ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ವಿಜ್ಞಾನಿ ಪ್ರತಿಮಾ ಕೊಲೆ: ನ್ಯಾಯಾಲಯಕ್ಕೆ 600 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

ಭೂ ವಿಜ್ಞಾನಿ ಕೆ.ಎಸ್‌.ಪ್ರತಿಮಾ ಕೊಲೆ ಪ್ರಕರಣ
Published 4 ಫೆಬ್ರುವರಿ 2024, 23:30 IST
Last Updated 5 ಫೆಬ್ರುವರಿ 2024, 2:27 IST
ಅಕ್ಷರ ಗಾತ್ರ

ಬೆಂಗಳೂರು: ಭೂ ವಿಜ್ಞಾನಿ ಕೆ.ಎಸ್.ಪ್ರತಿಮಾ (43) ಅವರ ಕೊಲೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, ಆರೋಪಿ ಕಿರಣ್‌ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ದೊಡ್ಡಕಲ್ಲಸಂದ್ರದ ಕುವೆಂಪು ನಗರದ ಪ್ರತಿಮಾ ಅವರ ನಿವಾಸಕ್ಕೆ ನ.4ರಂದು ರಾತ್ರಿ ನುಗ್ಗಿದ್ದ ಆರೋಪಿ, ಕೊಲೆ ಮಾಡಿ ಪರಾರಿಯಾಗಿದ್ದ. ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್‌ಸ್ಪೆಕ್ಟರ್‌ ಎನ್‌.ಜಗದೀಶ್‌ ಅವರು ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದರು. ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ನಗರದ 2ನೇ ಎಸಿಎಂಎಂ ನ್ಯಾಯಾಲಯಕ್ಕೆ 600 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ.

ಆರೋಪಿ ಕಿರಣ್‌ ನೀಡಿದ್ದ ಸ್ವಇಚ್ಛಾ ಹೇಳಿಕೆ, 70 ಮಂದಿ ಸಾಕ್ಷಿದಾರರ ಹೇಳಿಕೆ, ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಾವಳಿ, ಸಾಂದರ್ಭಿಕ ಸಾಕ್ಷ್ಯ, ಡಿಜಿಟಲ್‌ ಸಾಕ್ಷ್ಯಾಧಾರ ಸಹಿತ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಿರಣ್‌ಗೆ ಅಪರಾಧ ಹಿನ್ನೆಲೆಯಿತ್ತು. ಇದರ ಮಾಹಿತಿ ತಿಳಿದಿದ್ದ ಪ್ರತಿಮಾ ಅವರು ಕೆಲಸದಿಂದ ತೆಗೆದುಹಾಕಿದ್ದರು. ಕೆಲಸಕ್ಕೆ ತೆಗೆದುಕೊಳ್ಳುವಂತೆ ಆರೋಪಿ ಪದೇ ಪದೇ ಮನವಿ ಮಾಡುತ್ತಿದ್ದ. ಅದನ್ನು ಪ್ರತಿಮಾ ನಿರಾಕರಿಸಿದ್ದರು. ಇದೇ ಕಾರಣಕ್ಕೆ ಆರೋಪಿಯು ಪ್ರತಿಮಾ ಅವರನ್ನು ಕೊಂದಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ನ.4ರಂದು ರಾತ್ರಿ 8.30ರ ಸುಮಾರಿಗೆ ಪ್ರತಿಮಾ ಮನೆಗೆ ತೆರಳಿದ್ದ ಆರೋಪಿ ಮಹಡಿಯಲ್ಲಿ ಅವಿತು ಕುಳಿತಿದ್ದ. ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಪ್ರತಿಮಾ ಅವರನ್ನು ಹಿಂಬಾಲಿಸಿದ್ದ ಆರೋಪಿ, ಅವರ ಬಾಯಿ ಮುಚ್ಚಿ ವೇಲ್‌ನಿಂದ ಕುತ್ತಿಗೆಯನ್ನು ಬಿಗಿದಿದ್ದ. ನಂತರ ಕತ್ತು ಕೊಯ್ದು ಕೊಲೆ ಮಾಡಿದ್ದ. ಕೈಗಳಲ್ಲಿದ್ದ ಚಿನ್ನದ ಬಳೆ, ಚಿನ್ನದ ಸರ, ಕಬೋರ್ಡ್‌ನಲ್ಲಿದ್ದ ₹5 ಲಕ್ಷ ನಗದು ದೋಚಿ ಪರಾರಿಯಾಗಿದ್ದ. ಆರೋಪಿ ಕೃತ್ಯ ನಡೆಸಲು ಎಂಟು ನಿಮಿಷ ತೆಗೆದುಕೊಂಡಿದ್ದ. ಅದಾದ ಮೇಲೆ ಇಬ್ಬರು ಸ್ನೇಹಿತರ ಜೊತೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ. ಅಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು’ ಎಂದು ಉಲ್ಲೇಖಿಸಲಾಗಿದೆ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT