ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ವಿದ್ಯಾರ್ಥಿ ಬೈಕ್‌ನಲ್ಲಿ ಗಾಂಜಾ ಇರಿಸಿ ₹7 ಲಕ್ಷಕ್ಕೆ ಬೇಡಿಕೆ

ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ, 6 ಮಂದಿ ಬಂಧನ
Published 7 ಜೂನ್ 2024, 23:46 IST
Last Updated 7 ಜೂನ್ 2024, 23:46 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಟೆಕ್‌ ವಿದ್ಯಾರ್ಥಿಯನ್ನು ಅಡ್ಡಗಟ್ಟಿ ಬೈಕ್‌ ಕಸಿದುಕೊಂಡು ಹಣ ಸುಲಿಗೆ ಮಾಡಿದ್ದ ರೌಡಿ ಸೇರಿ ಆರು ಆರೋಪಿಗಳನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಾಣಾವಾರದ ಗೋಪಿಚಂದ್‌, ಶರತ್, ಚೇತನ್‌ಗೌಡ, ಚೇತನ್‌ಕುಮಾರ್‌, ತೇಜಪ್ಪರೆಡ್ಡಿ, ಮಂಜುನಾಥ್‌ ಬಂಧಿತ ಆರೋಪಿಗಳು.

ಬಂಧಿತರಿಂದ ₹18,500 ನಗದು, ಆಟೊ, ಎರಡು ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಹಾಗೂ ಒಂದು ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಮತ್ತೊಬ್ಬ ರೌಡಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಗ್ರಾಮಾಂತರ ಜಿಲ್ಲೆಯ ರಾಜಾನುಕುಂಟೆ ಇಟಗಲ್‌ಪುರದಲ್ಲಿ ನೆಲೆಸಿದ್ದ ವಿದ್ಯಾರ್ಥಿ ತನ್ನ ಸ್ನೇಹಿತರ ಜತೆಗೆ, ಹೆಸರಘಟ್ಟದ ಡಾಬಾವೊಂದರಲ್ಲಿ ಊಟ ಮುಗಿಸಿ ಮನೆಗೆ ತೆರಳುತ್ತಿದ್ದರು. ಬೈಕ್‌ನಲ್ಲಿ ಬಂದ ದರೋಡೆಕೋರರು ವಿದ್ಯಾರ್ಥಿಯನ್ನು ಅಡ್ಡಗಟ್ಟಿ, ನಿನ್ನ ಸ್ನೇಹಿತರು ಬೈಕ್‌ಗೆ ಗುದ್ದಿ ಪರಾರಿಯಾಗಿದ್ದಾರೆ ಎಂದು ಬೆದರಿಕೆ ಒಡ್ಡಿದ್ದರು. ನಂತರ, ಸ್ಥಳಕ್ಕೆ ಮತ್ತಷ್ಟು ಮಂದಿಯನ್ನು ಕರೆಸಿಕೊಂಡು ದರೋಡೆಕೋರರು, ವಿದ್ಯಾರ್ಥಿಯ ಬೈಕ್‌ಗೆ ಗಾಂಜಾ ಇಟ್ಟು ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ಚಿನ್ನದ ಸರ ಹಾಗೂ ₹20 ಸಾವಿರ ನಗದು ಕಸಿದುಕೊಂಡಿದ್ದರು. ವಿಡಿಯೊ ಡಿಲಿಟ್‌ ಮಾಡಲು ₹7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘₹50 ಸಾವಿರ ಪಡೆದುಕೊಂಡು, ಉಳಿಕೆ ಹಣವನ್ನು ಎರಡು ದಿನಗಳ ಒಳಗಾಗಿ ಕೊಡುವಂತೆ ಸೂಚಿಸಿ ವಿದ್ಯಾರ್ಥಿಯನ್ನು ಬಿಟ್ಟು ಕಳುಹಿಸಿದ್ದರು. ಹಣ ನೀಡದಿದ್ದರೆ ಜೀವಂತವಾಗಿ ಬಿಡುವುದಿಲ್ಲ ಎಂದೂ ಬೆದರಿಸಿದ್ದರು. ಬಳಿಕ ವಿದ್ಯಾರ್ಥಿ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

‘ಪ್ರಕರಣ ಸಂಬಂಧ ರಚಿಸಿದ ವಿಶೇಷ ತಂಡವು, ಚಿಕ್ಕಸಂದ್ರದ ಎಜಿಬಿ ಲೇಔಟ್‌ ಬಳಿ ನಾಲ್ವರನ್ನು, ಹೆಸರಘಟ್ಟ ಮುಖ್ಯರಸ್ತೆಯ ಹುರುಳಿಚಿಕ್ಕನಹಳ್ಳಿಯಲ್ಲಿ ಇಬ್ಬರನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT