ಭಾನುವಾರ, ಜೂಲೈ 5, 2020
28 °C

ಬೆಂಗಳೂರಿನಲ್ಲಿ ದೃಢಪಟ್ಟ ಕೋವಿಡ್ 19: ಪ್ರಾಥಮಿಕ ಶಾಲೆಗಳಿಗೆ ರಜೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಓರ್ವ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಮುಂದಿನ ಆದೇಶದವರೆಗೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಸೇರಿದಂತೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆಗಳಿಗೆ (5ನೇ ತರಗತಿವರೆಗೆ) ರಜೆ ಘೋಷಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಆರೋಗ್ಯ ಇಲಾಖೆಯೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದೇವೆ. ಸಮನ್ವಯದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಕೋವಿಡ್ 19 ದೃಢಪಟ್ಟ ಟೆಕಿ ಅಮೆರಿಕದಿಂದ ಬಂದಿದ್ದರು. ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಪತ್ತೆಯಾದ ವ್ಯಕ್ತಿಯು ಮಾರ್ಚ್‌ 1 ರಂದು ಅಮೆರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದರು. ಸೋಂಕು ತಗುಲಿದ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಅಲ್ಲದೇ ಅವರ ಸಂಪರ್ಕದಲ್ಲಿದ್ದ ಪತ್ನಿ, ಮಗು, ಕಾರು ಚಾಲಕನನ್ನು ಪ್ರತ್ಯೇಕವಾಗಿರಸಲಾಗಿದೆ ಎಂದು ಹೇಳಿದರು.

‘ಮುಂದಿನ ಆದೇಶದವರೆಗೆ 5ನೇ ತರಗತಿವರೆಗೆ ರಜೆ ಘೋಷಿಸಲಾಗಿದೆ. ಮಕ್ಕಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪೂರ್ವ ಪ್ರಾಥಮಿಕ ಶಾಲೆಗಳಿಗೆ ಈಗಾಗಲೇ ರಜೆ ನೀಡಲಾಗಿದೆ’ ಎಂದು ಸುಧಾಕರ್ ಹೇಳಿದರು.

‘ಕೋವಿಡ್ 19 ನಿರ್ವಹಣೆಗಾಗಿ ರಾಜ್ಯದಲ್ಲಿ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಯಾರೂ ಆತಂಕಪಡಬೇಕಿಲ್ಲ. ಯಾವುದೇ ಮಗುವಿನಲ್ಲಿ ಅನಾರೋಗ್ಯ ಕಂಡುಬಂದರೆ, ತುರ್ತು ರಜೆ ಕೊಡಬೇಕು’ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಎಲ್ಲ ಶಿಕ್ಷಕರಿಗೆ ಸೂಚಿಸಿದ್ದಾರೆ.

ಹರಿದಾಡಿತ್ತು ಸ್ಕ್ರೀನ್‌ಶಾಟ್‌

ಶಾಲೆಯ ಪ್ರಾಂಶುಪಾಲರು ಕಳಿಸಿದ್ದ ಇಮೇಲ್‌ನ ಸ್ಕ್ರೀನ್‌ಶಾಟ್‌ ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡಲು ಆರಂಭಿಸಿದ್ದರಿಂದ ಅಧಿಕಾರಿಗಳು ಗೊಂದಲಕ್ಕೀಡಾದರು. ಪೋಷಕರೊಬ್ಬರು ಕೋವಿಡ್ 19 ಉಲ್ಲೇಖಿಸಿ ರಜೆ ಕೋರಿದ್ದನ್ನು ಕೆಲವರು ಪ್ರಸ್ತಾಪಿಸಿದ್ದರು.

ಶಾಲೆಯ ಬಳಿಯಿದ್ದ ಅಪಾರ್ಟ್‌ಮೆಂಟ್‌ ಒಂದರಲ್ಲಿದ್ದ ಪೋಷಕರಲ್ಲಿಯೇ ಕೋವಿಡ್ 19 ದೃಢಪಟ್ಟಿದ್ದರಿಂದ ಶಿಕ್ಷಕರೂ ಆತಂಕಕ್ಕೆ ಒಳಗಾದರು. ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಪೋಷಕರು ಶಾಲೆಗೆ ಧಾವಿಸಿದರು. ಮಧ್ಯಾಹ್ನ 12.30ರ ಹೊತ್ತಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪ್ರಾಚಾರ್ಯರು ಶಾಲೆಗೆ ರಜೆ ಘೋಷಿಸಿದರು.

ಬೆಳವಣಿಗೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಲೆಯ ಪ್ರಾಚಾರ್ಯರು, ‘ಪೋಷಕರಲ್ಲಿ ಕೋವಿಡ್ 19 ದೃಢಪಟ್ಟಿರುವ ಬಗ್ಗೆ ನನಗೆ ಮಾಹಿತಿಯಿಲ್ಲ’ ಎಂದು ಹೇಳಿದರು.

‘ಭಾನುವಾರು ಪೋಷಕರೊಬ್ಬರು ತಮ್ಮ ಮಗುವಿಗೆ ರಜೆ ಬೇಕು ಎಂದು ಕೋರಿದ್ದರು. ತನ್ನ ಪತಿ ಈಚೆಗಷ್ಟೇ ವಿದೇಶದಿಂದ ಹಿಂದಿರುಗಿದ್ದಾರೆ, ಅವರಲ್ಲಿ ಜ್ವರದ ಲಕ್ಷಣಗಳು ಕಂಡುಬಂದಿವೆ ಎಂದು ಹೇಳಿದ್ದರು. ನಾನು ತಕ್ಷಣ ಶಾಲೆಯ ಇತರ ಸಿಬ್ಬಂದಿಗೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ನಮ್ಮ ಶಾಲೆಯ ಹಲವು ಶಿಕ್ಷಕರು ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ’ ಎಂದು ಪ್ರಾಚಾರ್ಯರು ಪ್ರತಿಕ್ರಿಯಿಸಿದರು.

ಶಾಲೆಯು ರಜೆ ಘೋಷಿಸಿದ ನಂತರ, ಅದೇ ಪ್ರದೇಶದಲ್ಲಿದ್ದ ಪ್ರಮುಖ ಐಟಿ ಕಂಪನಿಯೊಂದು 10ಕ್ಕೂ ಹೆಚ್ಚು ಉದ್ಯೋಗಿಗಳನ್ನು ತರಾತುರಿಯಲ್ಲಿ ಮನೆಗೆ ಕಳಿಸಿತು. ಈ ಬೆಳವಣಿಗೆಯ ಮಾಹಿತಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಧೈರ್ಯ ತುಂಬುವ ಯತ್ನ

ಈ ಇಮೇಲ್ ಸೋರಿಕೆಯಾದ ಕೆಲ ಗಂಟೆಗಳ ನಂತರ ವೈದ್ಯಕೀಯ ಶಿಕ್ಷಣ ಸಚಿವರ ಪತ್ರಿಕಾಗೋಷ್ಠಿ ನಡೆಸಿ, ನಗರದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ವೈರಸ್ ಪಾಸಿಟಿವ್ ವರದಿ ಬಂದಿರುವುದನ್ನು ದೃಢಪಡಿಸಿದರು.

ಸೋಂಕು ಪತ್ತೆ

ಸೋಂಕಿತ ವ್ಯಕ್ತಿಯು ಫೆಬ್ರುವರಿ 28ರಂದು ಆಸ್ಟಿನ್‌ನಿಂದ ನ್ಯೂಯಾರ್ಕ್‌, ಫೆ.29ರಂದು ನ್ಯೂಯಾರ್ಕ್‌ನಿಂದ ದುಬೈಗೆ ಸಂಚರಿಸಿದ್ದರು. ಮಾರ್ಚ್ 1ರಂದು ಬೆಂಗಳೂರಿಗೆ ಬಂದಿಳಿದಿದ್ದರು. ಮಾರ್ಚ್ 4ರಂದು ಅವರಲ್ಲಿ ಕೋವಿಡ್ 19 ರೋಗ ಲಕ್ಷಣಗಳು ಪತ್ತೆಯಾಗಿದ್ದವು. ಮಾರ್ಚ್ 5ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 9ರಂದು ಪರೀಕ್ಷಾ ವರದಿಗಳು ಕೋವಿಡ್ 19 ಸೋಂಕು ದೃಢಪಡಿಸಿದವು.

ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ರಜೆ
ಮುಂದಿನ ಆದೇಶದವರೆಗೆ ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದರಿಂದ ಐದನೇ ತರಗತಿವರೆಗಿನ ಎಲ್ಲ ಪ್ರಾಥಮಿಕ ಶಾಲೆಗಳಿಗೆ ಮಂಗಳವಾರದಿಂದ (ಮಾರ್ಚ್ 10)‌ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ.

‘ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಈಗಾಗಲೇ ರಜೆ ಘೋಷಿಸಲಾಗಿದೆ. ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು. ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು