ಮಂಗಳವಾರ, ಮೇ 17, 2022
25 °C
‘ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021' ಜಾಗೃತಿಗಾಗಿ ಜಾಥಾ

‘ಕಸ ವಿಂಗಡಣೆ ಪ್ರಮಾಣ ಶೇ 40ರಷ್ಟಕ್ಕೆ ಹೆಚ್ಚಳ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಮನೆಯಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಪ್ರಮಾಣ ಶೇ 40ಕ್ಕೆ ಹೆಚ್ಚಳವಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್‌ ಹೇಳಿದರು.

ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ರ ಬಗ್ಗೆ ಬಿಬಿಎಂಪಿ ವ್ಯಾಪ್ತಿಯ ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಲಾಲ್‌ಬಾಗ್‌ ಪರಿಸರದಲ್ಲಿ ಗುರುವಾರ ಏರ್ಪಡಿಸಿದ್ದ ‘ಸ್ಬಚ್ಛತಾ ಆಂದೋಲನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘2020ರ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಬೆಂಗಳೂರು 214ನೇ‌ ಸ್ಥಾನ ಪಡೆದಿತ್ತು. ಈ ಬಾರಿಯಾದರೂ ಬೆಂಗಳೂರು ನಗರ ಉತ್ತಮ ಶ್ರೇಯಾಂಕ ಪಡೆಯಬೇಕು ಎಂಬ ಕಾರಣಕ್ಕೆ ಬಿಬಿಎಂಪಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಇದರಿಂದಾಗಿ ಸಾರ್ವಜನಿಕ ಶೌಚಾಲಯ ಬಳಕೆ ಬಗ್ಗೆಯೂ ಜನರಲ್ಲಿ ಅರಿವು ಹೆಚ್ಚಾಗಿದೆ. ನಗರವನ್ನು ಸ್ವಚ್ಛವಾಗಿಡಲು 18 ಸಾವಿರ ಪೌರಕಾರ್ಮಿಕರು, 8 ಸಾವಿರ ಚಾಲಕರು ಹಾಗೂ ಸಹಾಯಕರು ನಿತ್ಯ ಬೆಳಗ್ಗೆ 6.30 ರಿಂದ ಮಧ್ಯಾಹ್ನ 1.30 ಗಂಟೆವರೆಗೆ ಬೆವರು ಸುರಿಸುತ್ತಾರೆ. ಸ್ವಚ್ಛತೆ ಕಾಪಾಡಲು ಅವರೊಂದಿಗೆ ಸಹಕರಿಸುವುದು ಎಲ್ಲರ ಜವಾಬ್ದಾರಿ’ ಎಂದರು. 

‘ಕೇಂದ್ರ  ಸರ್ಕಾರ ನೇಮಿಸಿರುವ ವೀಕ್ಷಕರು ಇದೇ 15 ರಿಂದ ಎಪ್ರಿಲ್ ನಡುವೆ ಒಳಗೆ ನಗರ ಎಷ್ಟು ಸ್ವಚ್ಛವಾಗಿದೆ ಎಂಬುದನ್ನು ತಪಾಸಣೆ ನಡೆಸಲಿದ್ದಾರೆ. ಎಲ್ಲಾ ನಾಗರಿಕರು ಕಸವನ್ನು ಪಾಲಿಕೆಯ ವಾಹನಗಳಿಗೇ ಕೊಡಿ. ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯಲ್ಲಿ ನ್ಯೂನತೆಗಳಿದ್ದರೆ, ಪಾಲಿಕೆಯ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಬಹುದು’ ಎಂದರು.

‘ಪ್ರತಿಯೊಂದು ವಾರ್ಡ್‌ಗೆ ಹಾಗೂ ಬ್ಲಾಕ್‌ಗೆ ನಾಗರಿಕ ಸ್ವಯಂಸೇವಕರನ್ನು ಶೀಘ್ರವೇ ನೇಮಿಸಲಾಗುತ್ತದೆ. ವಾರ್ಡ್‌ನ ಸ್ವಚ್ಛತೆ ಬಗ್ಗೆ ಅವರಿಂದಲೂ ಪ್ರತಿಕ್ರಿಯೆ ಪಡೆಯಲಾಗುತ್ತದೆ’ ಎಂದರು. 

‘ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021’ರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಂಬಂಧ ಪೌರಕಾರ್ಮಿಕರು ಲಾಲ್‌ಬಾಗ್ ಪರಿಸರದ ರಸ್ತೆಗಳಲ್ಲಿ ಜಾಗೃತಿ ಜಾಥಾವನ್ನು ಗುರುವಾರ ನಡೆಸಿದರು

‘ಸ್ವಚ್ಛ ಸರ್ವೇಕ್ಷಣ್‌–ನೀವೂ ಪ್ರತಿಕ್ರಿಯಿಸಿ’b

ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಬಗ್ಗೆ  ದೇಶದ ಬೇರೆ ಬೇರೆ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾಗರಿಕರು ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ನಾಗರಿಕರ ಪ್ರತಿಕ್ರಿಯೆ ತೀರಾ ಕಡಿಮೆ ಇದೆ. ನಗರದ ಜನರು ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ನೀಡಬೇಕು.  ಈ ಅಭಿಯಾನದ ವೆಬ್‌ಸೈಟ್‌ನ ಕೊಂಡಿಯನ್ನು ಒತ್ತಿ, ಅಲ್ಲಿರುವ ಹತ್ತು ಪ್ರಶ್ನೆಗಳಿಗೆ ಉತ್ತರಿಸಿದ ಪಾಲಿಕೆಗೆ ಉತ್ತಮ ಅಂಕ ಸಿಗಲಿದೆ ಎಂದು ರಂದೀಪ್‌ ತಿಳಿಸಿದರು.

ಪ್ರತಿಕ್ರಿಯಿಸಲು ಕೊಂಡಿ:  https://swachhsurvekshan2021.org/CitizenFeedback%2c

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು