ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ‘ಮಿಣುಕು ಹುಳುಗಳ’ ಲೋಕದ ಅನಾವರಣ

Published : 8 ಸೆಪ್ಟೆಂಬರ್ 2024, 14:44 IST
Last Updated : 8 ಸೆಪ್ಟೆಂಬರ್ 2024, 14:44 IST
ಫಾಲೋ ಮಾಡಿ
Comments

ಬೆಂಗಳೂರು: ದೇಶದ ವಿವಿಧ ಭಾಗಗಳಲ್ಲಿರುವ ವೈವಿಧ್ಯಮಯ ‘ಮಿಣುಕು ಹುಳುಗಳ’ ಮನಮೋಹಕ ಛಾಯಾಚಿತ್ರಗಳ ಲೋಕ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಅನಾವರಣಗೊಂಡಿದೆ.

ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ದಿನದ ಅಂಗವಾಗಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಪರಿಸರ ಸಂಸ್ಥೆಗಳ ವತಿಯಿಂದ ‘ತೇಜಸ್ವಿ ಲೋಕ–12 ಎಂಬ ಮಿಣುಕು ಲೋಕ ಛಾಯಾಚಿತ್ರ, ಸುಚಿತ್ರ ಪ್ರದರ್ಶನ ಹಾಗೂ ಸಂವಾದ’ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಈ ಪ್ರದರ್ಶನ ಇದೇ 15ರವರೆಗೆ ನಡೆಯಲಿದೆ.

ಪ್ರದರ್ಶನ ಸ್ಥಳದಲ್ಲಿ ವಿತರಿಸುತ್ತಿರುವ ಕರಪತ್ರದಲ್ಲಿರುವ, ‘ಮಿಂಚು ಹುಳುಗಳೆಂದರೆ ಪ್ರಕೃತಿಯ ಪ್ರಜ್ವಲಿಸುವ ಆಭರಣಗಳು. ಇವು ವಾಸ್ತವವಾಗಿ ನೊಣಗಳಲ್ಲ. ಕೀಟ ವರ್ಗಕ್ಕೆ ಸೇರಿದ ‘ಕೊಲಿಯಾಪ್ಟರ್‌’ ಗಣದ ‘ಲ್ಯಾಂಪರಿಡೆ’ ಕುಟುಂಬಕ್ಕೆ ಸೇರಿದ ಕತ್ತಲಿನಲ್ಲಿ ಫಕ್ಕನೆ ಬೆಳಕು ಹೊರಸೂಸುವ ದುಂಬಿಗಳಾಗಿವೆ’ ಎಂಬ ಘೋಷ ವಾಕ್ಯವು ಈ ಕಾರ್ಯಕ್ರಮದ ಚಿತ್ರಣವನ್ನು ಕಟ್ಟಿಕೊಡುತ್ತದೆ.

‘ಅನಾದಿ ಕಾಲದಿಂದಲೂ ಮಿಂಚು ಹುಳುಗಳು ತಮ್ಮ ಅಮೂಲ್ಯ ಬೆಳಕಿನ ಶಕ್ತಿಯಿಂದ ಸಾರ್ವಜನಿಕರು ಹಾಗೂ ಜೀವಶಾಸ್ತ್ರಜ್ಞರನ್ನು ಮೋಡಿ ಮಾಡುತ್ತಿವೆ. ತಮ್ಮ ಬೆಳಕಿನಿಂದ ಕಾಡು, ಕಮರಿ, ಕಣಿವೆಗಳಲ್ಲಿ ಬೆಳಕಿನ ಚಿತ್ತಾರವನ್ನು ಮೂಡಿಸುತ್ತವೆ. ಮಿಂಚು ಹುಳುಗಳು ವಿಶ್ವದಾದ್ಯಂತ ಪರಿಸರ ಮತ್ತು ಪ್ರವಾಸ ಸ್ಥಳಗಳನ್ನು ಉತ್ತೇಜಿಸುತ್ತವೆ’ ಎಂದು ಕೀಟತಜ್ಞ ಅಕ್ಷಯ್‌ ಕುಮಾರ್‌ ಚಕ್ರವರ್ತಿ ಮಾಹಿತಿ ನೀಡಿದರು.

‘ರಾತ್ರಿ ವೇಳೆ ಮಿಂಚು ಹುಳುಗಳಲ್ಲಿರುವ ಜೈವಿಕ ಪ್ರಕಾಶದಿಂದ ಇವುಗಳನ್ನು ಸುಲಭವಾಗಿ ನೋಡಬಹುದು. ಹಗಲಿನಲ್ಲಿ ಪ್ರೌಢದುಂಬಿಗಳು ಗಿಡಗಳ ಮೇಲೆ, ಮರಗಳ ಅಡಿಯಲ್ಲಿ ನೆಲೆಸಿರುತ್ತವೆ. ಆದರೆ, ಈಗ ಕೃತಕ ಬೆಳಕು, ಅರಣ್ಯ ನಾಶ, ಹವಾಮಾನ ವೈಪರೀತ್ಯ, ಪರಿಸರ ಮಾಲಿನ್ಯ, ಕಾಡ್ಗಿಚ್ಚು, ನಗರೀಕರಣ ಹಾಗೂ ಮಿಂಚು ಹುಳುಗಳ ಸಹಜ ನೆಲೆಗಳ ವಿನಾಶದಿಂದ ಇವುಗಳನ್ನು ಕಾಣುವುದು ಅಪರೂಪವಾಗಿದೆ. ಇವುಗಳನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲೆ ಇದೆ’ ಎಂದು ತಿಳಿಸಿದರು.

ಪ‍್ರತಿಷ್ಠಾನದ ಸಂಸ್ಥಾಪಕ ಈಶ್ವರ್ ಪ್ರಸಾದ್, ಗುವಾಹಟಿ ವಿಶ್ವವಿದ್ಯಾಲಯದ ಭೌತವಿಜ್ಞಾನ ಪ್ರಾಧ್ಯಾಪಕ ಅನುರೂಪ್‌ ಗೋಹೇನ್, ಕೋಲ್ಕತ್ತ ವಿಶ್ವವಿದ್ಯಾಲಯ ಪ್ರಾಣಿವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಅಮ್ಲನ್‌ ದಾಸ್, ನೂರ್‌ ಅಹಮ್ಮದ್ ಅಬ್ಬಲಗೆರೆ ಭಾಗವಹಿಸಿದ್ದರು.

‘ಸರ್ಕಾರ ಅನುದಾನ ನೀಡಲಿ’

‘ಮಿಂಚು ಹುಳಗಳ ಸಂಶೋಧನೆ ಮತ್ತು ಇವುಗಳನ್ನು ರಕ್ಷಿಸುವುದಕ್ಕೆ ಸರ್ಕಾರ ಅನುದಾನ ನೀಡಬೇಕು’ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಒತ್ತಾಯಿಸಿದರು. ‘ಅರಣ್ಯ ಮತ್ತು ಪರಿಸರ ಇಲಾಖೆಯು ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಆನೆ ಚಿರತೆ ಹುಲಿಗಳ ಕುರಿತು ಅಧ್ಯಯನಕ್ಕೆ ಮಾಡುತ್ತಿದೆ. ಅದರ ಜೊತೆಗೆ ಮಾನವನ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಿಂಚು ಹುಳುಗಳು ಆವಾಸ್ಥಾನಗಳ ರಕ್ಷಿಸುವುದಕ್ಕೂ ಆದ್ಯತೆ ನೀಡಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT