ಬೆಂಗಳೂರು: ನಗರದಲ್ಲಿ ಬಾಡಿಗೆಗೆ ಮನೆ ಹಾಗೂ ಫ್ಲ್ಯಾಟ್‌ಗಳನ್ನು ಪಡೆದು ನಂತರ ಅದೇ ಮನೆಗಳನ್ನು ಇತರರಿಗೆ ಭೋಗ್ಯಕ್ಕೆ ನೀಡುವ ಮೂಲಕ ಹಲವರಿಗೆ ವಂಚಿಸಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದ ಝಿಯು ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ನಡೆಸುತ್ತಿದ್ದ ಅಹಮದ್ ಅಲಿ ಬೇಗ್ ಹಾಗೂ ಅವರ ಪತ್ನಿ ಮುಯಿದಾ ಸಮ್ದಾನಿ ಬಾನು ಅವರನ್ನು ಬಂಧಿಸಲಾಗಿದೆ. ಇನ್ನೂ ಕೆಲವು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
ಝಿಯು ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಪ್ರಾಪರ್ಟಿ ಮ್ಯಾನೇಜ್ಮೆಂಟ್ ಕಂಪನಿ ತೆರೆದು ಎಚ್.ಬಿ.ಆರ್ ಲೇಔಟ್‌ನಲ್ಲಿ ಆರೋಪಿಗಳು ಕಚೇರಿ ನಡೆಸುತ್ತಿದ್ದರು. ಖಾಲಿ ಇರುವ ಮನೆ ಹಾಗೂ ಫ್ಲ್ಯಾಟ್‌ಗಳ ಮಾಲೀಕರನ್ನು ಮಧ್ಯವರ್ತಿಗಳ ಮೂಲಕ ಸಂಪರ್ಕಿಸಿ, ತಾವು ಬಾಡಿಗೆದಾರರನ್ನು ಹುಡುಕಿಕೊಡುವ ಮೂಲಕ ನಿರ್ವಹಣೆ ಮಾಡುವುದಾಗಿ ನಂಬಿಸುತ್ತಿದ್ದರು.
ಬಾಡಿಗೆಗೆ ಎಂದು ಕರಾರು ಮಾಡಿಕೊಂಡು ಬಳಿಕ ಅವುಗಳನ್ನು ಬೇರೆಯವರಿಗೆ ₹15 ರಿಂದ ₹20 ಲಕ್ಷದವರೆಗೂ ಭೋಗ್ಯಕ್ಕೆ ಹಾಗೂ ₹15 ರಿಂದ ₹20 ಸಾವಿರಕ್ಕೆ ಬಾಡಿಗೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ತಿಂಗಳ ಬಳಿಕ ಮಾಲೀಕರಿಗೆ ಬಾಡಿಗೆ ನೀಡುತ್ತಿರಲಿಲ್ಲ. ಮಾಲೀಕರು ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ, ಬೇರೆ ಯಾರೋ ಇರುತ್ತಿದ್ದರು. ತಾವು ಭೋಗ್ಯಕ್ಕೆ ಪಡೆದಿರುವುದಾಗಿ ಮನೆಯಲ್ಲಿದ್ದವರು ತಿಳಿಸುತ್ತಿದ್ದರು. ಮನೆ ಮಾಲೀಕರು ಹಾಗೂ ಬಾಡಿಗೆದಾರರನ್ನು ವಂಚಿಸುತ್ತಿದ್ದ ಝಿಯು ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸ್ಥಾಪಕ ಅಹಮದ್ ಅಲಿ ಬೇಗ್, ನೂರ್ ಅಹಮದ್ ಅಲಿ ಬೇಗ್, ಅಕ್ರಂ ಪಾಷ, ಅಬ್ದುಲ್ ರಹೀಂ ಹಾಗೂ ಸೈಯ್ಯದ್ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಏಪ್ರಿಲ್‌ನಲ್ಲಿ ಎಫ್ಐಆರ್ ದಾಖಲಾಗಿತ್ತು.
ಹೆಣ್ಣೂರು, ಬಾಣಸವಾಡಿ ಸೇರಿ ಹಲವು ಠಾಣೆಗಳಲ್ಲಿ ಮನೆ ಹಾಗೂ ಫ್ಲ್ಯಾಟ್ ಮಾಲೀಕರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ಬಯಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದರು.
ವಂಚನೆಗೊಳಗಾದ ಮನೆಗಳ ಮಾಲೀಕರು, ಭೋಗ್ಯಕ್ಕೆ ವಾಸವಿದ್ದವರು ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೂನ್‌ನಲ್ಲಿ ಕ್ವೀನ್ಸ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ದರು. ಬಳಿಕ ಎಲ್ಲಾ ಪ್ರಕರಣಗಳ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.
ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದ ಅಹಮದ್ ಅಲಿ ಬೇಗ್ ಹಾಗೂ ಆತನ ಪತ್ನಿ ಮುಯಿದಾ ಸಮ್ದಾನಿ ಬಾನು ಅವರನ್ನು ಬಂಧಿಸಿ, ಬೆಂಗಳೂರಿಗೆ ಕರೆತರಲಾಗಿದೆ. ಅವರ ವಿಚಾರಣೆ ನಡೆಸಲಾಗುತ್ತಿದೆ. ತಲೆಮರೆಸಿಕೊಂಡಿರುವ ಇನ್ನೂ ಕೆಲವು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಬ್ಬರು ಜಾಮೀನು ಪಡೆದು ಹೊರ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.