ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬಹುಕೋಟಿ ಮೌಲ್ಯದ ಭುವನಹಳ್ಳಿಯ ಅರಣ್ಯವೀಗ ಲೇಔಟ್‌!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಭುವನಹಳ್ಳಿಯ ‘ರಾಜ್ಯ ಅರಣ್ಯ’ ವ್ಯಾಪ್ತಿಯಲ್ಲಿರುವ 8 ಎಕರೆ 35 ಗುಂಟೆ ಜಮೀನು ವ್ಯಾಜ್ಯ
Published 23 ಜನವರಿ 2024, 2:28 IST
Last Updated 23 ಜನವರಿ 2024, 2:55 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಭುವನಹಳ್ಳಿಯ ‘ರಾಜ್ಯ ಅರಣ್ಯ’ ವ್ಯಾಪ್ತಿಯಲ್ಲಿರುವ 8 ಎಕರೆ 35 ಗುಂಟೆ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದ ಮೇಲ್ಮನವಿ ಸಂಬಂಧಿಸಿದ ಸ್ಥಿರಾಸ್ತಿ ಸ್ವತ್ತಿನ ಅಧಿಕಾರವನ್ನು ಯಾವುದೇ ಮೂರನೇ ವ್ಯಕ್ತಿಗೆ ಘೋಷಿಸದಂತೆ ನಿರ್ಬಂಧಿಸಿ ಮಧ್ಯಂತರ ಆದೇಶ ಹೊರಡಿಸಿದೆ. 

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ದೇವನಹಳ್ಳಿ ತಾಲ್ಲೂಕು ವಲಯ ಅರಣ್ಯ ಅಧಿಕಾರಿ ಸಲ್ಲಿಸಿರುವ ನಿಯಮಿತ ಪ್ರಥಮ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್‌ ಎಂ.ರೋಣ ಅವರು ವಾದ ಮಂಡಿಸಿ, ‘ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಕಸಬಾ ಹೋಬಳಿಯಲ್ಲಿ ಚಿಕ್ಕಸಣ್ಣೆ ಮತ್ತು ಭುವನಹಳ್ಳಿಯನ್ನು ಒಳಗೊಂಡ 59 ಎಕರೆ 8 ಗುಂಟೆ ಪ್ರದೇಶವನ್ನು ರಾಜ್ಯದ ಅರಣ್ಯ ಎಂದು ಮೈಸೂರು ಅರಣ್ಯ ನಿಯಂತ್ರಣ ಕಾಯ್ದೆಯ ಕಲಂ 17ರ ಅನುಸಾರ 1921ರ ಜನವರಿ 8ರಲ್ಲೇ ಅಧಿಸೂಚನೆ ಹೊರಡಿಸಲಾಗಿದೆ‘ ಎಂದರು.

‘ಭುವನಹಳ್ಳಿ ರಾಜ್ಯ ಅರಣ್ಯ ಬ್ಲಾಕ್‌ನಲ್ಲಿರುವ ಚಿಕ್ಕಸಣ್ಣೆಯ ಸರ್ವೇ ನಂಬರ್ 69ರಲ್ಲಿ (ಹಳೆಯ ಸರ್ವೇ ನಂಬರ್ 67) ವ್ಯಾಜ್ಯಕ್ಕೆ ಒಳಪಟ್ಟಿರುವ 8 ಎಕರೆ 35 ಗುಂಟೆ ಜಮೀನು ಕೂಡಾ ಸೇರಿದೆ. ಇದರಲ್ಲಿ ಮೇಲ್ಮನವಿಯ ಪ್ರತಿವಾದಿಗಳು ಮತ್ತು ಅವರ ಕಡೆಯವರು ವ್ಯಾಜ್ಯ ಪ್ರದೇಶದಲ್ಲಿ ಲೇ ಔಟ್‌ ನಿರ್ಮಾಣ ಮಾಡಿದ್ದು, ಅರಣ್ಯ ಪ್ರದೇಶದ ಮೇಲೆ ಮೂರನೇ ವ್ಯಕ್ತಿ ಸ್ವತ್ತಿನ ಅಧಿಕಾರ ಹೊಂದಲು ಅವಕಾಶ ಮಾಡಿಕೊಟ್ಟಿದ್ದಾರೆ‘ ಎಂದು ಆಕ್ಷೇಪಿಸಿದರು.

‘ಇದರಂತೆಯೇ ಸುತ್ತಲಿನ ಇನ್ನುಳಿದ ರಾಜ್ಯ ಅರಣ್ಯದಲ್ಲೂ ಮೂರನೇ ವ್ಯಕ್ತಿಗಳು ಪೋಡಿ ಮಾಡಿಕೊಂಡು ಲೇ ಔಟ್‌ ನಿರ್ಮಿಸಿದ್ದು ಅರಣ್ಯ ಪ್ರದೇಶವೇ ಇಲ್ಲದಂತಾಗಿದೆ ಮತ್ತು ಇಲ್ಲೀಗ ಕೇವಲ 8 ಎಕರೆ 25 ಗುಂಟೆ ಮಾತ್ರವೇ ಅರಣ್ಯ ಪ್ರದೇಶವಾಗಿ ಉಳಿದಿದೆ’ ಎಂದು ವಿವರಿಸಿದರು.

‘ಸರ್ಕಾರವು ಅರಣ್ಯ ಪ್ರದೇಶದ ಒತ್ತುವರಿಯನ್ನು ಕಾಲಕಾಲಕ್ಕೆ ಗುರುತಿಸಿ ತಡೆಯುತ್ತಿರಬೇಕು ಮ‌ತ್ತು ದಾಖಲೆಗಳನ್ನು ಜತನವಾಗಿ ಕಾಪಾಡುತ್ತಿರಬೇಕು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅನುಸಾರ ವಲಯ ಅರಣ್ಯ ಅಧಿಕಾರಿ ಯು.ಜೆ.ಪವಿತ್ರಾ ಅವರ ಶ್ರಮ ವಹಿಸಿ ರಾಜ್ಯ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜತನದಿಂದ ಕ್ರೋಡೀಕರಿಸಿದ್ದಾರೆ. ಈ ಕ್ರೋಡೀಕೃತ ದಾಖಲೆಗಳನ್ನು ನ್ಯಾಯಪೀಠ ಪರಿಶೀಲಿಸಬೇಕು’ ಎಂದು ಕೋರಿದರು.

ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಯಾಗಿರುವ ಚಿಕ್ಕಸಣ್ಣೆ ಗ್ರಾಮದ ಸಗಟು ಹಣ್ಣಿನ ವ್ಯಾಪಾರಿ ಎಂ.ಎ.ಮೊಹಮದ್ ಸನಾವುಲ್ಲಾ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

ಏನಿದು ಪ್ರಕರಣ?

ಚಿಕ್ಕಸಣ್ಣೆ ಗ್ರಾಮ ವ್ಯಾಪ್ತಿಯಲ್ಲಿನ ಭುವನಹಳ್ಳಿಯ ರಾಜ್ಯ ಅರಣ್ಯದ ಕೆಲ ಭಾಗವನ್ನು 1936ರ ಸೆಪ್ಟೆಂಬರ್ 30ರಂದು ಮೈಸೂರು ಭೂ ಕಂದಾಯ ಸಂಹಿತೆ ಅನುಸಾರ ಹರಾಜು ಹಾಕಿದಾಗ ಸುಬ್ಬರಾಯ ಮೊದಲಿಯಾರ್ ಎಂಬುವರು  43 ಎಕರೆ 24 ಗುಂಟೆ ಜಮೀನನ್ನು ಖರೀದಿಸಿದ್ದರು. ಸುಬ್ಬರಾಯ ಅವರಿಗೆ 1936 ನವೆಂಬರ್‌ 19 ರಂದು ಮಾರಾಟ ಪ್ರಮಾಣ ಪತ್ರ ನೀಡಲಾಗಿದೆ. ಈ ಸ್ವತ್ತನ್ನು 1977ರಲ್ಲಿ ಸದ್ಯ ಪ್ರತಿವಾದಿಯಾಗಿರುವ ಕಡೆಯವರು ಖರೀದಿಸಿದ್ದರಲ್ಲದೆ ಈ ಕುರಿತಂತೆ ಸಿವಿಲ್‌ ವ್ಯಾಜ್ಯಗಳು ಉದ್ಭವಿಸಿ ಈಗ ಎರಡನೇ ಸುತ್ತಿನ ವ್ಯಾಜ್ಯ ನಡೆಯುತ್ತಿದೆ. ಸ್ವತ್ತಿಗೆ ಸಂಬಂಧಿಸಿದ ಅಸಲು ದಾವೆಯಲ್ಲಿ ದೇವನಹಳ್ಳಿಯ ಪ್ರಧಾನ ಹಿರಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 2023ರ ಡಿಸೆಂಬರ್ 15ರಂದು ಆದೇಶ ನೀಡಿದ್ದು ಪ್ರತಿವಾದಿಗಳಿಗೆ ಸ್ವತ್ತಿನ ಅಧಿಕಾರ ಘೋಷಣೆ ಮಾಡುವಂತೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿರುವ ರಾಜ್ಯ ಸರ್ಕಾರ ‘ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಕಂದಾಯ ಇಲಾಖೆ ಹರಾಜು ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲ‘ ಎಂದು ಮೇಲ್ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT