ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಟ್ರೊ ನಿಲ್ದಾಣಕ್ಕಾಗಿ ಜಟಾಪಟಿ

ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಅನುಕೂಲ ಕಲ್ಪಿಸಲು ಬಿಐಇಸಿ ಬಳಿ ನಿಲ್ದಾಣ l ಶ್ರೀಕಂಠಪುರ ನಿವಾಸಿಗಳ ಆರೋಪ
Last Updated 17 ಜನವರಿ 2020, 4:44 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕೈಗೆತ್ತಿಕೊಂಡಿರುವ ಉತ್ತರ–ದಕ್ಷಿಣ ಕಾರಿಡಾರ್‌ನ ರೀಚ್‌–3ಸಿ ವಿಸ್ತರಣೆಯ (ನಾಗಸಂದ್ರ– ಬೆಂಗಳೂರು ಅಂತರ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ-ಬಿಐಇಸಿ) ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ನಿಲ್ದಾಣ ನಿರ್ಮಿಸುವ ಸ್ಥಳ ಕುರಿತು ತಕರಾರು ಆರಂಭವಾಗಿರುವುದು ಇದಕ್ಕೆ ಕಾರಣ.

ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಜಿಂದಾಲ್‌ ನಗರದ ಚಿಕ್ಕಬಿದರಕಲ್ಲು ಮತ್ತು ಬಿಐಇಸಿ ಬಳಿ ನಿಲ್ದಾಣ ನಿರ್ಮಿಸಲು ಮುಂದಾಗಿದೆ. ಆದರೆ, ಶ್ರೀಕಂಠಪುರದಲ್ಲಿ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಒತ್ತಾಯ.

ಈಗ ಕಾರ್ಯಾಚರಿಸುತ್ತಿರುವ ನಾಗಸಂದ್ರ ನಿಲ್ದಾಣದ ಬಳಿಕ ಮಂಜುನಾಥನಗರ, ಜಿಂದಾಲ್ ಹಾಗೂ ಬಿಐಇಸಿ ಮುಂಭಾಗ ನಿಲ್ದಾಣಗಳು ನಿರ್ಮಾಣವಾಗಲಿವೆ. ನಾಗಸಂದ್ರ- ಮಂಜುನಾಥನಗರ ನಿಲ್ದಾಣಗಳ ನಡುವೆ 550 ಮೀಟರ್ ಅಂತರ ಹಾಗೂ ಮಂಜುನಾಥನಗರ- ಜಿಂದಾಲ್ ನಿಲ್ದಾಣಗಳ ನಡುವೆ 750 ಮೀಟರ್ ಅಂತರವಿದೆ. ಎರಡು ನಿಲ್ದಾಣಗಳ ನಡುವೆ ಒಂದು ಕಿ.ಮೀ. ಅಂತರವಿರ ಬೇಕು ಎಂಬ ನಿಯಮವಿದೆ. ಆದರೆ,ಜಿಂದಾಲ್-ಬಿಐಇಸಿ ನಡುವೆ ಸುಮಾರು 2.1 ಕಿ.ಮೀ. ಅಂತರವಿರಲಿದೆ ಎಂದು ಶ್ರೀಕಂಠಪುರ ನಿವಾಸಿಗಳು ಹೇಳುತ್ತಾರೆ.

ಇದರಿಂದಾಗಿ ಶ್ರೀಕಂಠಪುರ ಅಥವಾ ಅಂಚೆಪಾಳ್ಯ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರು ಮೆಟ್ರೊ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಚೆಪಾಳ್ಯದ ನಿವಾಸಿಗಳು ಮೆಟ್ರೊ ಬೇಕೆಂದರೆ 1 ಕಿ.ಮೀ. ದೂರದ ಬಿಐಇಸಿ ಕಡೆ ಅಥವಾ 1 ಕಿ.ಮೀ. ದೂರದ ಜಿಂದಾಲ್ ನಿಲ್ದಾಣದ ಕಡೆ ನಡೆದುಕೊಂಡು ಹೋಗಬೇಕಾಗುತ್ತದೆ. ನಡೆಯಲು ಸಾಧ್ಯವಾಗದಿದ್ದರೆ ಬಸ್, ದ್ವಿಚಕ್ರ ವಾಹನ ಬಳಸಬೇಕಾಗುತ್ತದೆ.

ಶ್ರೀಕಂಠಪುರ ಮತ್ತು ತೋಟದಗುಡ್ಡದಹಳ್ಳಿ ಗ್ರಾಮಸ್ಥರು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಬೆಂಗಳೂರು ನಗರಕ್ಕೆ ಕೆಲಸಕ್ಕಾಗಿ ನಿತ್ಯ ಓಡಾಡುತ್ತಾರೆ. ಜಿಂದಾಲ್ಮತ್ತು ಬಿಐಇಸಿ ನಿಲ್ದಾಣಗಳು ದೂರ ಆಗುತ್ತವೆ ಎಂದು ನಿವಾಸಿಗಳು ಹೇಳುತ್ತಾರೆ.

ಪ್ರಾರಂಭದಿಂದಲೂ ವಿಳಂಬ: ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪೆನಿಗೆ ಈ ಕಾಮಗಾರಿಯ ಗುತ್ತಿಗೆ ವಹಿಸಲಾಗಿದೆ. ಇದಕ್ಕೆ ಟೆಂಡರ್‌ ನೀಡುವುದು ವಿಳಂಬವಾಗಿದ್ದರಿಂದ ಈ ರೀಚ್‌ನ ಕಾಮಗಾರಿಯೂ ತಡವಾಗಿ ಪ್ರಾರಂಭವಾಗಿತ್ತು.ರೀಚ್‌ 2 (ಮೈಸೂರು ರಸ್ತೆ– ಕೆಂಗೇರಿ) ಹಾಗೂ ರೀಚ್‌ 4 ಬಿ (ಯಲಚೇನಹಳ್ಳಿ–ಅಂಜನಾಪುರ) ಮಾರ್ಗಗಳ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ವರ್ಷಗಳ ಹಿಂದೆಯೇ ಪೂರ್ಣಗೊಂಡಿತ್ತು. ರೀಚ್‌ 3ಸಿ ಮಾರ್ಗದ ಟೆಂಡರ್‌ ಪ್ರಕ್ರಿಯೆ 2017ರ ಪ್ರಾರಂಭದಲ್ಲಿಯೇ ಮುಗಿದಿತ್ತು. ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿಯೂ ಈ ರೀಚ್‌ನ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT