ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಿ ಡಿಕ್ರಿ ಪ್ರಕರಣ: ವಿಧಿವಿಜ್ಞಾನ ಪರೀಕ್ಷೆ

Last Updated 16 ನವೆಂಬರ್ 2021, 16:23 IST
ಅಕ್ಷರ ಗಾತ್ರ

ಬೆಂಗಳೂರು: ಕೋರ್ಟ್‌ ಆದೇಶ ತಿರುಚಿ, ನಕಲಿ ದಾಖಲೆ ಸೃಷ್ಟಿಸುವ ಮೂಲಕ ಖಾಸಗಿ ವ್ಯಕ್ತಿಗಳ ಆಸ್ತಿ ಕಬಳಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳ ಮೂಲ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲು ಹೈಕೋರ್ಟ್ ಸಮ್ಮತಿಸಿದೆ.

‘ಖಾಸಗಿ ವ್ಯಕ್ತಿಗಳ ಆಸ್ತಿ ಕಬಳಿಕೆ ಪ್ರಕರಣಗಳಲ್ಲಿ ವಕೀಲರು ಭಾಗಿಯಾಗಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರಕರಣದಲ್ಲಿ ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಶ್ರೀಧರ್ ಪ್ರಭು ವಾದ ಮಂಡಿಸಿ, ‘ಡಿಜಿಟಲ್ ದಾಖಲೆಗಳನ್ನು ನೋಟರಿ ಮೂಲಕ ದೃಢೀಕರಿಸುವ ಅಗತ್ಯವಿದೆ. ಹಾಗಾಗಿ ಈ ಪ್ರಕರಣದಲ್ಲಿಕೇಂದ್ರ ಸರ್ಕಾರವನ್ನೂ ಪ್ರತಿವಾದಿಯನ್ನಾಗಿ ಮಾಡಲು ನಿರ್ದೇಶಿಸಬೇಕು‘ ಎಂದು ಕೋರಿದರು.

‘ಇದನ್ನು ಅಂತಿಮ ಆದೇಶದ ವೇಳೆಗೆ ಪರಿಗಣಿಸಲಾಗುವುದು‘ ಎಂದು ತಿಳಿಸಿದ ನ್ಯಾಯಪೀಠ, ‘ಹಾಲಿ ಪ್ರಕರಣದಲ್ಲಿ ಮೂಲ ದಾಖಲೆಗಳನ್ನು ತನಿಖಾಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಡಬಹುದು. ಅಂತೆಯೇ ತನಿಖೆಯನ್ನು ತ್ವರಿತವಾಗಿ ನಡೆಸಬೇಕು’ ಎಂದು ಸಿಐಡಿಗೆ ನಿರ್ದೇಶಿಸಿ, ವಿಚಾರಣೆಯನ್ನು 2022ರ ಫೆಬ್ರುವರಿ 25ಕ್ಕೆ ಮುಂದೂಡಿತು.

ಏನಿದು ಪ್ರಕರಣ?: ಬೆಂಗಳೂರಿನ ಶಾ ಹರಿಲಾಲ್ ಬಿಕಾಭಾಯಿ ಎಂಬುವರ ಆಸ್ತಿ ಕಬಳಿಕೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದ ರಿಟ್ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ನ್ಯಾಯಾಲಯಗಳ ತೀರ್ಪಿನ ಪ್ರತಿಗಳನ್ನು ತಿರುಚಲಾಗಿದೆ ಎಂಬುದನ್ನು ಗಮನಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.

ತನಿಖೆ ವೇಳೆ, ಕೆಲ ವ್ಯಕ್ತಿಗಳು ಖಾಸಗಿ ಆಸ್ತಿಗಳಿಗೆ ನಕಲಿ ದಾಖಲೆ ಮತ್ತು ಬಾಡಿಗೆದಾರರನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿ, ನಂತರ ನಕಲಿ ವ್ಯಕ್ತಿಗಳೇ ರಾಜಿ ಮೂಲಕ ಡಿಕ್ರಿ ಪಡೆದು ಆಸ್ತಿ ಕಬಳಿಸುತ್ತಿದ್ದುದು ಬೆಳಕಿಗೆ ಬಂದಿತ್ತು. ಇಂತಹ ಪ್ರಕರಣಗಳಲ್ಲಿ ವಕೀಲರು ಮತ್ತು ನೋಟರಿಗಳೂ ಶಾಮೀಲಾಗಿದ್ದಾರೆ ಎಂಬ ಅಂಶವನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿ ಕೆಲ ವಕೀಲರನ್ನೂ ಬಂಧಿಸಿದ್ದರು.ಇದೇ ರೀತಿಯ 118 ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT