ಶುಕ್ರವಾರ, ಅಕ್ಟೋಬರ್ 29, 2021
20 °C
ನಾಲ್ವರು ವಕೀಲರೂ ಕೃತ್ಯದಲ್ಲಿ ಭಾಗಿ

ಗರುಡಾ ಮಾಲ್‌ ‍ಪಕ್ಕದ ಸರ್ಕಾರಿ ಜಾಗ: ₹20 ಕೋಟಿ ಆಸ್ತಿಗೆ ‘ನಕಲಿ ದಾವೆ’

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ನ್ಯಾಯಾಲಯದಲ್ಲಿ ನಕಲಿ ದಾವೆ ಹೂಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೇರಿದ್ದ ₹ 20 ಕೋಟಿಗೂ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಕಬಳಿಸಲು ಭೂಗಳ್ಳರು ಯತ್ನಿಸಿದ್ದು, ಈ ಕೃತ್ಯದಲ್ಲಿ ನಾಲ್ವರು ವಕೀಲರೂ ಭಾಗಿಯಾಗಿರುವುದು ಪತ್ತೆಯಾಗಿದೆ.

ವಾರಸುದಾರರು ಉಪಯೋಗಿಸದ ಖಾಲಿ ಜಾಗವನ್ನು ಕೊಳ್ಳೆ ಹೊಡೆಯಲು ನ್ಯಾಯಾಲಯದಲ್ಲಿ ನಕಲಿ ದಾವೆ ಹೂಡುತ್ತಿದ್ದ ಭೂಗಳ್ಳರ ಜಾಲವನ್ನು ಇತ್ತೀಚೆಗಷ್ಟೇ ಸಿಐಡಿ ಪೊಲೀಸರು ಭೇದಿಸಿದ್ದರು. ಈ ಜಾಲವೇ ಬಿಬಿಎಂಪಿಗೆ ಸೇರಿದ್ದ ಅಶೋಕನಗರದ 5ನೇ ಬೀದಿಯಲ್ಲಿರುವ ನಿವೇಶನ ಸಂಖ್ಯೆ 27ರ ಜಾಗವನ್ನು ಲಪಟಾಯಿಸಲು ಯತ್ನಿಸಿರುವ ಮಾಹಿತಿ ಹೊರಬಿದ್ದಿದೆ.

ಬಿಬಿಎಂಪಿ ಜಾಗದ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ನ್ಯಾಯಾಲಯದಲ್ಲಿ ನಕಲಿ ದಾವೆ ಹೂಡಿ ಡಿಕ್ರಿ ಪಡೆದು ಆಸ್ತಿ ಕಬಳಿಸಲು ಪ್ರಯತ್ನಿಸಿದ್ದ ಆರೋಪದಡಿ ನಾಲ್ವರು ವಕೀಲರು ಸೇರಿ ಏಳು ಮಂದಿ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿದೆ.

‘ಬಿಬಿಎಂಪಿ ವಾರ್ಡ್‌ ನಂಬರ್– 111ರ ಕಂದಾಯ ನಿರೀಕ್ಷಕ ಎಚ್‌.ಎಲ್. ರಾಮಮೂರ್ತಿ ಎಂಬುವರು ಭೂಗಳ್ಳರ ಜಾಲದ ವಿರುದ್ಧ ದೂರು ನೀಡಿದ್ದಾರೆ. ಆರೋಪಿಗಳಾದ ಸೆಂದಿಲ್‌ಕುಮಾರ್, ಸಿ.ಎನ್. ನಾಗರಾಜು, ಬಾಬು, ವಕೀಲರಾದ ಸರೋಜಿನಿ ದೋತ್ರಾ, ಕಾಂತಮ್ಮ, ವೆಂಕಟಪ್ಪ ಹಾಗೂ ಚಿತ್ರಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅಶೋಕ ನಗರ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

‘ಮೋಸದ ಮಾರ್ಗದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆಯುತ್ತಿದ್ದ ಬಗ್ಗೆ ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಲಘು ಪ್ರಕರಣಗಳ ನ್ಯಾಯಾಲಯದ (ಎಸ್‌ಸಿಸಿಎಚ್) ರಿಜಿಸ್ಟ್ರಾರ್ ಆರ್. ಧನಲಕ್ಷ್ಮಿ ಅವರು ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದರು. 2020ರ ಡಿಸೆಂಬರ್ 7ರಂದು ಎಫ್‌ಐಆರ್ ದಾಖಲಾಗಿತ್ತು. ಇದರ ತನಿಖೆ ಹೊಣೆಯನ್ನು ಸಿಐಡಿಗೆ ವಹಿಸಲಾಗಿದೆ. ಈಗ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನೂ ಸಿಐಡಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಬಾಡಿಗೆ ಕರಾರು ಪತ್ರ ಸೃಷ್ಟಿಸಿ ಕೃತ್ಯ: ‘ಬಿಬಿಎಂಪಿ ಒಡೆತನದ ಜಾಗದ ಮೇಲೆ 2016ರ ಡಿಸೆಂಬರ್ 15ರಂದು ಬಾಡಿಗೆ ಕರಾರು ಪತ್ರ ಸೃಷ್ಟಿಸಿದ್ದ ಆರೋಪಿಗಳು, ಅದನ್ನು ಬಳಸಿಕೊಂಡು ದಸ್ತಾವೇಜು ಸಿದ್ಧಪಡಿಸಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದು ಮೂಲಗಳು ಹೇಳಿವೆ.

‘ಬಾಡಿಗೆ ಕರಾರು ಉಲ್ಲಂಘಿಸಿರುವುದಾಗಿ ಹೇಳಿ ಆರೋಪಿ ಸಿ.ಎನ್‌. ನಾಗರಾಜು ಅವರಿಗೆ ವಕೀಲೆ ಸರೋಜಿನಿ ದೋತ್ರಾ ಮೂಲಕ ನೋಟಿಸ್‌ ಕೊಡಿಸಲಾಗಿತ್ತು. ಅದರ ಆಧಾರದಲ್ಲಿ 8ನೇ ಹೆಚ್ಚುವರಿ ಲಘು ವ್ಯವಹಾರ ನ್ಯಾಯಾಲಯದಲ್ಲಿ ವಾದಿ– ಪ್ರತಿವಾದಿಯಾಗಿ ದಾವೆ ಸಹ ಹೂಡಲಾಗಿತ್ತು. ಈ ಸಂಗತಿ ಬಿಬಿಎಂಪಿ ಅಧಿಕಾರಿಗಳಿಗೆ ಗೊತ್ತೇ ಇರಲಿಲ್ಲ.’

‘ನಕಲಿ ಖಾತಾ ದೃಢೀಕರಣ ಹಾಗೂ ಖಾತಾ ಎಕ್ಸ್–ಟ್ರಾಕ್ಟನ್‌ ಅನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿದ್ದ ಆರೋಪಿಗಳು, ಸದರಿ ಸ್ವತ್ತನ್ನು ತೆರವುಗೊಳಿಸಲು ಆದೇಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು. ವಾದಿ–ಪ್ರತಿವಾದಿ ಪರವಾಗಿ ವಕೀಲರೇ ವಿಚಾರಣೆಗೆ ಹಾಜರಾಗಿದ್ದರು. ತಮ್ಮದೇ ಜಾಗವೆಂದು ಹೇಳಿದ್ದ ವಾದಿ, ಪ್ರತಿವಾದಿ ಜೊತೆ ರಾಜಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಅದನ್ನು ಮನ್ನಿಸಿದ್ದ ನ್ಯಾಯಾಲಯ, ಡಿಕ್ರಿ ಆದೇಶ ಹೊರಡಿಸಿತ್ತು. ಅದೇ ಡಿಕ್ರಿ ಬಳಸಿಕೊಂಡು ಆರೋಪಿಗಳು, ಬಿಬಿಎಂಪಿ ಜಾಗವನ್ನು ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದರು. ಈ ಸಂಗತಿ ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳಿಗೆ ಗೊತ್ತಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘116 ಪ್ರಕರಣ; ವಕೀಲರನ್ನು ಬಂಧಿಸಿದ್ದ ಸಿಐಡಿ’
ನಕಲಿ ದಾವೆ ಹೂಡಿ ಜಾಗ ಕಬಳಿಸಿದ್ದ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಈಗಾಗಲೇ ಹೈಕೋರ್ಟ್‌ಗೆ ಪ್ರಾಥಮಿಕ ತನಿಖಾ ವರದಿ ಸಲ್ಲಿಸಿದ್ದಾರೆ.

‘ಬೆಂಗಳೂರು ಹಾಗೂ ಹೊರವಲಯದಲ್ಲಿರುವ ₹ 600 ಕೋಟಿ ಮೌಲ್ಯದ ಜಾಗವನ್ನು ಕಬಳಿಸಲು 116 ನಕಲಿ ದಾವೆಗಳನ್ನು ಹೂಡಿದ್ದ ಸಂಗತಿಯನ್ನು ಪತ್ತೆ ಮಾಡಲಾಗಿತ್ತು. ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ವಕೀಲರನ್ನೂ ಬಂಧಿಸಲಾಗಿತ್ತು. ನಾಲ್ವರೂ ಜಾಮೀನು ಪಡೆದುಕೊಂಡಿದ್ದಾರೆ’ ಎಂದು ಸಿಐಡಿ ಮೂಲಗಳು ಹೇಳಿವೆ.

'ಯಶವಂತಪುರ ಬಳಿಯ ಗೋಕುಲ 1ನೇ ಹಂತದ ಆಂಜನೇಯ ದೇವಸ್ಥಾನ ಬಳಿ ಇರುವ ಷಾ ಹರಿಲಾಲ್ ಭಿಕಾಬಾಯಿ ಅಂಡ್ ಕಂಪನಿಗೆ ಸೇರಿದ್ದ ಜಾಗ ಕಬಳಿಸಲು ಆರೋಪಿಗಳು ಯತ್ನಿಸಿದ್ದರು. ಜಾಲದ ವಿರುದ್ಧ ಕಂಪನಿ, ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೆಲವರು ನಕಲಿ ಮೊಕದ್ದಮೆ ದಾಖಲಿಸಿ ರಾಜಿ ಡಿಕ್ರಿ ಪಡೆಯುತ್ತಿದ್ದ ಸಂಗತಿಯನ್ನು ಪತ್ತೆ ಹಚ್ಚಿತ್ತು. ಎಫ್‌ಐಆರ್ ದಾಖಲಿಸಿ ಸಿಐಡಿ ಅಧಿಕಾರಿಗಳಿಂದ ವಿಶೇಷ ತನಿಖೆ ನಡೆಸುವಂತೆಯೂ ನಿರ್ದೇಶನ ನೀಡಿತ್ತು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು