ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ಗಲಿದೆ ಗಾಂಧಿ ಬಜಾರ್ ಮುಖ್ಯ ರಸ್ತೆ

80 ಅಡಿ ಅಗಲ ರಸ್ತೆ 20 ಅಡಿಗೆ ಪರಿವರ್ತಿಸುವ ಯೋಜನೆ: ಬಸವನಗುಡಿ ಪರಂಪರೆ ಉಳಿಸಲು ಆಗ್ರಹ
Last Updated 18 ಏಪ್ರಿಲ್ 2022, 19:21 IST
ಅಕ್ಷರ ಗಾತ್ರ

ಬೆಂಗಳೂರು: ಐತಿಹಾಸಿಕ ಪರಂಪರೆ ಹೊಂದಿರುವ ಗಾಂಧಿ ಬಜಾರ್‌ಗೆ ಆಧುನೀಕರಣದ ಸ್ಪರ್ಶ ನೀಡುವ ಯೋಜನೆ ಸ್ಥಳೀಯರ ಟೀಕೆಗೆ ಒಳಗಾಗಿದೆ.

‘ಸ್ಮಾರ್ಟ್‌ ಸಿಟಿ’ ಅಡಿಯಲ್ಲಿ ಗಾಂಧಿ ಬಜಾರ್‌ನ ಮುಖ್ಯ ರಸ್ತೆಯನ್ನು ಕುಗ್ಗಿಸಿ ಪಾದಚಾರಿ ಮಾರ್ಗವನ್ನು ವಿಸ್ತರಿಸುವ ನಗರ ಭೂಸಾರಿಗೆ ನಿರ್ದೇಶನಾಲಯದ (ಡಲ್ಟ್‌) ಯೋಜನೆಗೆ ವಿರೋಧ ವ್ಯಕ್ತವಾಗಿದೆ.

ಬಸವನಗುಡಿ ವ್ಯಾಪಾರಿಗಳ ವೇದಿಕೆ, ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ವೇದಿಕೆ, ಬಸವನಗುಡಿ ವರ್ತಕರ ಮಂಡಳಿ, ಗಾಂಧಿ ಬಜಾರ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆ, ಬೆಂಗಳೂರು ಪ್ರಜಾ ವೇದಿಕೆ ಸದಸ್ಯರು ಸೋಮವಾರ ‘ಡಲ್ಟ್‌’ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ವಿಶ್ವ ಪರಂಪರೆಯ ದಿನವಾದ ಸೋಮವಾರವೇ ಈ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.

ಇಲ್ಲಿನ ಆಹ್ಲಾದಕರ ಮತ್ತು ಶಾಂತಿಯ ವಾತಾವರಣಕ್ಕೆ ಧಕ್ಕೆ ತರುವ ಪ್ರಯತ್ನ ಇದಾಗಿದೆ. ಈ ಯೋಜನೆಯನ್ನು ಕೈಬಿಡುವ ಮೂಲಕ ಬಸವನಗುಡಿಯ ಸಾಂಸ್ಕೃತಿಕ ಪರಂಪರೆ ಉಳಿಸಬೇಕು. ಈ ಯೋಜನೆಯನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.

ಈಗಿರುವ 80 ಅಡಿ ಅಗಲದ ಮುಖ್ಯ ರಸ್ತೆಯನ್ನು 20 ಅಡಿ ರಸ್ತೆಗೆ ಕುಗ್ಗಿಸಿ ಪಾದಚಾರಿ ಮಾರ್ಗವನ್ನು ವಿಸ್ತರಿಸುವ ಯೋಜನೆಯು ಸಂಪೂರ್ಣ ಅವೈಜ್ಞಾನಿಕವಾಗಿದೆ. ಗಾಂಧಿ ಬಜಾರ್‌ ಮತ್ತು ಡಿವಿಜಿ ರಸ್ತೆಯಲ್ಲಿ ಪಾರ್ಕಿಂಗ್‌ ನಿಷೇಧಿಸಲು ಉದ್ದೇಶಿಸಲಾಗಿದೆ. ಗಾಂಧಿ ಬಜಾರ್‌ ಮುಖ್ಯ ರಸ್ತೆಯನ್ನು ಪಾದಚಾರಿಗಳಿಗೆ ಮಾತ್ರ ನಿಗದಿಪಡಿಸಲಾಗುತ್ತಿದೆ. ಈ ರೀತಿಯ ಕ್ರಮಗಳಿಂದ ಸಂಚಾರ ದಟ್ಟಣೆ ಹೆಚ್ಚಾಗಲಿದೆಯೇ ಹೊರತು ಸಮಸ್ಯೆಗಳು ಕಡಿಮೆಯಾಗುವುದಿಲ್ಲ ಎಂದು ದೂರಿದರು.

‘ಆಧುನೀಕರಣಗೊಳಿಸುವ ಬದಲು ಈಗಿರುವ ಮೂಲಸೌಕರ್ಯಗಳನ್ನು ಉತ್ತಮ ಪಡಿಸಬೇಕು. ಇದರಿಂದ ವ್ಯಾಪಾರಿಗಳಿಗೂ ಮತ್ತು ನಾಗರಿಕರಿಗೂ ಅನುಕೂಲವಾಗುತ್ತದೆ’ ಎಂದು ಬಸವನಗುಡಿ ವರ್ತಕರ ಮಂಡಳಿ ಅಧ್ಯಕ್ಷ ಎಂ. ವೆಂಕಟೇಶ್‌ ಹೇಳಿದರು.

ಪ್ರತಿಭಟನೆಯಲ್ಲಿ ಬಸವನಗುಡಿ ನಿವಾಸಿಗಳ ಸಂಘದ ಅಧ್ಯಕ್ಷ ಗುರುಪ್ರಸಾದ್‌, ಆಮ್‌ ಆದ್ಮಿ ಪಕ್ಷದ ಮುಖಂಡ ಭಾಸ್ಕರ್‌ ರಾವ್‌, ಸುಧೀಂದ್ರ, ಕ್ರಿಕೆಟ್‌ ತರಬೇತುದಾರ ಮುರಳೀಧರ್‌ ಪಾಲ್ಗೊಂಡಿದ್ದರು.

ಐರೋಪ್ಯ ಶೈಲಿಯ ಆಧುನೀಕರಣವನ್ನು ಗಾಂಧಿ ಬಜಾರ್‌ ಪ್ರದೇಶದಂತಹ ಹಳೆಯ ಬೆಂಗಳೂರಿನಲ್ಲಿ ಕೈಗೊಳ್ಳಬಾರದು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

‘ಗಾಂಧಿ ಬಜಾರ್‌ವನ್ನು ಹಾಗೆ ಬಿಡಿ ಎಂದು ನಾವು ಪ್ರತಿಪಾದಿಸುತ್ತಿದ್ದೇವೆ. ಚರ್ಚ್‌ಸ್ಟ್ರೀಟ್‌ನಂತಹ ಪ್ರದೇಶಗಳಲ್ಲಿ ಆಧುನೀಕರಣದ ಕಾಮಗಾರಿ ಕೈಗೊಳ್ಳಬಹುದು. ಆದರೆ, ಬಸವನಗುಡಿ, ಮಲ್ಲೇಶ್ವರ ಮತ್ತು ಚಾಮರಾಜಪೇಟೆಗಳಲ್ಲಿ ಸರಿ ಹೊಂದುವುದಿಲ್ಲ. ಆಧುನೀಕರಣದಿಂದ ಹೊಸ ಸಂಚಾರ ಸಮಸ್ಯೆಗಳು ಹೆಚ್ಚಾಗುತ್ತವೆ.’ ಎಂದು ಇತಿಹಾಸಕಾರ ಸುರೇಶ್‌ ಮೂನ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT