ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದ ಅವಧಿ ಹೆಚ್ಚಳ: ಉದ್ಯೋಗ ತ್ಯಜಿಸಲು ಚಿಂತನೆ

ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ ಸಂಸ್ಥೆಯ ಸಮೀಕ್ಷೆ
Last Updated 24 ಮೇ 2020, 18:52 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು ವಾರಕ್ಕೆ 48 ಗಂಟೆಯಿಂದ 60 ಗಂಟೆಗೆ ಹೆಚ್ಚಿಸಿರುವುದರಿಂದ ಉದ್ಯೋಗ ತ್ಯಜಿಸಲು ಶೇ 65ರಷ್ಟು ಕಾರ್ಮಿಕರು ಆಲೋಚಿಸಿದ್ದಾರೆ!

ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ ಮತ್ತು ಆಲ್ಟರ್‌ನೇಟಿವ್ ಲಾ ಫೋರಂ ಸಂಘಟನೆಗಳು ನಡೆಸಿರುವ ಸಮೀಕ್ಷೆಯಲ್ಲಿ ಕಾರ್ಮಿಕರು ಈ ರೀತಿಯ ಅಭಿಪ್ರಾಯ ಹೇಳಿಕೊಂಡಿದ್ದಾರೆ.

‘ಬೆಂಗಳೂರು, ರಾಮನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಯ 82 ಕಾರ್ಖಾನೆಗಳ ಕಾರ್ಮಿಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರು ಅನುಭವಿಸಿದ ಭಾವನಾತ್ಮಕ ಮತ್ತು ವಾಸ್ತವ ಒತ್ತಡಗಳು, ಕಾರ್ಖಾನೆ ಮಾಲೀಕರು ಮತ್ತು ಸರ್ಕಾರ ನೀಡಿದ ಸ್ಪಂದನೆ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ’ ಎಂದುಸಮೀಕ್ಷಾ ವರದಿ ತಿಳಿಸಿದೆ.

ಸಮೀಕ್ಷೆ ಪ್ರಕಾರ, ಹೆಚ್ಚುವರಿ ವೇತನ ನೀಡದಿದ್ದರೆ ಹೆಚ್ಚುವರಿ ಅವಧಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಶೇ 66ರಷ್ಟು ಕಾರ್ಮಿಕರು ಹೇಳಿದ್ದರೆ, ಅವಧಿ ಹೆಚ್ಚಳ ಮಾಡಿದರೆ ಕೆಲಸಕ್ಕೇ ಹೋಗುವುದಿಲ್ಲ ಎಂದು ಶೇ 65ರಷ್ಟು ಕಾರ್ಮಿಕರು ಹೇಳಿದ್ದಾರೆ.

ಬಹಳಷ್ಟು ಕಾರ್ಮಿಕರಿಗೆ ಏಪ್ರಿಲ್ ತಿಂಗಳ ವೇತನ ದೊರೆತಿಲ್ಲ. ಶೇ 17ರಷ್ಟು ಕಾರ್ಮಿಕರಿಗೆ ಶೇ 50ರಷ್ಟು ವೇತನ ಸಿಕ್ಕಿದೆ. ಮೇ ತಿಂಗಳಲ್ಲಿ ಕಾರ್ಖಾನೆ ಆರಂಭವಾದಾಗ ಕೆಲಸಕ್ಕೆ ಹಾಜರಾದ ಕೆಲವರಿಗೆ ಪೂರ್ತಿ, ಮತ್ತೆ ಕೆಲವರಿಗೆ ಅರ್ಧ ಸಂಬಳ ಸಿಕ್ಕಿದೆ.

‘ಲಾಕ್‌ಡೌನ್ ಸಂದರ್ಭದಲ್ಲಿ ಊಟ, ದಿನಸಿ, ಮುಂಗಡ ಹಣ ಅಥವಾ ಸಾಲವನ್ನು ಯಾವ ಕಾರ್ಖಾನೆ ಮಾಲೀಕರು ನೀಡಿಲ್ಲ ಎಂಬುದನ್ನು ಶೇ 96ರಷ್ಟು ಕಾರ್ಮಿಕರು ಹೇಳಿದ್ದಾರೆ. ಸರ್ಕಾರ ಕೂಡ ನೆರವಿಗೆ ಬರಲಿಲ್ಲ ಎಂದು ಶೇ 60ರಷ್ಟು ಕಾರ್ಮಿಕರು ತಿಳಿಸಿದ್ದಾರೆ. ಶೇ 45ರಷ್ಟು ಕಾರ್ಮಿಕರು ನೆರೆ–ಹೊರೆಯವರು ಮತ್ತು ಸಂಬಂಧಿಕರಿಂದ ಸಾಲ ಪಡೆದು ಜೀವನ ನಡೆಸಿದ್ದಾರೆ. ಮನೆ ಬಾಡಿಗೆಯನ್ನೇ ಪಾವತಿಸಿಲ್ಲ ಎಂದು ಶೇ 68ರಷ್ಟು ಕಾರ್ಮಿಕರು ತಿಳಿಸಿದ್ದಾರೆ’ ಎಂದು ಸಮೀಕ್ಷೆ ಹೇಳಿದೆ.

‘ಲಾಕ್‌ಡೌನ್ ನಡುವೆಯೂ ಕಾರ್ಖಾನೆಗಳನ್ನು ಆರಂಭಿಸಲು ಅನುಮತಿ ನೀಡಿದ ಸರ್ಕಾರ, ಕಾರ್ಮಿಕರು ಕಾರ್ಖಾನೆಗೆ ಹೋಗಿ ಬರಲು ಯಾವುದೇ ಸಾರಿಗೆ ವ್ಯವಸ್ಥೆ ಮಾಡಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಕೆಲವರು ಕೆಲಸಕ್ಕೆ ಹಾಜರಾಗಲು ಆಗಿಲ್ಲ. ಕೆಲಸದಿಂದ ಹೊರ ಹಾಕುವ ಭಯ ಅವರನ್ನು ಕಾಡುತ್ತಿದೆ’ ಎಂದೂ ಸಮೀಕ್ಷೆ ಆತಂಕ ವ್ಯಕ್ತಪಡಿಸಿದೆ.

ಶಿಫಾರಸುಗಳು

* ವೇತನ ಸಮಸ್ಯೆ ಮತ್ತು ಕೆಲಸದ ಅವಧಿ ಬಗ್ಗೆ ಅಹವಾಲು ಸಲ್ಲಿಸಲು ಸರ್ಕಾರ ತಕ್ಷಣವೇ ಸಹಾಯವಾಣಿ ತೆರೆಯಬೇಕು.

* ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿದ್ದ ಕಾರ್ಮಿಕರಿಗೆ ಸಂಪೂರ್ಣ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು.

* ಕೆಲಸ ನಷ್ಟವಾಗಿದ್ದರೆ ಅಂತವರಿಗೆ ಆರೋಗ್ಯ ವಿಮೆ, ಆಹಾರ ವಿತರಣೆಯಂತಹ ಸಾಮಾಜಿಕ ಭದ್ರತೆ ಒದಗಿಸಬೇಕು.

* ಭಾನುವಾರ ಸೇರಿ ರಜಾ ದಿನಗಳಲ್ಲಿ ಕೆಲಸ ಮಾಡಲು ಮಾಲೀಕರು ಒತ್ತಡ ಹೇರದಂತೆ ನೋಡಿಕೊಳ್ಳಬೇಕು.

* ಹೆಚ್ಚುವರಿ ಕೆಲಸದ ಅವಧಿಯ ವೇತನ ಪಾವತಿಸಬೇಕೆಂದು ಮಾಲೀಕರಿಗೆ ಸರ್ಕಾರ ನಿರ್ದೇಶನ ನೀಡಬೇಕು.

* ಕಾರ್ಖಾನೆ ಕಾಯ್ದೆಯ ಕೆಲ ಸೆಕ್ಷನ್‌ಗಳಿಗೆ ನೀಡಿರುವ ವಿನಾಯಿತಿ ಆದೇಶ ಹಿಂದಕ್ಕೆ ಪಡೆಯಬೇಕು.

* ಕಾರ್ಮಿಕರ ಮಕ್ಕಳ ಶಾಲಾ ಶುಲ್ಕ ಮನ್ನಾ ಮಾಡಬೇಕು.

* ಕಾರ್ಮಿಕರು ಮತ್ತುವರ ಕುಟುಂಬದವರಿಗಾಗಿ ಆರೋಗ್ಯ ಶಿಬಿರ ಆಯೋಜಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT