ಗುರುವಾರ , ಡಿಸೆಂಬರ್ 5, 2019
26 °C

ಗೂಗಲ್‌ ಸರ್ಚ್‌: ₹83 ಸಾವಿರ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾವು ಕಾಯ್ದಿರಿಸಿದ್ದ ₹ 765 ಬೆಲೆಯ ಟಿಕೆಟ್ ರದ್ದು ಮಾಡಿ ಹಣ ವಾಪಸ್ ಪಡೆಯಲು ಮುಂದಾಗಿದ್ದ ಯುವತಿಯೊಬ್ಬರು, ₹ 83 ಸಾವಿರ ಕಳೆದುಕೊಂಡಿದ್ದಾರೆ.

ಸೈಬರ್ ಕ್ರೈಂ ಠಾಣೆಗೆ ದೂರು ನೀಡಿರುವ ಯುವತಿ, ‘ಮೇಕ್‌ ಮೈ ಟ್ರಿಪ್‌’ ಸಹಾಯವಾಣಿ ಸಿಬ್ಬಂದಿ ಹೆಸರಿನಲ್ಲಿ ಮಾತನಾಡಿದ್ದ ವಂಚಕರು, ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ’ ಎಂದು ದೂರಿದ್ದಾರೆ.

‘ಮೇಕ್ ಮೈ ಟ್ರಿಪ್‌ ಜಾಲತಾಣದಲ್ಲಿ ಇತ್ತೀಚೆಗೆ ಟಿಕೆಟ್ ಕಾಯ್ದಿರಿಸಿದ್ದೆ. ಅದನ್ನು ರದ್ದುಪಡಿಸಲು ಬಯಸಿ ಸಹಾಯವಾಣಿ ಸಂಪರ್ಕಿಸಲು ಗೂಗಲ್‌ನಲ್ಲಿ ಹುಡುಕಾಡಿದ್ದೆ. ಅಲ್ಲಿ ಸಿಕ್ಕ ನಂಬರ್‌ಗೆ ಕರೆ ಮಾಡಿ, ಟಿಕೆಟ್‌ ರದ್ದುಪಡಿಸುವಂತೆ ಹೇಳಿದ್ದೆ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

‘ಸಹಾಯವಾಣಿಯವರ ಸೋಗಿನಲ್ಲಿ ಮಾತನಾಡಿದ್ದ ವಂಚಕರು,  ಹಣ ವಾಪಸ್‌ ಕಳುಹಿಸುವುದಾಗಿ ಹೇಳಿ ನನ್ನ ಗೂಗಲ್ ಪೇ ವಾಲೆಟ್ ವಿವರ ತೆಗೆದುಕೊಂಡಿದ್ದರು. ಒನ್ ಟೈಂ ಪಾಸ್‌ವರ್ಡ್‌ (ಒಟಿಪಿ) ಸಹ ಪಡೆದಿದ್ದರು. ನಂತರ ಖಾತೆಯಲ್ಲಿದ್ದ ₹ 83 ಸಾವಿರ ವರ್ಗಾಯಿಸಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

ಸೈಬರ್ ಕ್ರೈಂ ಪೊಲೀಸರು, ‘ಗೂಗಲ್‌ನ ಜಾಲತಾಣದಲ್ಲಿರುವ ಹೆಸರಾಂತ ಕಂಪನಿಗಳ ಸಹಾಯವಾಣಿ ಸಂಖ್ಯೆಯನ್ನು ತಿದ್ದುತ್ತಿರುವ ವಂಚಕರು, ತಮ್ಮ ಸಂಖ್ಯೆಗಳನ್ನು ನಮೂದಿಸಿ ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು’ ಎಂದು ತಿಳಿಸಿದರು.  

ಕೆಲಸದ ಆಮಿಷ: ಶಿಕ್ಷಕಿಗೆ ವಂಚನೆ
ಬೆಂಗಳೂರು: ನಗರದ ಖಾಸಗಿ ಶಾಲಾ ಶಿಕ್ಷಕಿ ಪೂರ್ಣಿಮಾ ಎಂಬುವರಿಗೆ ಕೆಲಸದ ಆಮಿಷವೊಡ್ಡಿದ್ದ ವಂಚಕರು, ₹ 64 ಸಾವಿರ ಪಡೆದುಕೊಂಡು ವಂಚಿಸಿದ್ದಾರೆ.

ಆ ಸಂಬಂಧ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿರುವ ಪೂರ್ಣಿಮಾ, ‘ರೋಹಿತ್‌ ಹಾಗೂ ಆಲ್ಬರ್ಟ್‌ ಎಂಬುವರು, ಸಾತನೂರಿನಲ್ಲಿರುವ ‘ಡೆಲ್ಲಿ ಪಬ್ಲಿಕ್ ಶಾಲೆ’ ಹಾಗೂ ಯಲಹಂಕದಲ್ಲಿರುವ ಕೆನಡಿಯಾ ಶಾಲೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ’ ಎಂದು ದೂರಿದ್ದಾರೆ.

‘ನನ್ನ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರವನ್ನು ಕೆಲ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದೆ. ಅದನ್ನು ತಿಳಿದುಕೊಂಡ ಆರೋಪಿಗಳು ನನಗೆ ಕರೆ ಮಾಡಿ, ‘ಡೆಲ್ಲಿ ಪಬ್ಲಿಕ್ ಹಾಗೂ ಕೆನಡಿಯಾ ಶಾಲೆಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ನಿಮ್ಮ ಹೆಸರು ಸಂಭವನೀಯ ಆಯ್ಕೆ ಪಟ್ಟಿಯಲ್ಲಿ ಇದೆ’ ಎಂದು ಹೇಳಿದ್ದರು.

‘ನೋಂದಣಿ ಶುಲ್ಕವೆಂದು 64 ಸಾವಿರ ಪಡೆದಿದ್ದರು. ಆದರೆ ಸಂದರ್ಶನಕ್ಕೆ ಕರೆಯದೇ ಮೊಬೈಲ್ ಸ್ವಿಚ್ಡ್‌ಆಫ್‌ ಮಾಡಿಕೊಂಡು ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

ಖರೀದಿ ನೆಪದಲ್ಲಿ ವ್ಯಾಪಾರಿಗೆ ವಂಚನೆ
ಬೆಂಗಳೂರು: ಖರೀದಿ ನೆಪದಲ್ಲಿ ಪೀಠೋಪಕರಣ ವ್ಯಾಪಾರಿ ಸಿಖಾ ಜಲನ್ ಎಂಬುವರಿಗೆ ಕರೆ ಮಾಡಿದ್ದ ವಂಚಕ,‌ ₹ 20 ಸಾವಿರ ವರ್ಗಾಯಿ ಸಿಕೊಂಡು ವಂಚಿಸಿದ್ದಾನೆ.

ಸೈಬರ್ ಕ್ರೈಂ ಠಾಣೆಗೆ ದೂರು ನೀಡಿರುವ ಸಿಖಾ, ‘ಉತ್ತರ ಪ್ರದೇಶದಿಂದ ಕರೆ ಮಾಡಿದ್ದ ವಂಚಕ, ‘ನನಗೆ ಪೀಠೋಪಕರಣ ಬೇಕಿದೆ. ₹ 15 ಸಾವಿರ ನಿಮ್ಮ ಖಾತೆಗೆ ಹಾಕುತ್ತೇನೆ’ ಎಂದಿದ್ದ. ಬ್ಯಾಂಕ್ ಖಾತೆ ವಿವರ ನೀಡಿದ್ದೆ. ಅದನ್ನು ಬಳಸಿಕೊಂಡು ಆತ, ಹಣ ವರ್ಗಾಯಿಸಿಕೊಂಡಿದ್ದಾನೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು