ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ನಿಂದ ಬೆಂಗಳೂರಿಗೆ ಬಂದಿಳಿದ 343 ಕನ್ನಡಿಗರು

Last Updated 11 ಮೇ 2020, 5:30 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು:ಲಂಡನ್‌ನಿಂದ 343 ಕನ್ನಡಿಗರು ಸೋಮವಾರ ನಸುಕಿನಲ್ಲಿನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದರು.

ಕೊರೊನಾ ಸೋಂಕಿನ ಕಾರಣ ಹೇರಲಾಗಿರುವ ಲಾಕ್‌ಡೌನ್ ಕಾರಣದಿಂದ ತಾಯ್ನಾಡಿಗೆ ಮರಳಲು ಆಗದೆಯೇ ಪರದಾಡುತ್ತಿದ್ದವರ ಮುಖದಲ್ಲಿ ಸೋಮವಾರ ಮಂದಹಾಸ ಮನೆ ಮಾಡಿತ್ತು. 14 ದಿನ ಕ್ವಾರಂಟೈನ್ ಅವಧಿ ಮುಗಿದ ನಂತರ ಇವರು ತಮ್ಮ ಕುಟುಂಬ ಸೇರಿಕೊಳ್ಳಲಿದ್ದಾರೆ.

ಏರ್ ಇಂಡಿಯಾ ವಿಮಾನ (ಎಐ 1803) ಬೆಳಿಗ್ಗೆ 4.45ಕ್ಕೆ ಬೆಂಗಳೂರಿಗೆ ಬಂದಿಳಿಯಿತು. ಎಲ್ಲರಿಗೂ ಥರ್ಮಲ್ ಸ್ಕ್ಯಾನಿಂಗ್ ಸಹಿತ ಅಗತ್ಯ ಆರೋಗ್ಯ ತಪಾಸಣೆ ಮಾಡಿ, ನಗರದ ವಿವಿಧ ಹೋಟೆಲ್ ಮತ್ತು ರೆಸಾರ್ಟ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ‌.

ವಿಮಾನ ನಿಲ್ದಾಣದಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸಲಾಗಿದೆ. ತಜ್ಞ ವೈದ್ಯರ ಸಮ್ಮುಖದಲ್ಲಿ ವೈದ್ಯಕೀಯ ಸಿಬ್ಬಂದಿ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.ಪ್ರಯಾಣಿಕರು ನಿಲ್ದಾಣದಿಂದ ಹೊರಬರುವ ಪ್ರವೇಶ ದ್ವಾರದಿಂದ ಹಿಡಿದು, ಬಸ್ ನಿಲುಗಡೆ ಸ್ಥಳದವರೆಗೆ ಬ್ಯಾರಿಕೇಡ್ ಹಾಕಲಾಗಿದೆ. ನಿಯಮಿತವಾಗಿ ಈ ಪ್ರದೇಶವನ್ನು ಸೋಂಕು ಮುಕ್ತಗೊಳಿಸಲಾಗುತ್ತಿದೆ.

ಲಂಡನ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರನ್ನು ಬಿಎಂಟಿಸಿ ಬಸ್‌ಗಳಲ್ಲಿ ಕ್ವಾರಂಟೈನ್ ಸೆಂಟರ್‌ಗಳಿಗೆ ಕಳಿಸಲಾಯಿತು.

ಬಿಎಂಟಿಸಿ ಬಸ್ ಬಳಕೆ

ವಿದೇಶದಿಂದ ಪ್ರಯಾಣಿಕರನ್ನು ವಿವಿಧ ಹೋಟೆಲ್ ಮತ್ತು ರೆಸಾರ್ಟ್ ಗಳಿಗೆ ಕಳಿಸಲು ಬಿಎಂಟಿಸಿ ಬಸ್ ಬಳಸಲಾಯಿತು.
ಒಂದು ಬಸ್ ನಲ್ಲಿ ತಲಾ 20 ಜನರನ್ನು ಕರೆದೊಯ್ಯಲಾಯಿತು. ಒಟ್ಟು 16 ಬಸ್‌ಗಳನ್ನು ಇದಕ್ಕಾಗಿ ಬಳಸಲಾಗುತ್ತಿದೆ.

ಮಾಸ್ಕ್ ಬದಲಾವಣೆ

ಪ್ರಯಾಣಿಕರು ಬಂದಿಳಿಯುತ್ತಿದ್ದಂತೆ, ಅವರುಧರಿಸಿದ್ದ ಮಾಸ್ಕ್ ಬದಲಿಸಿ,ಹೊಸ ಮುಖಗವಸುಗಳನ್ನು ನೀಡಲಾಗುತ್ತಿದೆ.

