ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಭಾರತಿ ಆವರಣದಲ್ಲಿ ಕಸಕ್ಕೆ ಬೆಂಕಿ

ವಿ.ವಿಯಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪನೆಗೆ ಹಿಂದೇಟು l ಸ್ಯಾನಿಟರಿ ಪ್ಯಾಡ್‌ಗಳ ನಿರ್ವಹಣೆಗೆ ಇಲ್ಲದ ಯಂತ್ರ
Last Updated 27 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಎಲ್ಲೆಂದರೆ ಅಲ್ಲಿ ಕಸವನ್ನು ಸುಡಲಾಗುತ್ತಿದೆ. ತ್ಯಾಜ್ಯ ಸಂಗ್ರಹಕ್ಕಾಗಿ ನಿರ್ಮಿಸಿರುವ ತೊಟ್ಟಿಯಲ್ಲಿ ವಿಂಗಡಿಸಲಾಗದ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ.

ಜ್ಞಾನಭಾರತಿ ಆವರಣದಲ್ಲಿ ನಿತ್ಯ ನೂರಾರು ಪ್ರಾಧ್ಯಾಪಕರು ಬೋಧಿಸಲು, ಸಾವಿರಾರು ವಿದ್ಯಾರ್ಥಿಗಳು ಕಲಿಯಲು ದಿನಪೂರ್ತಿ ಈ ಪರಿಸರದಲ್ಲಿರುತ್ತಾರೆ.ಆದರೆ, ಕಸ ಹರಡಿರುವ ಬಗ್ಗೆ, ಎಲ್ಲೆಂದರಲ್ಲಿ ಚೆಲ್ಲಿರುವ ಬಗ್ಗೆ, ಬೆಂಕಿ ಹಚ್ಚುತ್ತಿರುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅಷ್ಟೇ ಅಲ್ಲ, ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆ ಅಳವಡಿಸಿಕೊಳ್ಳಲು ಬಿಬಿಎಂಪಿ ಒಂದೂವರೆ ವರ್ಷದಿಂದ ನೋಟಿಸ್‌ ನೀಡಿದ್ದರೂ ವಿವಿ ಆಡಳಿತ ವ್ಯವಸ್ಥೆಪ್ರತಿಕ್ರಿಯಿಸಿಲ್ಲ.

ವಿವಿ ಆವರಣದಲ್ಲಿ ಒಂಬತ್ತು ವಿದ್ಯಾರ್ಥಿನಿಲಯಗಳಿವೆ. ಇದಲ್ಲದೆ, ಆಡಳಿತ ಘಟಕ ಸೇರಿ ಬೋಧನೆಯ ಹಲವು ವಿಭಾಗಗಳಿವೆ. ಇಲ್ಲೆಲ್ಲ ಸಾಕಷ್ಟು ತ್ಯಾಜ್ಯ ಸಂಗ್ರಹಣೆಯಾಗುತ್ತದೆ. ಇದನ್ನು ವಿಂಗಡಣೆ ಮಾಡುತ್ತಿಲ್ಲ. ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ನಿರ್ವಹಣೆಗೆ ಒಂದುಯಂತ್ರವನ್ನೂಅಳವಡಿಸಿಲ್ಲ. ಹಲವುವಿಭಾಗಗಳಲ್ಲಿ ತ್ಯಾಜ್ಯವನ್ನು ಹಾಕಲು ಒಂದು ಬುಟ್ಟಿಯನ್ನೂ ಪ್ರಾಧ್ಯಾಪಕರೇ ಇಟ್ಟುಕೊಂಡಿಲ್ಲ. ಇನ್ನು ವಿದ್ಯಾರ್ಥಿಗಳಿಗೆ ಕಸ ವಿಂಗಡಣೆ, ಅದರ ನಿರ್ವಹಣೆ ಬಗ್ಗೆ ಹೇಳಿಕೊಡುವವರು ಯಾರು ಎಂಬ ಪ್ರಶ್ನೆ ಸ್ಥಳೀಯರದ್ದಾಗಿದೆ.

ಒಣತ್ಯಾಜ್ಯವನ್ನುಸಂಸ್ಕರಿಸಿ ಮರುಬಳಕೆಮಾಡಬೇಕು. ಹಸಿ ಕಸವನ್ನು ಗೊಬ್ಬರವನ್ನಾಗಿಸಬೇಕು. ಸರ್ಕಾರದ ಅದೇಶದಂತೆ ಇದಕ್ಕಾಗಿ ಘಟಕವನ್ನು ವಿವಿ ಆವರಣದಲ್ಲಿ ಸ್ಥಾಪಿಸಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರ, ಪರಿಸರ ಇಲಾಖೆಯ ಆದೇಶಗಳನ್ನು ಉಲ್ಲೇಖಿಸಿ ವಿವಿ ಕುಲಸಚಿವರಿಗೆ 2021ರ ಏಪ್ರಿಲ್‌ನಿಂದ 2022ರ ಸೆ.9ರವರೆಗೆ ಹಲವು ನೋಟಿಸ್‌ಗಳನ್ನು ಬಿಬಿಎಂಪಿ ನೀಡಿದೆ. ಆದರೂ ವಿವಿ ಕುಲಸಚಿವರು ಪ್ರತಿಕ್ರಿಯಿಸಿಲ್ಲ.

‘ಬೆಂಗಳೂರಿನಲ್ಲಿ ತ್ಯಾಜ್ಯ ವಿಂಗಡಣೆ, ಸಂಸ್ಕರಣೆ, ರಾಜಕಾಲುವೆ ನಿರ್ವಹಣೆ ಸೇರಿ ಹಲವು ನಾಗರಿಕ ಸೌಲಭ್ಯಗಳ ಅಭಿವೃದ್ಧಿಗೆ ಬೆಂಗಳೂರು ವಿಶ್ವವಿದ್ಯಾಲಯದ ಹಲವು ಅಧ್ಯಾಪಕರು ಸಮಿತಿಗಳಲ್ಲಿ ಸಲಹೆ ನೀಡುತ್ತಾರೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ
ಭಾಷಣ ಮಾಡುತ್ತಾರೆ. ಆದರೆ, ವಿವಿ ಆವರಣವೇ ಕಸಮಯವಾಗಿದೆ. ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಹತ್ತಾರು ಪದವಿ, ಡಾಕ್ಟರೇಟ್‌ ಪಡೆದರೇನು ಪ್ರಯೋಜನ? ವಿದ್ಯಾರ್ಥಿಗಳಿಗೆ ಮಾದರಿ ಶಿಕ್ಷಣ ನೀಡಬೇಕು. ವಿವಿ ಆವರಣದಲ್ಲಿ ಅದನ್ನು ಪಾಲಿಸಬೇಕು’ ಎಂದು ವಾಯುವಿಹಾರಿಗಳ ಸಂಘದ ಸದಸ್ಯರು ಆಗ್ರಹಿಸಿದರು.

ದಂಡ: ‘ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ ಸಂಸ್ಥೆಗಳಲ್ಲಿ ಸಂಸ್ಕರಣೆ ಘಟಕ ಸ್ಥಾಪಿಸಬೇಕು ಎಂಬ ಕಾನೂನು ಇದೆ. ಈ ಬಗ್ಗೆ ಸರ್ಕಾರದ ಆದೇಶದಂತೆ ಬೆಂಗಳೂರು ವಿವಿಗೆ ನೋಟಿಸ್‌ ನೀಡಿದ್ದೇವೆ. ಮುಖ್ಯ ಆಯುಕ್ತರೂ ನೋಟಿಸ್‌ ನೀಡಿದ್ದಾರೆ. ಅವರು ಏನೂ ಕ್ರಮ ಕೈಗೊಂಡಿಲ್ಲ. ಕಾನೂನು ಪ್ರಕಾರ ಮುಂದುವರಿಯಲಾಗುತ್ತದೆ. ಆವರಣದಲ್ಲಿ ಕಸಕ್ಕೆ ಬೆಂಕಿ ಹಚ್ಚಿರುವುದು ಗಮನಕ್ಕೆ ಬಂದಿದೆ. ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತ ನಾಗರಾಜ್‌ ತಿಳಿಸಿದರು.

‘ಅಜ್ಞಾನ ಭಾರತಿ’ ಎನ್ನುತ್ತೇವೆ...

‘ವಿದ್ಯಾರ್ಥಿನಿಲಯಗಳ ಬಳಿ ಕಸ ಚೆಲ್ಲುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ವಿದ್ಯಾರ್ಥಿಗಳಿಗೆ ತ್ಯಾಜ್ಯದ ಅರಿವು ಇಲ್ಲ. ಪ್ರಾಧ್ಯಾಪಕರೂ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಮದ್ಯದ ಬಾಟಲಿಗಳು, ಅದರ ಪ್ಯಾಕೆಟ್‌ಗಳು ಎಲ್ಲವೂ ಇಲ್ಲಿವೆ. ಅಲ್ಲಲ್ಲೇ ಬೆಂಕಿ ಹಚ್ಚುತ್ತಿದ್ದಾರೆ. ಈ ಆವರಣದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವಿಂಗಡಿಸುತ್ತಿಲ್ಲ. ಸಂಸ್ಕರಣೆ ಮಾಡುತ್ತಿಲ್ಲ. ತ್ಯಾಜ್ಯ ಎನ್ನುವುದು ಯಾವುದೂ ಇಲ್ಲ. ನಮ್ಮ ತಲೆಯಲ್ಲಿ ಇರುವ ತ್ಯಾಜ್ಯವನ್ನು ಹೊರಹಾಕಬೇಕು. ಮಕ್ಕಳಿಗೆ ಇವರು ಏನು ಜ್ಞಾನ ನೀಡುತ್ತಿದ್ದಾರೆ, ಕಸದ ಆವರಣದಲ್ಲಿ ಯಾವ ರೀತಿಯ ಶಿಕ್ಷಣವನ್ನು ಸಿಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಇದನ್ನು ‘ಅಜ್ಞಾನ ಭಾರತಿ’ ಎಂದೇ ನಾವು ಕರೆಯುತ್ತೇವೆ. ಅಷ್ಟು ಅವ್ಯವಸ್ಥೆ ಇಲ್ಲಿದೆ. ಕಸ ಇದೆ ಎಂದು ಚಿತ್ರ ಕಳುಹಿಸಿದರೆ ಬೆಂಕಿ ಹಚ್ಚಿ ಸುಟ್ಟು ಅದರ ಫೋಟೊ ಕಳುಹಿಸುತ್ತಾರೆ’ ಎಂದು ಜ್ಞಾನಭಾರತಿ ವಾಯುವಿಹಾರಿಗಳ ಸಂಘದ ಕಾರ್ಯದರ್ಶಿ ಗೌಡಯ್ಯ ಆಕ್ರೋಶ ವ್ಯಕ್ತಪಡಿಸಿದರು.

****

ಬೋಧನೆಗಷ್ಟೇ ಸೀಮಿತ

‘ವಿವಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಸ್ನಾತಕೋತ್ತರ ಪದವಿ ಕೋರ್ಸ್‌ ಇದೆ. ಆವರಣವನ್ನು ಕಸಮಯವಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಏನು ಪಾಠ ಮಾಡುತ್ತಾರೆ? ಆವರಣದಲ್ಲೇ ಒಂದು ಘಟಕ ಸ್ಥಾಪಿಸಿ, ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಿ, ಎಲ್ಲವೂ ಸಾಧ್ಯ ಎಂಬುದನ್ನು ಮಾದರಿಯಾಗಿ ಎಲ್ಲರಿಗೂ ತೋರಿಸಬಹುದು ಅಲ್ಲವೇ? ಪುಸ್ತಕದಲ್ಲಿ ಮಾತ್ರ ಓದಿ, ಪರೀಕ್ಷೆಯಲ್ಲಿ ಅದನ್ನು ಬರೆದು, ಪದವಿ ಪಡೆಯಿರಿ ಎಂಬುದಕ್ಕೆ ಸೀಮಿತವಾದರೆ, ಆ ಪದವಿ ಪ್ರಯೋಜನಕ್ಕೆ ಬರುವುದಿಲ್ಲ. ಸ್ವಚ್ಛತೆ ಮನೆ, ಶಾಲೆಯಲ್ಲಿ ಮೊದಲು ಆರಂಭವಾಗಬೇಕು. ನನ್ನ ಕಸ ನನ್ನ ಜವಾಬ್ದಾರಿ ಎಂಬ ಅರಿವು ಪ್ರತಿಯೊಬ್ಬನಲ್ಲಿ ಬರಬೇಕು‘ ಎಂದು ಉಸಿರು ಫೌಂಡೇಷನ್ಶೋಭಾ ಭಟ್‌ ಅಭಿಪ್ರಾಯಪಟ್ಟರು.

‘ಚರ್ಚಿಸಿ ಕ್ರಮ’

‘ತ್ಯಾಜ್ಯ ಸಂಸ್ಕರಣೆ ಘಟಕದ ಸಂಬಂಧ ಬಿಬಿಎಂಪಿ ನೋಟಿಸ್‌ ಕೊಟ್ಟಿರುವುದು ನಿಜ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಆಗಿಲ್ಲ. ಕುಲಪತಿಯವರೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಆವರಣದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿಲ್ಲ. ಬಿಬಿಎಂಪಿಯವರು ಒಂದು ಗಾಡಿ ಕೊಟ್ದಿದ್ದರು. ಇನ್ನೊಂದು ಕೊಡಿ ಎಂದು ಕೇಳಿದ್ದೇವೆ. ಸಾರ್ವಜನಿಕ ರಸ್ತೆಯಲ್ಲಿ ಸಂಗ್ರಹವಾಗುವ ಕಸಕ್ಕೆ ನಾವು ಜವಾಬ್ದಾರಿ ಅಲ್ಲ’ ಎಂದು ಬೆಂಗಳೂರು ವಿವಿ ಕುಲಸಚಿವ ಕೊಟ್ರೇಶ್‌ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT