ಗುರುವಾರ , ಮೇ 6, 2021
22 °C
ಸಂವಿಧಾನವೇ ರಕ್ಷಾಕವಚ, ಖಾಕಿ ಚಡ್ಡಿಯಲ್ಲ‌

ನ್ಯಾಯಾಂಗ ನಿಂದನೆ ಕಾಯ್ದೆ ರದ್ದಾಗಲಿ: ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ್‌ ದಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶದ್ರೋಹ, ಮಾನಹಾನಿ ಹಾಗೂ ನ್ಯಾಯಾಂಗ ನಿಂದನೆ ಕಾಯ್ದೆಗಳನ್ನು ಕಾನೂನಿನ ಪುಸ್ತಕದಿಂದಲೇ ತೆಗೆದುಹಾಕಬೇಕು. ಇವೆಲ್ಲಾ ವಸಾಹತುಶಾಹಿ ಕಾಯ್ದೆಗಳು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಅಭಿಪ್ರಾಯಪಟ್ಟರು.

ಫೋರಂ ಫಾರ್‌ ಡೆಮಾಕ್ರಸಿ ಆ್ಯಂಡ್‌ ಕಮ್ಯುನಲ್‌ ಅಮಿಟಿ ಶನಿವಾರ ಆಯೋಜಿಸಿದ್ದ ‘ದೇಶವು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಕುರಿತ ಚರ್ಚೆ’ಯಲ್ಲಿ ಅವರು ಮಾತನಾಡಿದರು.

‘ದೇಶದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗಳು ಸಂವಿಧಾನದ ತಳಹದಿಯ ಮೇಲೆ ನಿಂತಿವೆ. ಸಂವಿಧಾನ ನಮ್ಮ ಧರ್ಮ ಗ್ರಂಥ. ಅದೇ ನಮ್ಮೆಲ್ಲರ ರಕ್ಷಾ ಕವಚ ಆಗಬೇಕೆ ಹೊರತು ಖಾಕಿ ಚಡ್ಡಿಯಲ್ಲ’ ಎಂದು ಪರೋಕ್ಷವಾಗಿ ಆರ್‌ಎಸ್‌ಎಸ್‌ ಅನ್ನು ಕುಟುಕಿದರು.

‘ಇಂದು ಸಂವಿಧಾನಕ್ಕೇ ಆಪತ್ತು ಎದುರಾಗಿದೆ. ನ್ಯಾಯಾಂಗ ವ್ಯವಸ್ಥೆಯು ಆಂತರಿಕ ಹಾಗೂ ಬಾಹ್ಯ ಒತ್ತಡ ಎದುರಿಸುತ್ತಿದೆ. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ನೇಮಕದ ವೇಳೆ ರಾಜಕೀಯ ಹಸ್ತಕ್ಷೇಪ ನಡೆಸಲಾಗುತ್ತಿದೆ. ಅರ್ಹರನ್ನು ಕಡೆಗಣಿಸಿ ತಮಗೆ ಬೇಕಾದವರಿಗೆ ಆಯಕಟ್ಟಿನ ಹುದ್ದೆ ನೀಡಲಾಗುತ್ತಿದೆ. ನ್ಯಾಯದಾನದ ವಿಚಾರದಲ್ಲೂ ಅಸಮಾನತೆ ಮನೆ ಮಾಡಿದೆ. ಸರ್ಕಾರದ ನೀತಿಗಳಲ್ಲಿ ಕಾರ್ಪೊರೇಟ್‌ ಕಂಪನಿಗಳು ಮೂಗು ತೂರಿಸುತ್ತಿವೆ. ಭಾವನಾತ್ಮಕ ವಿಚಾರ ಗಳನ್ನು ಮುಂದಿಟ್ಟುಕೊಂಡು
ಚುನಾವಣೆ ಎದುರಿಸಲಾಗುತ್ತಿದೆ. ಇತರ ಜ್ವಲಂತ ಸಮಸ್ಯೆಗಳೆಲ್ಲಾ ಗೌಣವಾಗಿವೆ. ಇದು ಆತಂಕಕಾರಿ’ ಎಂದರು. 

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯ ಮೂರ್ತಿ ವಿ.ಗೋಪಾಲ ಗೌಡ ಮಾತನಾಡಿ, ‘ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆ ಅವೈಜ್ಞಾನಿಕವಾದುದು. ಇದು ರೈತ ವಿರೋಧಿ. ದೇಶವು ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಸಂವಿಧಾನವು ಆಳುವವರ ಅಧೀನ ಕ್ಕೊಳಪಟ್ಟಿದೆ. ಅದನ್ನು ತಮಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ಕೇಂದ್ರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳಿಂದ ರೈತರ ಆದಾಯ ದ್ವಿಗುಣ ವಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಶಾಸನಬದ್ಧಗೊಳಿಸಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ. ಭಾರಿ ವಿರೋಧದ ನಡುವೆಯೂ ಇವುಗಳನ್ನು ಅನುಷ್ಠಾನಗೊಳಿಸಿದ್ದಾದರೂ ಏಕೆ’ ಎಂದು ಪ್ರಶ್ನಿಸಿದರು.

‘ಪ್ರಜ್ಞಾವಂತರು ಸರ್ಕಾರದ ಧೋರಣೆಯನ್ನು ಟೀಕಿಸಿ ಕೇಂದ್ರಕ್ಕೆ ಪತ್ರ ಬರೆದರೆ ಅವರ ವಿರುದ್ಧವೇ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತಿದೆ. ಜನರು ಭಯದಿಂದಾಗಿ ಪ್ರಶ್ನಿಸುವ ಮನೋಭಾವವನ್ನೇ ಕಳೆದುಕೊಂಡಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎ.ನಾರಾಯಣ ಹೇಳಿದರು.

ಪತ್ರಕರ್ತ ಸುಗತ ಶ್ರೀನಿವಾಸ ರಾಜು, ‘ಸುದ್ದಿಮನೆಗಳಲ್ಲಿ ವೈವಿಧ್ಯ ಮರೆ ಯಾಗಿದೆ. ಮಾಧ್ಯಮ ಕ್ಷೇತ್ರವು ಕುಸಿದು ಬಿದ್ದಿದೆ. ಆಳುವವರನ್ನು ಟೀಕಿಸುವ ನೈತಿಕತೆಯನ್ನೇ ಕಳೆದುಕೊಂಡಿದೆ’ ಎಂದರು.

ಎಫ್‌ಡಿಸಿಎ ಕಾರ್ಯದರ್ಶಿ ಎಂ.ಎಫ್‌.ಪಾಷಾ, ಉಪಾಧ್ಯಕ್ಷೆ ಕಾತ್ಯಾಯಿನಿ ಚಾಮರಾಜ್‌, ವೈದ್ಯ ಮೊಹಮ್ಮದ್‌ ತಾಹ ಮತೀನ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು