ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹10 ಲಕ್ಷ ಕೋಟಿ ಸೆಳೆದ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ

ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ–ಮುರುಗೇಶ ನಿರಾಣಿ
Last Updated 4 ನವೆಂಬರ್ 2022, 20:56 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ–2022 ಒಟ್ಟು ₹10 ಲಕ್ಷ ಕೋಟಿ ಬಂಡವಾಳ ಸೆಳೆ
ಯುವಲ್ಲಿ ಯಶಸ್ವಿಯಾಗಿದೆ. ಇದರಿಂದ ರಾಜ್ಯದಲ್ಲಿ ಮುಂಬರುವ ವರ್ಷಗಳಲ್ಲಿ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.

‘ಇನ್ವೆಸ್ಟ್ ಕರ್ನಾಟಕ– ಬಿಲ್ಡ್ ಫಾರ್‌ ದ ವರ್ಲ್ಡ್’ ಆಶಯದಡಿ ಮೂರು ದಿನ ನಡೆದ ಸಮಾವೇಶದ ಕೊನೆಯ ದಿನವಾದ ಶುಕ್ರವಾರ ಸಚಿವರು ಈ ಮಾಹಿತಿ ನೀಡಿದರು.

ಈ ಬಾರಿಯ ಹೂಡಿಕೆ ಒಪ್ಪಂದಗಳಲ್ಲಿ ಅತಿ ಹೆಚ್ಚು ಒಪ್ಪಂದ ಇಂಧನ ಕ್ಷೇತ್ರದಲ್ಲಿ ಆಗಿದೆ. ಶೇ 70 ರಷ್ಟು ಹೂಡಿಕೆಗಳು ಬೆಂಗಳೂರು ಬಿಟ್ಟು ರಾಜ್ಯದ ಇತರ ಪ್ರಮುಖ ನಗರಗಳಲ್ಲಿ ಆಗಲಿವೆ. ಹೀಗಾಗಿ ರಾಜ್ಯದ ಇತರ ನಗರಗಳಲ್ಲೂ ಕೈಗಾರಿಕಾ ಬೆಳವಣಿಗೆಯು ತ್ವರಿತಗತಿಯಲ್ಲಿ ಆಗಲಿದೆ ಎಂಬ ವಿಶ್ವಾಸವನ್ನು ನಿರಾಣಿ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಅವರು ತಮ್ಮ ಸಮಾರೋಪ ಭಾಷಣದಲ್ಲಿ, ₹9.8 ಲಕ್ಷ ಕೋಟಿ ಹೂಡಿಕೆ ಬಂದಿದೆ
ಎಂದು ಹೇಳಿದರು.

‘ನಮ್ಮ ನಿರೀಕ್ಷೆಗೂ ಮೀರಿ ಹೂಡಿಕೆ ಒಪ್ಪಂದಗಳು ಆಗಿವೆ. ಸರ್ಕಾರವು ಉದ್ಯಮಿಗಳ ನಿರೀಕ್ಷೆಯನ್ನು ಹುಸಿ
ಗೊಳಿಸುವುದಿಲ್ಲ. ಅವರು ಬಯಸುವ ಮೂಲಸೌಕರ್ಯಗಳನ್ನು ಬದ್ಧತೆಯಿಂದಲೇ ಕಲ್ಪಿಸಲಿದೆ. ಇಲ್ಲಿ ಮೂಲಸೌಕರ್ಯ ಸರಿ ಇಲ್ಲ ಎಂದು ಟೀಕಿಸುವವರಿಗೆ ಒಂದು ಮಾತು ಹೇಳುತ್ತೇನೆ. ಸಾವಿರಾರು ಕೋಟಿ ಬಂಡವಾಳ ಹೂಡುವವರು ರಾಜ್ಯ
ದಲ್ಲಿ ಮೂಲಸೌಕರ್ಯ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆಯೂ
ಹೋಂ ವರ್ಕ್‌ ಮಾಡಿಯೇ ಬರು
ತ್ತಾರೆ. ಕಣ್ಣು ಮುಚ್ಚಿ ಹೂಡಿಕೆ ಮಾಡುವುದಿಲ್ಲ. ಒಮ್ಮೆ ರಾಜ್ಯದಲ್ಲಿ ಹೂಡಿಕೆ ಮಾಡಿದ ಮೇಲೆ ವಾಪಸ್‌ ಹೋಗುವ ಬಗ್ಗೆ ಅವರು ಯೋಚಿಸುವುದಿಲ್ಲ’ ಎಂದು ಬೊಮ್ಮಾಯಿ ಹೇಳಿದರು.

‘ಬೆಂಗಳೂರು ಬಿಟ್ಟು, ಮಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡ, ಕಲಬುರಗಿ, ಬಳ್ಳಾರಿ, ತುಮಕೂರುಗಳಲ್ಲಿ ಉದ್ಯಮಗಳ ಸ್ಥಾಪನೆಗಾಗಿ ಸುಮಾರು 50 ಸಾವಿರ ಎಕರೆ ವಿಸ್ತೀರ್ಣದ ‘ಲ್ಯಾಂಡ್‌ ಬ್ಯಾಂಕ್‌’ ಇದೆ. ಇವು ರಾಷ್ಟ್ರೀಯ ಹೆದ್ದಾರಿಗಳಿಗೆ ನೇರ ಸಂಪರ್ಕ ಹೊಂದಿವೆ. ಉತ್ತಮ ಮೂಲಸೌಕರ್ಯಗಳನ್ನೂ ಹೊಂದಿವೆ. ಶಿವಮೊಗ್ಗ, ವಿಜಯಪುರ ಮತ್ತು ಕಾರವಾರಗಳಲ್ಲಿ ವಿಮಾನ ನಿಲ್ದಾಣಗಳು ಸ್ಥಾಪನೆ ಆಗಲಿವೆ’ ಎಂದರು.

‘ನಿಮ್ಮ (ಉದ್ಯಮಿಗಳು) ಸವಾಲುಗಳು ನಮ್ಮ (ಸರ್ಕಾರ) ಸವಾಲುಗಳೂ ಆಗಿವೆ. ನಿಮ್ಮ ಸಮಸ್ಯೆ ನಮ್ಮ ಸಮಸ್ಯೆಯೂ ಆಗಿದೆ ಎಂದು ಭಾವಿಸಿ, ತ್ವರಿತಗತಿಯಲ್ಲಿ ಅವುಗಳನ್ನು ಬಗೆಹರಿಸಲು ಕೆಲಸ ಮಾಡುತ್ತೇವೆ’ ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿ ಭರವಸೆ ನೀಡಿದರು.

‘ಹೊಸ ಹೂಡಿಕೆಗಳು ಎಷ್ಟಾಗಬಹುದು ಎಂಬುದು ಇನ್ನು ಮೂರು ತಿಂಗಳಲ್ಲಿ ಗೊತ್ತಾಗಲಿದೆ. ಈಗಾಗಲೇ ಶೇ 29 ರಷ್ಟು ಹೂಡಿಕೆ ನಿಶ್ಚಿತವಾಗಿದೆ. 3 ತಿಂಗಳಲ್ಲಿ ಬಂಡವಾಳ ಹೂಡಿಕೆಯ ಎಲ್ಲ ಒಪ್ಪಂದಗಳ ಅನುಷ್ಠಾನ ಪ್ರಕ್ರಿಯೆ ಪ್ರಾರಂಭವಾಗಬೇಕು. ಇದರಿಂದ ರಾಜ್ಯದ ಆರ್ಥಿಕ ಬೆಳವಣಿಗೆ ಮತ್ತೊಂದು ಸ್ತರಕ್ಕೆ ಏರಲಿದೆ. ಹೂಡಿಕೆದಾರರ ಸಮಾವೇಶದ ಬಳಿಕ ರಾಜ್ಯದಲ್ಲಿ ಉದ್ಯಮ ಕ್ಷೇತ್ರದ ಬೆಳವಣಿಗೆ 120 ಕಿ.ಮೀ ವೇಗದಲ್ಲಿ ಸಾಗಲಿದೆ. ದೇಶಕ್ಕೆ ಕೊಡುಗೆಯಾಗಿ ಒಂದು ಟ್ರಿಲಿಯನ್‌ ಆರ್ಥಿಕತೆ ನೀಡುವುದು ನಮ್ಮ ಸಂಕಲ್ಪ. ಇದಕ್ಕಾಗಿ ಯೋಜನೆ ರೂಪಿಸಿದ್ದೇವೆ’ ಎಂದು ಹೇಳಿದರು.

ಮುಂದಿನ ಜಾಗತಿಕ ಹೂಡಿಕೆದಾ
ರರ ಸಮಾವೇಶ 2025 ಜನವರಿಯಲ್ಲಿ ನಡೆಯಲಿದೆ ಎಂದು ಸಚಿವ ನಿರಾಣಿ ತಿಳಿಸಿದರು. ಇಂಧನ ಸಚಿವ ವಿ.ಸುನಿಲ್‌ ಕುಮಾರ್, ಕೇಂದ್ರ ಸಚಿವ ಭಗವಂತ ಖೂಬಾ, ಉದ್ಯಮಿಗಳಾದ ವಿನೀತ್‌ ಮಿತ್ತಲ್‌, ಉಲ್ಲಾಸ್‌ ಕಾಮತ್‌ ಅವರೂ ಮಾತನಾಡಿದರು.

ಜಲಜನಕ ಇಂಧನ:ಕೊಲ್ಲಿ ರಾಷ್ಟ್ರಗಳಿಗೆ ಸ್ಪರ್ಧೆ

‘ಜಲಜನಕ ಇಂಧನ (ಹೈಡ್ರೋಜನ್‌ ಫ್ಯೂಯೆಲ್) ತಯಾರಿಕೆ ಕ್ಷೇತ್ರದಲ್ಲಿ ಕರ್ನಾಟಕವು ಕೊಲ್ಲಿ ರಾಷ್ಟ್ರಗಳಿಗೆ ಸ್ಪರ್ಧೆ ನೀಡಲಿದ್ದು, ಆ ರಾಷ್ಟ್ರಗಳನ್ನು ಕರ್ನಾಟಕ ಹಿಂದಿಕ್ಕುವ ವಿಶ್ವಾಸವಿದೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಸಮಾರೋಪ ಭಾಷಣದಲ್ಲಿ ಅವರು, ‘ಹಸಿರು ಜಲಜನಕ ಇಂಧನ ಕ್ಷೇತ್ರದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಆಗಿದೆ. ನಮ್ಮ ದೇಶದಲ್ಲಿ ಕರ್ನಾಟಕದಲ್ಲಿ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಹೂಡಿಕೆ ಆಗುತ್ತಿದೆ. ಈ ತಂತ್ರಜ್ಞಾನವನ್ನು ಅವರಿಗಿಂತ ಮೊದಲೇ ಅಂದರೆ, ಫೆಬ್ರುವರಿ– ಮಾರ್ಚ್‌ ವೇಳೆಗೆ ನಾವು ಅಭಿವೃದ್ಧಿ ಪಡಿಸುತ್ತೇವೆ ಎಂಬ ವಿಶ್ವಾಸವಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಗಂಭೀರ ಹೂಡಿಕೆದಾರರು ಮುಂದೆ ಬರಬೇಕು’ ಎಂದರು.

ಜಲಜನಕ ಆಧಾರಿತ ಇಂಧನ ಕೋಶಗಳನ್ನು (ಸೆಲ್) ವಾಹನಗಳಲ್ಲಿ ಬಳಸುವುದರಿಂದ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಮಾಲಿನ್ಯವೂ ಆಗುವುದಿಲ್ಲ.

₹ 40 ಸಾವಿರ ಕೋಟಿ ಹೂಡಿಕೆ: ಕರ್ನಾಟಕದಲ್ಲಿ ಗ್ರೀನ್‌ ಹೈಡ್ರೋಜನ್‌ ಕ್ಷೇತ್ರದಲ್ಲಿ ₹40 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಅವಾಡ ಗ್ರೂಪ್‌ನ ಅಧ್ಯಕ್ಷ ವಿನೀತ್‌ ಮಿತ್ತಲ್‌ ತಿಳಿಸಿದರು.

‘ಜಲಜನಕ ಇಂಧನ ತಂತ್ರಜ್ಞಾನದಿಂದ ವಿಶೇಷವಾಗಿ ವಾಹನ
ಕ್ಷೇತ್ರದಲ್ಲಿ ಕ್ರಾಂತಿ ಆಗಲಿದೆ. ಕರ್ನಾಟಕ ಈ ಕ್ಷೇತ್ರದ ರಾಜಧಾನಿಯಾಗಲಿದೆ. 2026 ರಲ್ಲಿ ನಮ್ಮ ಉದ್ಯಮ ಕಾರ್ಯಾರಂಭ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಸಿರು ಇಂಧನ: ₹2 ಲಕ್ಷ ಕೋಟಿ ಹೂಡಿಕೆ

‘ಹಸಿರು ಇಂಧನ ಕ್ಷೇತ್ರದಲ್ಲಿ ಸುಮಾರು ₹2 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಒಪ್ಪಂದಗಳಾಗಿವೆ. 2030ರ ವೇಳೆಗೆ ದೇಶದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಶೇ 50 ರಷ್ಟು ಕರ್ನಾಟಕದಲ್ಲೇ ಉತ್ಪಾದನೆಯಾಗಲಿದೆ. ಈ ಮೂಲಕ ಕರ್ನಾಟಕ ಮೊದಲ ಸ್ಥಾನಕ್ಕೇರಲಿದೆ’ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಬೆಳವಣಿಗೆಗೆ ಪೂರಕವಾಗಿ ರಾಜ್ಯದಲ್ಲಿ ಹೈಬ್ರಿಡ್‌ ಪಾರ್ಕ್‌ ಸ್ಥಾಪಿಸಲಾಗುವುದು. ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನೂ ತಯಾರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT