ಪುಟ್ಟೇನಹಳ್ಳಿ ಕೆರೆಯಲ್ಲಿ ಮೀನು ಕಳವು

ಬೆಂಗಳೂರು: ನಗರದ ಕೆರೆಗಳಲ್ಲಿ ಕಲ್ಮಶದಿಂದ ಮೀನುಗಳು ಸಾಯುತ್ತಿರುವುದು ಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ, ಪಕ್ಷಿಗಳಿಗಾಗಿಯೇ ಮೀಸಲಾಗಿರುವ ಮೀನುಗಳನ್ನು ಕಳವು ಮಾಡಲಾಗುತ್ತಿದೆ.
ಯಲಹಂಕದಲ್ಲಿರುವ ಪುಟ್ಟೇನಹಳ್ಳಿ ಕೆರೆಯಲ್ಲಿ ರಾತ್ರೋರಾತ್ರಿ ಮೀನುಗಳನ್ನು ಕಳವು ಮಾಡುವುದನ್ನು ಸ್ಥಳೀಯರು ಸಾಕ್ಷಿ ಸಮೇತ ಹಿಡಿದಿದ್ದಾರೆ. ಆದರೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಕೆರೆಯ ಉಸ್ತುವಾರಿ ಹೊಂದಿರುವ ಅರಣ್ಯ ಇಲಾಖೆ ವಿಫಲವಾಗಿದೆ.
ಪುಟ್ಟೇನಹಳ್ಳಿ ಕೆರೆ 37 ಎಕರೆ 14 ಗುಂಟೆ ವಿಸ್ತೀರ್ಣದಲ್ಲಿದ್ದು, ಪ್ರಮುಖವಾದ ಡಾರ್ಟರ್, ಪೈಂಟೆಡ್ ಸ್ಟಾರ್ಕ್ಸ್, ಬ್ಲಾಕ್ ಕ್ರೌನ್ಡ್ ನೈಟ್ ಹೆರಾನ್ಸ್ ಸೇರಿದಂತೆ 127 ಜಾತಿಯ ಪಕ್ಷಿಗಳಿವೆ. ಹಿಮಾಲಯ ಹಾಗೂ ಸೈಬಿರಿಯಾದಿಂದ ಪಕ್ಷಿಗಳು ವಲಸೆ ಬರುತ್ತವೆ. ಅಲ್ಲದೆ, ಇಲ್ಲಿ ಹಲವು ವಿಶಿಷ್ಟ ಜಾತಿ ಗಿಡ–ಮರಗಳಿವೆ. ಹೀಗಾಗಿ 2015ರಲ್ಲೇ ಪುಟ್ಟೇನಹಳ್ಳಿ ಕೆರೆಯನ್ನು ‘ಪಕ್ಷಿ ಸಂರಕ್ಷಣೆಗೆ ಮೀಸಲು’ ಎಂದು ಸರ್ಕಾರ ಆದೇಶಿಸಿದೆ. ಅರಣ್ಯ ಇಲಾಖೆ ಇದರ ಮೇಲ್ವಿಚಾರಣೆ ಹೊಂದಿದೆ.
‘ಕೆಲವು ತಿಂಗಳಿಂದ ಹಕ್ಕಿಗಳ ವಾಸ ಹಾಗೂ ಆಗಮನ ಕೆರೆಯಲ್ಲಿ ಕಡಿಮೆಯಾಗುತ್ತಿತ್ತು. ಇದರ ಬಗ್ಗೆ ನಾವೆಲ್ಲ ಸಾಕಷ್ಟು ಆತಂಕಗೊಂಡಿದ್ದೆವು. ಕಲ್ಮಶ ಹೆಚ್ಚಾಯಿತೇ ಎಂಬ ಬಗ್ಗೆ ಯೋಚಿಸುತ್ತಿದ್ದೆವು. ಆದರೆ ಕಾರಣ ಬೇರೆಯೇ ಆಗಿತ್ತು. ಪಕ್ಷಿಗಳಿಗಾಗಿಯೇ ಮೀಸಲಾಗಿರುವ ಮೀನುಗಳನ್ನು ಇಲ್ಲಿ ರಾತ್ರಿ ಹಿಡಿಯಲಾಗುತ್ತಿದೆ. ರಾತ್ರಿ 11ರ ನಂತರ ಬಲೆ ಹಾಕಿ, 3 ಗಂಟೆಯ ವೇಳೆಗೆ ಕೊಂಡೊಯ್ಯಲಾಗುತ್ತಿತ್ತು. ನಾವೆಲ್ಲ ಸ್ಥಳೀಯರು ಸೇರಿಕೊಂಡು ಇದನ್ನು ವಿಡಿಯೊ, ಫೋಟೊಗಳ ಸಾಕ್ಷಿ ಸಹಿತ ವಾಹನವನ್ನು ಹಿಡಿದೆವು’ ಎಂದು ಸ್ಥಳೀಯ ಪಕ್ಷಿಪ್ರೇಮಿ ರಮೇಶ್ ಹೇಳಿದರು.
‘ಪಕ್ಷಿ ಸಂರಕ್ಷಿತ ಮೀಸಲು ಕೆರೆಯಲ್ಲಿ ಮೀನುಗಳನ್ನು ಹಿಡಿಯುವಂತಿಲ್ಲ. ಬದಲಿಗೆ ಪಕ್ಷಿಗಳಿಗೆ ಅಗತ್ಯವಾದ ಮೀನುಗಳನ್ನು ಸಾಕಬೇಕು. ಆದರೆ, ಇದರ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲರ್ಕ್ಷ್ಯ ವಹಿಸಿದೆ. ಜೊತೆಗೆ ಮೀನುಗಳ್ಳರಿಗೆ ಬೆನ್ನೆಲುಬಾಗಿ ನಿಂತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಬೆಂಬಲ ಇಲ್ಲದೆ ಈ ರೀತಿ ಕಳವು ಸಾಧ್ಯವಿಲ್ಲ’ ಎಂದು ಸ್ಥಳೀಯರು ದೂರಿದರು.
‘ಅರಣ್ಯ ಅಧಿಕಾರಿಗಳಿಗೇ ಹಣ ನೀಡಿ ಅನುಮತಿ ಪಡೆದಿದ್ದೇವೆ. ನೀವು ಯಾರು ಕೇಳುವುದಕ್ಕೆ ಎಂದು ಮೀನು ಹಿಡಿಯುವವರು ಅಬ್ಬರಿಸುತ್ತಾರೆ’ ಎಂದು ಸ್ಥಳೀಯರು ಆರೋಪಿಸಿದರು.
ಎಚ್ಚರಿಕೆ ಕ್ರಮ: ‘ಮೂರ್ನಾಲ್ಕು ದಿನದಿಂದ ಸ್ಥಳೀಯರು ಮೀನು ಹಿಡಿಯುತ್ತಿರುವ ಬಗ್ಗೆ ನಮಗೆ ಹೇಳಿದರು. ಆ ರೀತಿ ಇದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ರಾತ್ರಿಯೆಲ್ಲ ತಪಾಸಣೆ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತ ಪಾಟೀಲ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.