‘ವಿದೇಶಗಳಿಂದ ಬಂದವರಿಗೆ ಭಾರತದ ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಆದಷ್ಟು ಶೀಘ್ರ ಕ್ವಾರಂಟೈನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಅನುಕೂಲವಾಗಲು ಈ ಸಿಮ್ ಕಾರ್ಡ್ ನೀಡಲಾಗುತ್ತಿದೆ’ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತ್ಯೇಕ ಕೌಂಟರ್

ಪ್ರಯಾಣಿಕರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲು ಸಿದ್ಧವಿರುವ ಹೋಟೆಲ್ ಮತ್ತು ರೆಸಾರ್ಟ್ ಗಳ ಮಾಹಿತಿ ನೀಡಲೆಂದೇ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. 18 ಪಂಚತಾರಾ ಹೋಟೆಲ್, 26 ಸ್ಟಾರ್ ಹೋಟೆಲ್ ಹಾಗೂ 40 ಸಾಧಾರಣ ಹೋಟೆಲ್‌ಗಳ ಎಲ್ಲ ಕೊಠಡಿಗಳನ್ನು ಈ ಪ್ರಯಾಣಿಕರ ಕ್ವಾರಂಟೈನ್‌ಗೆ ಮೀಸಲಿಡಲಾಗಿದೆ.

ಪಂಚತಾರಾ ಹೋಟೆಲ್‌ಗಳು ದಿನಕ್ಕೆ ಒಬ್ಬರಿಗೆ ₹3,000, ಇಬ್ಬರಿಗೆ ₹3,700 ಶುಲ್ಕ ನಿಗದಿ ಮಾಡಿವೆ.ಉಳಿದ ಸ್ಟಾರ್ ಹೋಟೆಲ್‌ಗಳು ಒಬ್ಬರಿಗೆ, ಒಂದು ಕೋಣೆಗೆ ₹1,850, ಸಾಧಾರಣ ಹೋಟೆಲ್ ಗಳು ₹900 ಬಾಡಿಗೆ ನಿಗದಿ ಮಾಡಿವೆ.

ಪ್ರಯಾಣಿಕರು ಬಯಸಿದ ಹೋಟೆಲ್

ವಿದೇಶಗಳಿಂದ ಬಂದಿರುವವರನ್ನು ಅವರು ಇಷ್ಟಪಟ್ಟ ಹೋಟೆಲ್‌ಗೆ ಅಧಿಕಾರಿಗಳು ಕರೆದೊಯ್ಯುತ್ತಿದ್ದಾರೆ.ಹೋಟೆಲ್ ಆಯ್ಕೆಯನ್ನು ಸರ್ಕಾರ ಪ್ರಯಾಣಿಕರಿಗೇ ಬಿಟ್ಟಿದೆ. ಯಶವಂತಪುರದ ತಾಜ್ ಹೊಟೇಲ್ ನಲ್ಲಿ 80ಕ್ಕೂ ಹೆಚ್ಚು ಜನರ ಕ್ವಾರಂಟೈನ್ ಮಾಡಲಾಗಿದೆ.
ಈ ಹೋಟೆಲ್‌ನಲ್ಲಿದಿನಕ್ಕೆ ಕೊಠಡಿಯೊಂದಕ್ಕೆ ₹4,100 ಬಾಡಿಗೆ ನಿಗದಿ ಮಾಡಲಾಗಿದೆ.

ಲಂಡನ್‌ನಿಂದ ಬೆಂಗಳೂರಿಗೆ ಬರಲು ವಿಮಾನ ಪ್ರಯಾಣ ವೆಚ್ಚ ಒಬ್ಬರಿಗೆ ₹55,000.ಪ್ರಯಾಣ ವೆಚ್ಚ ಮತ್ತು ಹೋಟೆಲ್ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು.ಕ್ವಾರಂಟೈನ್ ಅವಧಿಯಲ್ಲಿ ಒಬ್ಬ ವ್ಯಕ್ತಿ ₹57,400 ವೆಚ್ಚ ಭರಿಸಬೇಕು.

‘ಒಟ್ಟು ಪ್ರಯಾಣಿಕರ ಜೊತೆಗೆ ಮೂವರು ಮಕ್ಕಳು ಬಂದಿದ್ದಾರೆ. ಗರ್ಭಿಣಿಯೊಬ್ಬರನ್ನು ಖಾಸಗಿ ಆಸ್ಪತ್ರೆಗೆ ಕಳಿಸಿ ಕೊಡಲಾಗಿದೆ. ಲಂಡನ್‌ನಲ್ಲಿಆತ್ಮಹತ್ಯೆಗೆ ಶರಣಾಗಿದ್ದ ವ್ಯಕ್ತಿಯ ಶವವನ್ನೂ ತಂದಿದ್ದರು. ಅದನ್ನು ಅವರ ಕುಟುಂಬದವರಿಗೆ ಕಳುಹಿಸಿಕೊಡಲಾಗಿದೆ’ ಎಂದು ಈಶಾನ್ಯ ವಲಯ ಡಿಸಿಪಿ ಭೀಮಾಶಂಕರ ಗುಳೇದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT