ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಸಂದ್ರದಲ್ಲಿ ಬೆಂಕಿ ಅವಘಡ: ಸುಗಂಧ ದ್ರವ್ಯ ಡಬ್ಬಿ ಜಜ್ಜುವಾಗ ಸ್ಫೋಟ

ವಸತಿ ಪ್ರದೇಶದಲ್ಲಿ ಅಕ್ರಮ ಮಳಿಗೆ: ಮಾಲೀಕರ ವಿರುದ್ಧ ಪ್ರಕರಣ
Published 18 ಫೆಬ್ರುವರಿ 2024, 20:59 IST
Last Updated 18 ಫೆಬ್ರುವರಿ 2024, 20:59 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆಯ ರಾಮಸಂದ್ರದಲ್ಲಿರುವ ಮಳಿಗೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಮೂವರು ಸಜೀವ ದಹನವಾಗಿರುವ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಸತಿ ಪ್ರದೇಶದಲ್ಲಿದ್ದ ಖಾಲಿ ಜಾಗದಲ್ಲಿ ಶೆಡ್‌ ನಿರ್ಮಿಸಿ ಅಕ್ರಮವಾಗಿ ಮಳಿಗೆ ತೆರೆಯಲಾಗಿತ್ತು. ಬೆಂಕಿ ಅವಘಡ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ‌. ಮಳಿಗೆ ಮಾಲೀಕ, ನಿವೇಶನ ಮಾಲೀಕರು ಹಾಗೂ ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅವಘಡದಿಂದ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಬೈಕ್‌, ಆಟೊ ಹಾಗೂ ಕಾರು ಜಖಂಗೊಂಡಿವೆ. ಹಾನಿ ಸಂಬಂಧ ಸ್ಥಳೀಯರಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದು ತಿಳಿಸಿದರು.

‘ಸುಗಂಧ ದ್ರವ್ಯ ಡಬ್ಬಿಯಲ್ಲಿರುವ ರಾಸಾಯನಿಕ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿರುವ ಅನುಮಾನವಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಬಂದು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಅವರು ವರದಿ ನೀಡಿದ ಬಳಿಕವೇ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಗೊತ್ತಾಗಲಿದೆ’ ಎಂದು ಪೊಲೀಸರು ಹೇಳಿದರು.

ಖಾಲಿ ಡಬ್ಬಿ ಜಜ್ಜುತ್ತಿದ್ದ ಕಾರ್ಮಿಕರು: ‘ಸುಗಂಧ ದ್ರವ್ಯದ 500ಕ್ಕೂ ಹೆಚ್ಚು ತಗಡಿನ ಖಾಲಿ ಡಬ್ಬಿಗಳನ್ನು ಇತ್ತೀಚೆಗೆ ಸಲೀಂ ಖರೀದಿಸಿದ್ದರು. ಅವುಗಳನ್ನು ಮಳಿಗೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಅದೇ ಡಬ್ಬಿಗಳನ್ನು ಜಜ್ಜಿ ಸಮತಟ್ಟಾಗಿ ಮಾಡಿ ಮರು ಬಳಕೆ ಕಳುಹಿಸುವ ಉದ್ದೇಶ ಮಾಲೀಕರದ್ದಾಗಿತ್ತು. ಕಾರ್ಮಿಕರು, ಮೂರು ದಿನಗಳಿಂದ ಡಬ್ಬಿ ಜಜ್ಜುವ ಕೆಲಸದಲ್ಲಿ ತೊಡಗಿದ್ದರು‘ ಎಂದು ಅಧಿಕಾರಿ ಹೇಳಿದರು.

‘ಭಾನುವಾರ ಬೆಳಿಗ್ಗೆಯೂ ಎಂಟು ಕಾರ್ಮಿಕರು ಕೆಲಸಕ್ಕೆ ಬಂದಿದ್ದರು. ಸುಗಂದ ದ್ರವ್ಯದ ಡಬ್ಬಿಗಳನ್ನು ಜಜ್ಜುತ್ತಿದ್ದರು. ಸಮತಟ್ಟಾದವನ್ನು ಚೀಲದಲ್ಲಿ ತುಂಬಿ ಆಟೊದಲ್ಲಿ ಇರಿಸಲಾಗುತ್ತಿತ್ತು. ಸಂಜೆ 5.30 ಗಂಟೆ ಸುಮಾರಿಗೆ ಶೆಡ್‌ನಿಂದ ಸ್ಫೋಟದ ಸದ್ದು ಕೇಳಿಸಿತು. ಇದಾದ ನಂತರ, ಹಲವು ಬಾರಿ ಸ್ಫೋಟ ಉಂಟಾಯಿತು. ಅದರ ಜೊತೆಗೆ ಬೆಂಕಿ ಕೆನ್ನಾಲಗೆಯೂ ಹೆಚ್ಚಿತ್ತು’ ಎಂದು ಅಧಿಕಾರಿ ತಿಳಿಸಿದರು.

ಹೊತ್ತಿ ಉರಿದಿದ್ದ ಬೆಂಕಿ: ‘ಕೆಲವೇ ನಿಮಿಷಗಳಲ್ಲಿ ಇಡೀ ಮಳಿಗೆಗೆ ಬೆಂಕಿ ಆವರಿಸಿತ್ತು. ಮಳಿಗೆಯಲ್ಲಿ ಸಿಲುಕಿದ್ದ ಕಾರ್ಮಿಕರು ಕೂಗಾಡುತ್ತಿದ್ದರು. ಕೆಲ ಸ್ಥಳೀಯರು ರಕ್ಷಣೆಗಾಗಿ ಒಳಗೆ ಹೋಗಲು ಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ’ ಎಂದು ಸ್ಥಳೀಯರೊಬ್ಬರು ಹೇಳಿದರು.

‘ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಐವರು ಕಾರ್ಮಿಕರನ್ನು ರಕ್ಷಿಸಿದರು. ಮೂವರು ಕಾರ್ಮಿಕರು ಹೊರಗೆ ಬರಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟು, ಸಂಪೂರ್ಣ ಸುಟ್ಟುಹೋಗಿದ್ದಾರೆ’ ಎಂದು ಅವರು ತಿಳಿಸಿದರು.

‘ಮೃತರಲ್ಲಿ ಒಬ್ಬರು ಮಹಿಳೆ’

‘ಅವಘಡದಲ್ಲಿ ಮೃತಪಟ್ಟಿರುವ ಮೂವರು ಪೈಕಿ ಒಬ್ಬರು ಮಹಿಳೆ ಎಂದು ಹೇಳಲಾಗುತ್ತಿದೆ. ಮೂವರು ಮೃತದೇಹಗಳು ಗುರುತು ಸಿಗದಷ್ಟು ಸುಟ್ಟಿವೆ. ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೃತದೇಹಗಳನ್ನು ಸಂಬಂಧಿಕರ ಮೂಲಕ ಗುರುತಿಸಬೇಕಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT