ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕುಪ್ರಾಣಿಗಳ ಉತ್ಸವ | ತರಹೇವಾರಿ ಶ್ವಾನ... ಮನಸೋತ ಜನ

Last Updated 19 ನವೆಂಬರ್ 2022, 20:04 IST
ಅಕ್ಷರ ಗಾತ್ರ

ಬೆಂಗಳೂರು: ಬಗೆ ಬಗೆಯ ವೇಷ, ಚಿತ್ತಾರಗಳೊಂದಿಗೆ ಬಳಕುತ ಬಂದ ಹಲವು ಜಾತಿಯ ಶ್ವಾನಗಳು, ಜಯಮಹಲ್ ಪ್ಯಾಲೆಸ್‌ ಮೈದಾನದಲ್ಲಿ ಸ್ಪರ್ಧೆಗೆ ಇಳಿದಿದ್ದವು. ನಾಯಿಗಳ ವೈಯಾರ ಹಾಗೂ ಕಸರತ್ತು ಕಂಡ ಜನ ಮನಸೋತು ಸೈ ಎಂದರು.

ಪೆಟ್‌ಫೆಡ್‌ ಸಂಸ್ಥೆ ಆಯೋಜಿಸಿರುವ ಸಾಕುಪ್ರಾಣಿಗಳ ಉತ್ಸವದಲ್ಲಿ ಪ್ರಾಣಿಪ್ರಿಯರ ಕೂಟವೇ ನೆರೆದಿತ್ತು. ವಿಶಾಲವಾದ ಜಾಗದಲ್ಲಿ ಆಯೋಜಿಸಿರುವ ಮೇಳದಲ್ಲಿ ಶ್ವಾನಗಳ ದಂಡೇ ನೆರೆದಿತ್ತು. ಪೋಷಕರು ತಮ್ಮ ಮುದ್ದಿನ ಸಾಕುಪ್ರಾಣಿಗಳೊಂದಿಗೆ ಉತ್ಸಾಹದಿಂದ ನೆರೆದಿದ್ದರು. ನಗರದ ಹಲವೆಡೆಯಿಂದ ಜನ ಬಂದಿದ್ದರಿಂದ ಇಡೀ ಆವರಣ ತುಂಬಿ ತುಳುಕುತ್ತಿತ್ತು.

ಚಿತ್ತಾರದ ಬೊಂಬೆಗಳಂತೆ ಕಾಣಿಸುತ್ತಿದ್ದ ಬಗೆ ಬಗೆ ಜಾತಿಯ ನಾಯಿಗಳು ನೋಡುಗರನ್ನು ಆಕರ್ಷಿಸಿದ್ದವು. ಕೆಲವು ದೈತ್ಯಾಕಾರದ ನಾಯಿಗಳ ದೇಹದಾರ್ಢ್ಯ ಕಂಡು ಜನ ಹುಬ್ಬೇರಿಸಿದರು. ಅಳುಕುತ್ತಲೇ ಅವುಗಳ ಬಳಿ ನಿಂತು ಸೆಲ್ಫಿ ತೆಗೆಸಿಕೊಂಡರು. ಯುವಕ–ಯುವತಿಯರು ಶ್ವಾನಗಳನ್ನು ವಿಶಿಷ್ಟ ಹೆಸರುಗಳಿಂದ ಕರೆಯುತ್ತಾ ಮುದ್ದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೇಶ, ವಿದೇಶಗಳ ವಿವಿಧ ತಳಿಗಳ ಶ್ವಾನಗಳು ಅಲ್ಲಿದ್ದವು. ಸ್ಪರ್ಧಾ ಕಣದಲ್ಲಿ ಮಾಲೀಕರ ಜತೆ ಅತ್ತಿತ್ತ ಓಡಾಡುತ್ತಿದ್ದ ಅವುಗಳ ಗತ್ತು–ಗೈರತ್ತು ನೋಡುಗರ ಗಮನ ಸೆಳೆದಿದ್ದವು.‌

ನಾಯಿಗಳಿಗಾಗಿ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಪೋಷಕರ ಮಾತಿನಂತೆ ನಡೆದುಕೊಳ್ಳುತ್ತಿದ್ದ ನಾಯಿಗಳು ಚಪ್ಪಾಳೆ ಗಿಟ್ಟಿಸುತ್ತಿದ್ದವು. ಪೋಷಕರ ಮಾತು ಕೇಳದೆ ಮನಸೋಇಚ್ಛೆ ಓಡುತ್ತಿದ್ದ ನಾಯಿಗಳೂ ಜನರನ್ನು ರಂಜಿಸಿ ಹೆಚ್ಚಿನ ಚಪ್ಪಾಳೆ ಗಿಟ್ಟಿಸುತ್ತಿದ್ದವು.

ಶ್ವಾನಗಳಿಗೆ ಬಣ್ಣ ಬಣ್ಣದ ಬಟ್ಟೆ ತೊಡಿಸಿ ಅದಕ್ಕೆ ಹೊಂದಿಕೆ ಆಗುವಂತೆ ತಾವೂ ಅದೇ ಬಣ್ಣದ ಬಟ್ಟೆ ತೊಟ್ಟಿದ್ದ ಪೋಷಕರು ಗಮನ ಸೆಳೆದರು. ಶ್ವಾನಗಳ ಸ್ವಭಾವ, ಚುರುಕುತನ, ಮಾಲೀಕರು ನೀಡುವ ಸೂಚನೆಗಳ ಪಾಲನೆಯ ಆಧಾರದಲ್ಲಿ ಸ್ಪರ್ಧೆ ನಡೆಸಲಾಯಿತು.

ವಿಶೇಷವಾಗಿ ಸಿಂಗಾರಗೊಂಡಿದ್ದ ಶ್ವಾನಗಳು ತೀರ್ಪುಗಾರರ ಮುಂದೆ ಬಿಂಕದಿಂದ ಸಾಗಿ ಬರುತ್ತಿದ್ದಂತೆಯೇ ಚಪ್ಪಾಳೆಯ ಸುರಿಮಳೆ. ನೆಚ್ಚಿನ ನಾಯಿ ಜನಮೆಚ್ಚುಗೆಗೆ ಪಾತ್ರವಾದ ಬಗ್ಗೆ ಮಾಲೀಕರಲ್ಲಿ ಏನೋ ಪುಳಕ. ಮುದ್ದಿನ ನಾಯಿ ಪ್ರಶಸ್ತಿ ಗಿಟ್ಟಿಸಿದಾಗಲಂತೂ ಅವರ ಹರ್ಷಕ್ಕೆ ಪಾರವೇ ಇರಲಿಲ್ಲ.

ಕೋವಿಡ್‌ ಬಳಿಕ ನಡೆಯುತ್ತಿರುವ ಮೊದಲ ಉತ್ಸವ ಆಗಿರುವುದರಿಂದ ನಿರೀಕ್ಷೆಗೂ ಮೀರಿ ಜನ ಭಾಗವಹಿಸಿದ್ದರು ಎಂದು ಪೆಟ್‌ಫೆಡ್‌ ಸಂಸ್ಥೆಯ ಸಂಸ್ಥಾಪಕ ಅಕ್ಷಯ್ ಗುಪ್ತಾ ಹೇಳಿದರು.

ದೇಸಿ ಸಾಕುಪ್ರಾಣಿಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಾಕುಪ್ರಾಣಿಗಳ ವಾತಾವರಣ ಕಾಪಾಡಿಕೊಳ್ಳಲು ಸಂಘಟಕರು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ನಾಯಿ ಮತ್ತು ಬೆಕ್ಕುಗಳನ್ನು ದತ್ತು ಪಡೆಯಲೂ ಶಿಬಿರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಶ್ವಾನಗಳ ಕುತ್ತಿಗೆಗೆ ಹಾಕುವ ಬೆಲ್ಟ್, ಆಹಾರ, ಔಷಧ, ಆಲಂಕಾರಿಕ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮಳಿಗೆಗಳಿಗೆ ಮುಗಿಬಿದ್ದರು. ಭಾನುವಾರ ಕೂಡ ಉತ್ಸವ ನಡೆಯಲಿದೆ.‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT