ಬುಧವಾರ, ಮಾರ್ಚ್ 3, 2021
29 °C

ಡಿ.ರೂಪಾ ಫೊಟೊ ಬಳಸಿ ವಂಚನೆ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಸ್ಸಾಂನ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅವುಗಳಿಗೆ ಗೃಹ ಇಲಾಖೆಯ ಕಾರ್ಯದರ್ಶಿ ಡಿ.ರೂಪಾ (ಐಪಿಎಸ್) ಅವರ ಫೊಟೊ ಬಳಸಿ, ಹಲವರಿಂದ ಹಣ ವಸೂಲಿ ಮಾಡುತ್ತಿರುವ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ‍ಪ್ರಕರಣ ದಾಖಲಾಗಿದೆ.

ಆರೋಪಿ ಮೊದಲಿಗೆ ‘ಸಕೋಲಿನ್ ಚೌಧರಿ ಶರ್ಮಾ’ ಹೆಸರಿನಲ್ಲಿ ಫೇಸ್‍ಬುಕ್‍ ಖಾತೆ ಸೃಷ್ಟಿಸಿದ್ದ. ಅದಕ್ಕೆ ರೂಪಾ ಅವರ ಫೊಟೊ ಬಳಸಿಕೊಂಡು ಹಲವರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿದ್ದ. ತಾನು ಅಸ್ಸಾಂ ಸಿವಿಲ್ ಸರ್ವೆಂಟ್ ಎಂದು ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ, ಹಲವರ ಮೊಬೈಲ್‌ ನಂಬರ್‌ಗಳನ್ನು ಸಂಗ್ರಹಿಸಿದ್ದ ಎನ್ನಲಾಗಿದೆ.

30ಕ್ಕೂ ಹೆಚ್ಚು ನಂಬರ್‌ಗಳಿದ್ದ ವಾಟ್ಸ್ಆ್ಯಪ್‌ ಗುಂಪೊಂದನ್ನು ರಚಿಸಿದ್ದ. ಕೆಲವರಿಗೆ ಸಂದೇಶ ಮಾತ್ರವಲ್ಲದೆ, ಮಹಿಳೆಯ ಧ್ವನಿಯಲ್ಲಿ ಕರೆ ಮಾಡಿದ್ದ. ಚಾರಿಟಿಯೊಂದರ ವಿಚಾರವಾಗಿ ಹಣ ಕೇಳುತ್ತಿದ್ದ. ಇದನ್ನು ನಂಬಿ ಹಲವರು ಹಣ ದೇಣಿಗೆಯಾಗಿ ನೀಡಿ ವಂಚನೆಗೆ ಒಳಗಾಗಿದ್ದಾರೆ.

‘ಪ್ರಣಾಮಿಕಾ ಮಹಾಂತಾಸ್‌’ ಎಂಬ ಹೆಸರಿನಲ್ಲೂ ಫೇಸ್‌ಬುಕ್‌ನಲ್ಲಿದ್ದ ಖಾತೆಗೆ ರೂಪಾ ಅವರ ಫೋಟೊ ಬಳಕೆ ಮಾಡಲಾಗಿತ್ತು. ಅಲ್ಲಿಯೂ ಹೀಗೇ  ವಂಚಿಸುತ್ತಿದ್ದ. ಫೇಸ್‌ಬುಕ್ ಖಾತೆಗಳಿಂದ ಅನುಮಾನಗೊಂಡ ಅಸ್ಸಾಂ ಮೂಲದ ಮೂವರು ಈ ಘಟನೆಗಳನ್ನು ರೂಪಾ ಅವರಿಗೆ ವಿವರಿಸಿದ್ದಾರೆ. 

‘ಅಸ್ಸಾಂನಿಂದ ನನಗೆ ಮೂರು ಕರೆಗಳು ಬಂದವು. ಫೇಸ್‌ಬುಕ್‌ನಲ್ಲಿ ನನ್ನ ಫೊಟೊ ಬಳಸಿ, ಮಹಿಳೆ ಧ್ವನಿಯಲ್ಲಿ ಮಾತನಾಡಿ, ಹಲವರಿಗೆ ವಂಚಿಸಿದ್ದಾರೆ. ಇದನ್ನು ಸೈಬರ್‌ ಕ್ರೈಂ ವಿಭಾಗದ ಗಮನಕ್ಕೆ ತಂದಿದ್ದೇನೆ. ಈ ರೀತಿಯ ವಂಚಕರಿಂದ ಸಾರ್ವಜನಿಕರು ಎಚ್ಚರವಾಗಿರಿ. ಇಂತಹವರಿಗೆ ಹಣ ನೀಡಬೇಡಿ’ ಎಂದು ರೂಪಾ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು