತಿರುವುದರಿಂದ ಅದನ್ನು ಮತ್ತೆ ದೃಢಪಡಿಸಿಕೊಳ್ಳುವ ಅಗತ್ಯ ಇಲ್ಲ. ಹಾಗಾಗಿ ಸೀಮಿತ ಸಂಖ್ಯೆಯ ಗಂಟಲ ದ್ರವಗಳ ಮಾದರಿಗಳನ್ನಷ್ಟೇ ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುತ್ತಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ರೋಗಿಗಳು ಹಾಗೂ ಅನ್ಯ ಕಾಯಿಲೆಗಳನ್ನು ಹೊಂದಿರುವ ಸೋಂಕಿತರ ಗಂಟಲ ದ್ರವದ ಮಾದರಿಯನ್ನು ಮಾತ್ರ ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುತ್ತಿದೆ’ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ.ಬಾಲಸುಂದರ್‌ ತಿಳಿಸಿದರು.

ಕೋವಿಡ್‌ ದೃಢಪಟ್ಟವರ ಮಾದ ರಿಗಳನ್ನು ನಗರದ ನಿಮ್ಹಾನ್ಸ್‌ನ ಪ್ರಯೋಗಾಲಯ ಹಾಗೂ ರಾಷ್ಟ್ರೀಯ ಜೀವವಿಜ್ಞಾನಗಳ ಕೇಂದ್ರದ (ಎನ್‌ಸಿಬಿಎಸ್‌) ಪ್ರಯೋಗಾಲಯಗಳಲ್ಲಿ ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಲಾಗುತ್ತಿದೆ. ಈ ಒಂದು ಸುತ್ತಿನಲ್ಲಿ 250ರಿಂದ 300 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ.

‘ಓಮೈಕ್ರಾನ್‌ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದರೂ ಕೋವಿಡ್ ದೃಢಪಟ್ಟವರ ಗಂಟಲ ದ್ರವಗಳ ಮಾದರಿಗಳನ್ನು ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸುವುದನ್ನು ಸಂಪೂರ್ಣ ನಿಲ್ಲಿಸಲಾಗದು. ಈ ವಿಶ್ಲೇಷಣೆ ನಡೆಸುವುದರಿಂದ ವೈರಾಣು ವಿನ ರೂಪಾಂತರಿಗಳ ಪತ್ತೆ ಸಾಧ್ಯವಾಗುತ್ತದೆ. ಅವುಗಳ ಸಂರಚನೆಯಲ್ಲಿ ಆಗುವ ಬದಲಾವಣೆಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ’ ಎಂದು ತ್ರಿಲೋಕಚಂದ್ರ ಅವರು ಮಾಹಿತಿ ನೀಡಿದರು.

1,252 ಮಂದಿ ಆಸ್ಪತ್ರೆಗೆ ದಾಖಲು

ಜನವರಿ ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ 3.21 ಲಕ್ಷ ಮಂದಿ ಕೊರೊನಾ ಸೋಂಕಿತರಾಗಿದ್ದರೂ ಆಸ್ಪತ್ರೆಗೆ ದಾಖಲಾದವರ ಪ್ರಮಾಣ ತೀರಾ ಕಡಿಮೆ ಇದೆ. 23 ದಿನಗಳಲ್ಲಿ 1,252 ಮಂದಿ ಮಾತ್ರ ಸರ್ಕಾರಿ ಕೋಟಾ ಅಡಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಬಿಬಿಎಂಪಿ ಅಂಕಿ ಅಂಶಗಳಲ್ಲಿ ಹೇಳಲಾಗಿದೆ.

‘ಓಮೈಕ್ರಾನ್‌ ಸೋಂಕು ಕಾಣಿಸಿಕೊಂಡ ಹೆಚ್ಚಿನವರು ಬೇಗನೇ ಗುಣಮುಖರಾಗುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆ ಇದೆ. ಹಾಗಾಗಿ ಜನತೆ ಆತಂಕ ಪಡುವ ಅಗತ್ಯ ಇಲ್ಲ. ಆದರೂ, ನಮ್ಮ ಸನ್ನದ್ಧತೆಯನ್ನು ಮುಂದುವರಿಸಿದ್ದೇವೆ’ ಎಂದು ಡಾ.ತ್ರಿಲೋಕಚಂದ್ರ ತಿಳಿಸಿದರು.

ಬೆಳ್ಳಂದೂರು: ನಿತ್ಯ 650ಕ್ಕೂ ಹೆಚ್ಚು ಹೊಸ ಪ್ರಕರಣ

ಬೆಳ್ಳಂದೂರು ವಾರ್ಡ್‌ನಲ್ಲಿ ಕೊರೊನಾ ಸೋಂಕು ಪತ್ತೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಲ್ಲಿ ಪ್ರಕಾರ ನಿತ್ಯ ಸರಾಸರಿ 650ಕ್ಕೂ ಅಧಿಕ ಹೊಸ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.

ಪಾಲಿಕೆಯ 10ಕ್ಕೂ ಅಧಿಕ ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ 250ಕ್ಕೂ ಅಧಿಕ ಹೊಸ ಪ್ರಕರಣಗಳು, ಎಂಟು ವಾರ್ಡ್‌ಗಳಲ್ಲಿ ನಿತ್ಯ 300ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.

ಇಬ್ಬರು ಪ್ರಯಾಣಿಕರಲ್ಲಿ ಕೋವಿಡ್‌ ದೃಢ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ಬಂದ ಇಬ್ಬರು ವಿದೇಶಿ ಪ್ರಯಾಣಿಕರಲ್ಲಿ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿದೆ.

ಇಟಲಿ ಮೂಲದ 43 ವರ್ಷದ ಮಹಿಳೆ ಹಾಗೂ ಲಂಡನ್‌ ಮೂಲದ 52 ವರ್ಷದ ಪುರುಷ ಪ್ರಯಾಣಿಕರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT