ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕಲಿಸಿದ ಅಪ್ಪನ ಕಿವಿಮಾತು

Last Updated 22 ಜೂನ್ 2020, 9:32 IST
ಅಕ್ಷರ ಗಾತ್ರ

ಬೆಂಗಳೂರು: ಅಪ್ಪ ಹೇಳಿದ ಒಂದು ಕಿವಿಮಾತು ಅಥವಾ ಬುದ್ಧಿವಾದ ಮಕ್ಕಳ ಪರಿವರ್ತನೆಗೆ ಕಾರಣವಾಗಬಲ್ಲದು. ಅವರ ಬದುಕಿನ ದಿಕ್ಕನ್ನೇ ಬದಲಿಸಬಲ್ಲದು. ‘ಅಪ್ಪಂದಿರ ದಿನ’ದ ಅಂಗವಾಗಿ ಇಂತಹ ಸಂಗತಿಗಳನ್ನು ಮೆಲುಕು ಹಾಕಲು ‘ಪ್ರಜಾವಾಣಿ’ ವೇದಿಕೆ ಕಲ್ಪಿಸಿದೆ. ಅನೇಕರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಆಯ್ದ ಕೆಲವು ಇಲ್ಲಿವೆ.

ಕಿವಿಮಾತೇ ದಾರಿ ತೋರಿತು

ನನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತಿದ್ದು ಅಪ್ಪಾಜಿ. ಎಂಟು ವರ್ಷದ ಹಿಂದೆ ನಾನು ಕೆಲಸಕ್ಕೆ ಸೇರುವಾಗ,'ಮಾಡುವ ಕೆಲಸ ಒಳ್ಳೆಯದಾಗಿರಲಿ. ಯಾರಿಗೂ ಕೆಟ್ಟದ್ದು ಬಯಸಬೇಡ, ಮುಂದೆ ಇಟ್ಟ ಹೆಜ್ಜೆಯನ್ನು ಎಂದಿಗೂ ಹಿಂದಿಡಬೇಡ' ಎಂದು ಅಪ್ಪ ಹೇಳಿದ ಮೂರು ನುಡಿಗಳೇ ಇಂದಿನ ಬದುಕಿಗೆ ದಾರಿದೀಪವಾಗಿವೆ. ಅಂದು ಹೇಳಿದ ಮಾತನ್ನು ಪ್ರತಿನಿತ್ಯ ನೆನೆಯುತ್ತೇನೆ.

ನರಹರಿ, ಜಕ್ಕೂರು ಬಡಾವಣೆ
---

ಖರ್ಚಿನ ಪಾಠ ಕಲಿತೆ

'ವಿನಾ ಕಾರಣ ಹಣ ಕರ್ಚು ಮಾಡಬಾರದು' ಎಂದು ಅಪ್ಪನ ಬಾಯಲ್ಲಿ ಬಾಲ್ಯದಿಂದಲೂ ಕೇಳಿದ ಮಾತುಗಳು ಇಂದು ಜೀವನದಲ್ಲಿ ಒಂದು ಹಂತಕ್ಕೆ ಬೆಳೆಯಲು ಸಾಧ್ಯವಾಯಿತು. ಮಕ್ಕಳಿಗೆ ಹಣ ಕೊಟ್ಟು, ಮೋಜಿಗೆ ದೂಡುವವರ ನಡುವೆ ರೂಪಾಯಿಯ ಮೌಲ್ಯವನ್ನು ಪ್ರತಿ ಹಂತದಲ್ಲೂ ಎಚ್ಚರಿಸಿದರು. ತಂದೆಯೇ ಹಾದಿಯೇ ನನ್ನ ಬದುಕಿಗೆ ಮಾದರಿ.

ಕಿಶನ್, ಪಟ್ಟೇಗಾರ ಪಾಳ್ಯ
---

ಸಾಧನೆಯ ಗುಟ್ಟು ಬಿಚ್ಚಿಟ್ಟರು

ತಂದೆಯೇ ನನಗೆ ಮೊದಲ ಗುರು. 'ನಿರಂತರ ಅಭ್ಯಾಸದಿಂದಲೇ ಸಾಧನೆ' ಎಂದು ಸದಾ ಎಚ್ಚರಿಸುತ್ತಾರೆ. ರಾತ್ರೋರಾತ್ರಿ ಸಾಧನೆಗಳು ಸಾಧ್ಯವಿಲ್ಲ. ಅದರ ಹಿಂದೆ ವರ್ಷಗಳ ಪ್ರಯತ್ನ ಅಡಗಿರುತ್ತದೆ ಎಂದು ಹೇಳುತ್ತಾರೆ. ಈ ಮಾತುಗಳೇ ಪ್ರತಿ ಹಂತದಲ್ಲೂ ನನಗೆ ಬೆನ್ನೆಲುಬಾಗಿ ನಿಲ್ಲುತ್ತವೆ.

ಅಮೋಘ್ ಆರಾಧ್ಯ, ಬೆಂಗಳೂರು

--

ಅಪ್ಪನಲ್ಲ..ಸ್ನೇಹಿತ

ಅಪ್ಪ ಎನ್ನುವ ಭಯಕ್ಕಿಂತ ಸಲುಗೆ ಎಂಬ ಸ್ನೇಹಿತನನ್ನು ನಾವು ಪಡೆದಿದ್ದೇವೆ. ನಮ್ಮ ಹುಟ್ಟು ಅಪ್ಪನ ಬದುಕು ಬದಲಿಸಿದರೆ, ಅವರ ಅಕ್ಕರೆ ನಮ್ಮ ಬದುಕನ್ನು ತಿಳಿಗೊಳಿಸಿದೆ. ಅಪ್ಪನ ಮುಂದೆ ತಲೆ ತಗ್ಗಿಸಿ ನಿಲ್ಲುವ ವಾತಾವರಣಕ್ಕೆ ಅಂತ್ಯ ನೀಡಿ, ಹೆಗಲ ಮೇಲೆ ಕೈಯಿಡುವ ಆಪ್ತತೆ ನಮ್ಮಲ್ಲಿದೆ. ನಿಜನಾಯಕನ ಸಾರಥ್ಯದಲ್ಲಿ ಬದುಕು ಬದಲಾಗಿದೆ.

ಬಿಂದು ಮತ್ತು ಶಿಲ್ಪಾ, ವಿಜಯನಗರ

---
ಆರ್ಥಿಕ ಭದ್ರತೆಯ ಅರಿವಾಯಿತು

ಖರ್ಚಿಗೆ ಹಣ ನೀಡುವಾಗ ಅಪ್ಪ ಹೇಳುವ ಮಾತು,' ನಮ್ಮ ಬಾಲ್ಯದಲ್ಲಿ ಪೈಸೆಗಳಲ್ಲೇ ಖರ್ಚು ಮುಗಿಯುತ್ತಿತ್ತು. ಆದರೀಗ ರೂಪಾಯಿಗಳು ಲೆಕ್ಕಕ್ಕಿಲ್ಲ' ಎನ್ನುವಾಗ ಮುಂದಿನ ದಿನಗಳಲ್ಲಿ ರೂಪಾಯಿ ಮಹತ್ವ ಕಳೆದುಕೊಳ್ಳಲಿದೆ ಎಂಬ ಎಚ್ಚರಿಕೆ ಗಂಟೆ ಸದ್ದು ಮಾಡುತ್ತದೆ. ಹಣವನ್ನು ಹಿತಮಿತವಾಗಿ ಬಳಸಬೇಕು ಎಂಬ ಕಿವಿಮಾತು ಹಣದುಬ್ಬರಕ್ಕೆ ತಡೆ ನೀಡುತ್ತದೆ.

ಸುದೀಪ್, ಕಬ್ಬನ್ ಪೇಟೆ
----

ಬದುಕಿಗೆ ಧೈರ್ಯ ತುಂಬಿದರು

ಅಮ್ಮ ಮೊದಲ ಗುರುವಾದರೆ, ತಂದೆ ನೆರಳು ನೀಡಿರುವ ಮರ. ಶಾಲೆಯ ಕಾರ್ಯಕ್ರಮವೊಂದರ ಅತಿಥಿಯಾಗಿದ್ದ ಅಪ್ಪನ ಮುಂದೆ ಅವರೇ ಬರೆದುಕೊಟ್ಟ ಭಾಷಣ ಹೇಳುವ ಸಂದರ್ಭ ಎದುರಾಯಿತು. ಭಾಷಣದ ವೇಳೆ ಮರೆತ ಪದಗಳನ್ನು ಹಿಂದಿನಿಂದ ನೆನಪಿಸುತ್ತಿದ್ದ ಕ್ಷಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದೇ ರೀತಿ ಜೀವನದ ಹಾದಿ ತಪ್ಪುವ ಸಂದರ್ಭಗಳಲ್ಲೂ ಅಪ್ಪನೇ ಧೈರ್ಯ ತುಂಬಿ ಮಾರ್ಗ ತೋರಿಸಿದ್ದಾರೆ.

ಸುಗುಣ, ರಾಜರಾಜೇಶ್ವರಿ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT